Property tax: ಬೆಂಗಳೂರು ನಗರದ ತೆರಿಗೆ ಪಾವತಿದಾರರಿಗೆ ಗುಡ್‌ನ್ಯೂಸ್
ಬೆಂಗಳೂರು, ಸೆಪ್ಟೆಂಬರ್ 12: ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಗುಡ್‌ನ್ಯೂಸ್ ಒಂದನ್ನು ನೀಡಿದೆ. ಬಾಕಿ ಆಸ್ತಿ ತೆರಿಗೆ ಪಾವತಿ ಬಗ್ಗೆ ನಗರಾಭಿವೃದ್ಧಿ ಇಲಾಖೆ ಆದೇಶವೊಂದನ್ನು ಹೊರಡಿಸಿದೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವತ್ತಿನ ಮಾಲೀಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಇಚ್ಚಿಸಿದ್ದು, ಸರ್ಕಾರದ ಆದೇಶದಿಂದ ಅವರಿಗೆ ಅನುಕೂಲವಾಗಲಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಅಧಿಕೃತ ಆದೇಶ ಹೊರಡಿಸಲಾಗಿದೆ.
ಆಗಸ್ಟ್ 5ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಹೆಚ್. ಎಸ್. ಶಿವಕುಮಾರ್, ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ, ಇಲಾಖೆ (ಬಿಬಿಎಂಪಿ-2 ಮತ್ತು ಸಮನ್ವಯ) ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಆಸ್ತಿ ತೆರಿಗೆ ಪಾವತಿ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ ಹಲವಾರು ವರ್ಷಗಳಿಂದ ತಪ್ಪಾಗಿ ಆಸ್ತಿ ತೆರಿಗೆ ಘೋಷಣೆ ಮಾಡಿಕೊಂಡಿರುವ ಹಲವಾರು ಪ್ರಕರಣಗಳಿದ್ದು, ಇಂತಹ ಪ್ರಕರಣಗಳಲ್ಲಿ ಬಾಕಿ, ದಂಡ ಮತ್ತು ಬಡ್ಡಿ ಎಂದು ವಿಧಿಸುತ್ತಿದ್ದ ಮೊತ್ತವು ದೊಡ್ಡ ಪ್ರಮಾಣದಾಗಿದ್ದರಿಂದ ಸ್ವತ್ತಿನ ಮಾಲೀಕರು ಆರ್ಥಿಕ ದುಸ್ಥಿತಿಯನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ನಿವಾರಿಸಲು ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ One Time Settlement (OTS) ಯೋಜನೆಯನ್ನು ದಿನಾಂಕ 31-07-2024ರವರೆಗೆ ಜಾರಿಗೆ ತರಲಾಗಿದೆ.
ಆದೇಶವೇನು?; ದಿನಾಂಕ 07-03-20245 ಕರ್ನಾಟಕ ರಾಜ್ಯ ಪತ್ರದ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಬಿಬಿಎಂಪಿ ಅಧಿನಿಯಮ, 2020ಕ್ಕೆ ತಿದ್ದುಪಡಿಗಳನ್ನು ತರಲಾಗಿದೆ. ದಿನಾಂಕ 22-02-2024ರ ಸರ್ಕಾರಿ ಆದೇಶದಲ್ಲಿನ ಅಂಶಗಳನ್ನು ಈ ತಿದ್ದುಪಡಿಯ ಮೂಲಕ ಬಿಬಿಎಂಪಿ ಅಧಿನಿಯಮ, 2020ರಲ್ಲಿ ಸೇರ್ಪಡೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ವತ್ತಿನ ಮಾಲೀಕರು OTS ಯೋಜನೆಯ ಪ್ರಯೋಜನವನ್ನು ಪಡೆಯಲು ಇಚ್ಚಸಿದ್ದು, ಯೋಜನೆಯ ಕೊನೆಯ ದಿನಗಳಲ್ಲಿ ಹೆಚ್ಚಿನ ತೆರಿಗೆದಾರರು ಆನ್‌ಲೈನ್ ಮೂಲಕ ತೆರಿಗೆ ಪಾವತಿಸಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ಆಸ್ತಿ ತೆರಿಗೆ ಪಾವತಿ ಸಾಧ್ಯವಾಗಿರುವುದಿಲ್ಲ. ಆದಕಾರಣ ತೆರಿಗೆದಾರರ ಕೋರಿಕೆಯ ಹಿನ್ನೆಲೆಯಲ್ಲಿ OTS ಯೋಜನೆಯನ್ನು ದಿನಾಂಕ 30-09-2024ರವರೆವಿಗೆ ವಿಸ್ತರಿಸಿ ಆದೇಶಿಸಲಾಗಿದೆ.
ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ ಆಸ್ತಿ ತೆರಿಗೆಯನ್ನು ಘೋಷಿಸಿಕೊಂಡಿರುವ ಸ್ವತ್ತಿನ ಮಾಲೀಕರು ಅದನ್ನು ಮೇಲ್ಮುಖವಾಗಿ ಸ್ವಯಂ ಪರಿಷ್ಕರಿಸಬಯಸಿದಲ್ಲಿ, ಅದಕ್ಕೆ ನಿಯಮಗಳಲ್ಲಿ ಅವಕಾಶವಿರದ ಕಾರಣ ಅನಗತ್ಯ ವಿಳಂಬವಾಗುತ್ತಿದ್ದು. ಇಂತಹ ಪರಿಷ್ಕರಣೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿಕೆ ಇರುತ್ತದೆ. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ತೆರಿಗೆ ಸಂಗ್ರಹ ಮಾಡಿದ ಸಂದರ್ಭದಲ್ಲಿ ಹಾಗೂ ಪರಿಷ್ಕರಣೆ ಪ್ರಕರಣಗಳಲ್ಲಿ ಸುಸ್ತಿದಾರರ ಪ್ರಕರಣಗಳಲ್ಲಿರುವಂತೆಯೇ ರೂ.100 ದಂಡದ ಮೊತ್ತವನ್ನು ವಿಧಿಸಬೇಕೆಂಬ ಕೋರಿಕೆಯೂ ಇರುತ್ತದೆ.
ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಾಕಿ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ One Time Settlement (OTS) ಯೋಜನೆಯನ್ನು ಷರತ್ತುಗಳೊಂದಿಗೆ ದಿನಾಂಕ 30-11-2024ರವರೆವಿಗೆ ವಿಸ್ತರಿಸಿ ಆದೇಶಿಸಿದೆ.
ಷರತ್ತುಗಳು
* ಆಸ್ತಿ ತೆರಿಗೆಯನ್ನು ಸ್ಮಯಂ ಘೋಷಿಸಿರುವ ಸ್ವತ್ತಿನ ಮಾಲೀಕರಿಗೆ ತಾವು ಇನ್ನೂ ಹೆಚ್ಚಿನ ಆಸ್ತಿ ತೆರಿಗೆಯನ್ನು ಪಾವತಿಸಬೇಕಿರುತ್ತದೆ ಎಂದು ಕಂಡುಬಂದಲ್ಲಿ ಸ್ವಯಂ ಮೇಲು ಪರಿಷ್ಕರಣೆಗೆ ಅವಕಾಶ ಕಲ್ಪಿಸಿ ಆದೇಶಿಸಿದೆ. ಇದನ್ನ ಸ್ವತ್ತಿನ ಮಾಲೀಕರು ಸಲ್ಲಿಸಿರುವ ತೆರಿಗೆ ಘೋಷಣೆ ಎಂದು ಪರಿಗಣಿಸಲಾಗುತ್ತದೆ. ಆ ಬಳಿಕವೂ ಬಿಬಿಎಂಪಿ ಅಧಿನಿಯಮ, 2020ರ ಕಲಂ 144 ಉಪಕಲಂ (15) ಅಡಿ ಬಿಬಿಎಂಪಿಗೆ ತೆರಿಗೆಯನ್ನು ಪರಿಷ್ಕರಿಸಲು ಅವಕಾಶವಿರುತ್ತದೆ.
* OTS ಅವಧಿಯಲ್ಲಿ ಪರಿಷ್ಕರಣೆ, ತೆರಿಗೆ ನಿರ್ಧಾರಿತವಾಗದ ಆಸ್ತಿದಾರರು ಮತ್ತು ಸುಸ್ಥಿದಾರರು ಈ ಎಲ್ಲಾ ಪ್ರಕರಣಗಳಲ್ಲಿಯೂ ವಾರ್ಷಿಕ ರೂ.100 ದಂಡವನ್ನು ನಿಗದಿಪಡಿಸಲಾಗಿದೆ. ಅಲ್ಲದೇ ಪಾವತಿಸಬೇಕಾದ ಬಡ್ಡಿ ಮೊತ್ತವನ್ನು ಈ ಅವಧಿಯಲ್ಲಿ ರದ್ದು ಪಡಿಸಲಾಗಿದೆ.
* ದಿನಾಂಕ 22-02-2024ರ ಸರ್ಕಾರದ ಆದೇಶದಲ್ಲಿ OTS ಯೋಜನೆಯನ್ನು ಜಾರಿಗೊಳಿಸಿದಾಗಿನಿಂದ ಹೆಚ್ಚಿನ ದಂಡವನ್ನು (ಅಂದರೆ ಆಸ್ತಿಗಾಗಿ ವರ್ಷಕ್ಕೆ ರೂ.100 ಕ್ಕಿಂತ ಹೆಚ್ಚಿನ ದಂಡದ ಮೊತ್ತ) ಪಾವತಿಸಿದ ಎಲ್ಲಾ ಪ್ರಕರಣಗಳಲ್ಲಿ ಪ್ರಸ್ತುತ ಆದೇಶಿಸಿರುವ ದಂಡಕ್ಕೆ ಹೋಲಿಸಿದಾಗಿನ ವ್ಯತ್ಯಯದ ಮೊತ್ತವನ್ನು ಅದೇ ನಿರ್ದಿಷ್ಟ ಆಸ್ತಿಯ ಅಥವಾ ಅದೇ ನಿರ್ದಿಷ್ಟ ಮಾಲೀಕರ ಬಾಕಿ ತೆರಿಗೆ ಮೊತ್ತಕ್ಕೆ ಅಥವಾ ಬಿಬಿಎಂಪಿಯ ಭವಿಷ್ಯದ ತೆರಿಗೆ ಮೊತ್ತಕ್ಕೆ ಹೊಂದಾಣಿಕೆ ಮಾಡತಕ್ಕದ್ದು.












Click it and Unblock the Notifications