ಒಂದು ಕಡೆ ಡೆಂಗ್ಯೂ ಉಲ್ಬಣ, ಇನ್ನೊಂದು ಕಡೆ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಅಡೆನೋ ವೈರಸ್
ಬೆಂಗಳೂರು, ಸೆ 5: ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನದ ಪರಿಣಾಮ ಸಾಕಷ್ಟು ಜನರ ಆರೋಗ್ಯದಲ್ಲಿ ವ್ಯತ್ಯಯ ಆಗುತ್ತಿದೆ. ಒಂದು ಕಡೆ ಸೊಳ್ಳೆ ಕಾಟದಿಂದ ಸಿಟಿಯಲ್ಲಿ ಡೆಂಗ್ಯೂ ಉಲ್ಬಣ ಆಗುತ್ತಾ ಇದ್ದರೆ, ಇನ್ನೊಂದು ಕಡೆ ಮಳೆ, ಚಳಿ, ಬಿಸಿಲು ಅಂತ ದಿನೇ ದಿನೇ ಚೇಂಜ್ ಆಗುತ್ತಾ ಇರುವ ಹವಾಮಾನ ಮಕ್ಕಳಲ್ಲಿ ಅಡೆನೋ ಸೋಂಕು ಕಾಣಿಸಿ ಕೊಳ್ಳಲು ಕಾರಣ ಆಗುತ್ತಿದೆ.
ಹವಾಮಾನದ ಎಫೆಕ್ಟ್ ಮಕ್ಕಳಲ್ಲಿ ಈ ಸೋಂಕು ಇತ್ತೀಚಿನ ದಿನಗಳಲ್ಲಿ ಒನ್ ಟು ಡಬಲ್ ಆಗುತ್ತಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿಅಡೆನೋ ವೈರಸ್ ತುತ್ತಾಗಿ ಬಳಲುತ್ತಿರುವ ಮಕ್ಕಳ ಸಂಖ್ಯೆಯೇ ಅತೀ ಹೆಚ್ಚು. ಬಹಳ ವೇಗದಲ್ಲಿ ಹರಡುತ್ತಿರುವ ಅಪಾಯಕಾರಿ ಅಡೆನೊ ವೈರಸ್ ಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ನಗರದಲ್ಲಿ ಹೆಚ್ಚಳ ಆಗುತ್ತಿರುವುದು ಅನೇಕರ ಎದೆ ಬಡಿತಕ್ಕೆ ಕಾರಣ ಆಗಿದೆ.

ಇನ್ನೂ ಬೆಂಗಳೂರಿನ ಫೇಮಸ್ ಮಕ್ಕಳ ಆಸ್ಪತ್ರೆ ಇಂದಿರಾಗಾಂಧಿ ಆಸ್ಪತ್ರೆಯಲ್ಲೇ ಹೆಚ್ಚೆಚ್ಚು ಕೇಸ್ ದಾಖಲಾಗುತ್ತಿದೆ. ಜೊತೆಗೆ ಕೆಸಿ ಜನರೆಲ್ ಆಸ್ಪತ್ರೆ ಕೂಡ ಇದರಿಂದ ಹೊರತಾಗಿಲ್ಲ. ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ನಾನಾ ಸಮಸ್ಯೆಯಿಂದ ಚಿಕಿತ್ಸೆ ದಾಖಲಾಗಿರುವ ಮಕ್ಕಳಲ್ಲಿ ಶೇ.20 ಕ್ಕಿಂತ ಹೆಚ್ಚು ಮಕ್ಕಳು ಅಡೆನೋ ವೈರಸ್ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ಇಷ್ಟೊಂದು ಸದ್ದು ಮಾಡುತ್ತಿರುವ ಈ ವೈರಸ್ ಮಕ್ಕಳಿಗೆ ತಗುಲಿದೆ ಅಂತ ಹೇಗೆ ಗೊತ್ತಾಗುತ್ತೆ?
ಇದರ ಲಕ್ಷಣಗಳು ಏನು ಅಂತ ನೋಡುವುದಾದರೆ ಸಾಮಾನ್ಯ ಶೀತ ಅಥವಾ ಜ್ವರ ಆರಂಭಿಕ ಲಕ್ಷಣವಾಗಿರುತ್ತದೆ. ಮುಂದುವರಿದು ಗಂಟಲು ಕೆರೆತ ಮತ್ತು ನೋವು ಕಾಣಿಸಿ ಕೊಳ್ಳುತ್ತದೆ. ಅದರೆ ಜೊತೆಗೆ ಬ್ರಾಂಕೈಟಿಸ್ ಅಂದ್ರೆ ಶ್ವಾಸಕೋಶದಲ್ಲಿನ ಶ್ವಾಸನಾಳದ ಉರಿಯೂತ, ಹಾಗೂ ನ್ಯುಮೋನಿಯಾ ಅಂದ್ರೆ ಶ್ವಾಸಕೋಶದ ಸೋಂಕು ಕಾಣಿಸಿ ಕೊಳ್ಳುತ್ತದೆ. ಹಾಗೇ ಗುಲಾಬಿ ಕಣ್ಣು , ತೀವ್ರವಾದ ಗ್ಯಾಸ್ಟ್ರೊ ಎಂಟರೈಟಿಸ್ ಇದರ ಪ್ರಮುಖ ಗುಣ ಲಕ್ಷಣವಾಗಿರುತ್ತದೆ.
ಈ ವೈರಸ್ ಹರಡುವುದು ಹೇಗೆ?
ಸಾಮಾನ್ಯವಾಗಿ ಶಾಲೆಗಳಲ್ಲಿ , ಮಕ್ಕಳು ಗುಂಪಾಗಿ ಸೇರುವ ಕಡೆ ಈ ವೈರಸ್ ಹರಡಲಿದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಹನಿಗಳು ಗಾಳಿಯಲ್ಲಿ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ. ಇಲ್ಲವಾದರೆ ಆ ವೈರಸ್ ಹನಿಗಳು ಯಾವುದೇ ವಸ್ತುವಿನ ಮೇಲೆ ಬಿದ್ದಿದ್ದು, ಅದನ್ನು ಮುಟ್ಟಿದವರು ಅದೇ ಕೈಗಳಿಂದ ಮುಖ, ಕಣ್ಣು, ಮೂಗು, ಬಾಯಿ ಮುಟ್ಟಿಕೊಂಡಾಗ ಅವರಿಗೆ ಕೂಡ ವೈರಸ್ ಬರುವ ಚಾನ್ಸಸ್ ಅಧಿಕವಾಗಿರುತ್ತದೆ.

ವೈದ್ಯರು ಹೇಳುವ ಪ್ರಕಾರ ಅಂದರೆ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಸಂಜಯ್ ಹೇಳೋ ಪ್ರಕಾರ "ಇದೊಂದು ಸೀಸನಲ್ ಆಗಿ ಕಾಣಿಸಿ ಕೊಳ್ಳುವ ಜ್ವರ ಅಷ್ಟೇ. ಆತಂಕ ಪಡುವ ಅಗತ್ಯ ಇಲ್ಲ. ಆದರೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು.ನಿರ್ಲಕ್ಷ್ಯ ಕೂಡ ಮಾಡೋ ಹಾಗಿಲ್ಲ" ಅಂತ ಮಾಹಿತಿ ಹಂಚಿ ಕೊಂಡಿದ್ದಾರೆ.
ದೇಹ ನಿರ್ಜಲೀಕರಣಗೊಳ್ಳಲಿದೆ
ಅಡಿನೋ ವೈರಸ್ ಸೋಂಕಿಗೆ ಒಳಗಾದವರಲ್ಲಿ ಜ್ವರದ ಜತೆಗೆ ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳುವುದರಿಂದ ದೇಹ ನಿರ್ಜಲೀಕರಣಗೊಳ್ಳಲಿದೆ. ಸೋಂಕಿಗೆ ತುತ್ತಾದವರಿಗೆ ಸಾಕಷ್ಟು ನೀರು, ಹಣ್ಣಿನ ರಸನೀಡಬೇಕು. ಶೀತ ಕಾಣಿಸಿಕೊಳ್ಳುವುದರಿಂದ ವೈದ್ಯರ ಸಲಹೆಯನ್ನ ಪಾಲಿಸಬೇಕು. ಮಗುವಿನ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು.
ಬಿಸಿ ಹಾಗೂ ತಾಜಾ ಆಹಾರ ನೀಡಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ನೀಡಬಾರದು. ಬದಲಾಗುತ್ತಿರುವ ಹವಾಮಾನದ ಪ್ರತಿಕೂಲ ಪರಿಣಾಮ ಸದ್ಯ ಅಡಿನೋ ವೈರಸ್ ಉಪಟಳ ಹೆಚ್ಚುತ್ತಿದ್ದು ವೈರಸ್ ಕಾಟದಿಂದ ಮುಕ್ತಿ ಸಿಗಲಿ ಅಂತ ಜನ ಬೇಡಿ ಕೊಳ್ತಾ ಇದ್ದಾರೆ..












Click it and Unblock the Notifications