ಮದುವೆಗಿತ್ತು ಕೆಲವೇ ಕ್ಷಣ, ಮಾಯವಾಗಿತ್ತು ಆಭರಣ!
ಬೆಂಗಳೂರು, ಸೆ. 12 : ಇನ್ನೇನು ಮದುವೆಗೆ ಒಂದೆರಡು ಗಂಟೆಗಳ ಕಾಲ ಬಾಕಿಯಿದೆ. ಗಟ್ಟಿ ಮೇಳ ಬಾರಿಸುವವರು ಸಿದ್ಧರಾಗಿದ್ದಾರೆ. ಮದುಮಗಳು ಶೃಂಗಾರ ಮಾಡಿಕೊಳ್ಳುತ್ತಿದ್ದಾಳೆ. ಕೊನೆಯದಾಗಿ ಆಭರಣಗಳನ್ನು ಧರಿಸಿ ಹೊರಬರಲು ನೋಡಿದರೆ ಆಭರಣದ ಲಾಕರ್ ಖಾಲಿ ಖಾಲಿ!
ಇದು ಯಾವ ಸಿನಿಮಾದ ದೃಶ್ಯವಲ್ಲ. ಜೆಪಿ ನಗರದ ಕಲ್ಯಾಣ ಮಂಟಪದಲ್ಲಿ ಇಂಥದ್ದೊಂದು 'ಧೂಮ್' ಚಲನಚಿತ್ರದ ರೀತಿಯ ಕಳ್ಳತನ ನಡೆದಿದೆ. ಅದು ಕಡಿಮೆ ಮೊತ್ತದ್ದೇನಲ್ಲ. ಬರೋಬ್ಬರಿ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಅಪಹರಿಸಲಾಗಿದೆ. ಬಾಗಿಲು ಒಡೆಯದೇ, ಕನ್ನ ಹಾಕದೇ, ಯಾರನ್ನೂ ಬೆದರಿಸದೆ ಕೈಚಳಕ ತೋರಿಸಲಾಗಿದೆ.(ಧವನಂ ಜ್ಯುವೆಲರ್ಸ್ ವಿರುದ್ಧ ವಂಚನೆ ಕೇಸ್)

ಆಂಧ್ರ ಪ್ರದೇಶ ಮೂಲದ ಉದ್ಯಮಿ ಕುಟುಂಬವೊಂದು ಆಭರಣ ಕಳೆದುಕೊಂಡಿದ್ದು ಈ ಬಗ್ಗೆ ಜೆಪಿ ನಗರ ಠಾಣೆಗೆ ದೂರು ದಾಖಲಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಬಿ.ಎಸ್.ಲೋಕೇಶ್ ಕುಮಾರ್ ತಿಳಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ಉದ್ಯಮಿಯೊಬ್ಬರ ಮಗಳ ಮದುವೆ ಗುರುವಾರ ಬೆಳಗಿನ ಜಾವ 3 ಗಂಟೆಗೆ ನಿಗದಿಯಾಗಿತ್ತು. ಬುಧವಾರ ರಾತ್ರಿ ಔತಣಕೂಟ ಮುಗಿಸಿ ಮದುಮಗಳು ಆಭರಣಗಳನ್ನು ತೆಗೆದಿರಿಸಿದ್ದಾಳೆ. ಗುರುವಾರ ಬೆಳಗ್ಗೆ ಮದುವೆಗೆ ಅಲಂಕಾರ ಮಾಡಿಕೊಂಡು ಒಡವೆಗಾಗಿ ತಡಕಾಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.(ಶುಭ್ ಜ್ಯುವೆಲ್ಲರ್ಸ್ ಮಳಿಗೆ ಮೇಲೆ 'ಐಟಿ' ದಾಳಿ)
ಔತಣಕೂಟ ಮುಗಿದ ನಂತರ ವಧುವಿನ ಪಾಲಕರು ಆಭರಣಗಳನ್ನು ಸುರಕ್ಷಿತವಾಗಿ ಲಾಕರ್‌ನಲ್ಲಿರಿಸಿದ್ದರು. ಲಾಕರ್‌ಗೆ ಒಟ್ಟು ಮೂರು ಕೀಗಳಿದ್ದು ಅದರಲ್ಲಿ ಒಂದು ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. ಹುಡುಗಿಯ ಹತ್ತಿರದ ಸಂಬಂಧಿಗಳಲ್ಲೇ ಯಾರೋ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications