ವೋಟ್ ಹಾಕದೇ ಇರುವುದಕ್ಕಿಂತ, ‘ನೋಟಾ’ ಹಾಕುವುದು ಮೇಲು!
ಬೆಂಗಳೂರು: ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷ 135 ಸ್ಥಾನ ಪಡೆದು ಭರ್ಜರಿ ಬಹುಮತ ಗಳಿಸಿದೆ. ಆದರೆ ಕರ್ನಾಟಕ ಚುನಾವಣೆಯಲ್ಲಿ ಕನ್ನಡಿಗರ ಗಮನ ಸೆಳೆಯದ ವಿಚಾರ ಒಂದು ರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಏನದು ಅಂದ್ರಾ? ಅದೇ ನೋಟಾ. ನಿಮಗೆ ಯಾವುದೇ ಅಭ್ಯರ್ಥಿ ಇಷ್ಟವಿಲ್ಲ ಅಂದ್ರೆ ಅಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗೆ ಪಾಠ ಕಲಿಸಲು 'ನೋಟಾ' ಎಂಬ ಅಸ್ತ್ರ ಬಳಸಿದರೆ ಸಾಕು!
ಕೆಲವರು ಬಿಜೆಪಿ ಇಷ್ಟಪಡ್ತಾರೆ, ಕೆಲವ್ರು ಕಾಂಗ್ರೆಸ್ ಇಷ್ಟಪಡ್ತಾರೆ, ಇನ್ನೂ ಕೆಲವರಿಗೆ ಜೆಡಿಎಸ್ ಇಷ್ಟವಾಗುತ್ತೆ. ಆದರೆ ಈಗಿನ ಹೊಲಸು ರಾಜಕೀಯದಲ್ಲಿ, ಭ್ರಷ್ಟ ವ್ಯವಸ್ಥೆಯಲ್ಲಿ ಈಗಿನ ಎಲ್ಲಾ ಪಕ್ಷಗಳ ವಿರುದ್ಧ ಭಾರತದ ಬಹುತೇಕ ಪ್ರಜೆಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಕೇಂದ್ರ ಅಥವಾ ರಾಜ್ಯದಲ್ಲಿ ಸರ್ಕಾರ ರಚಿಸಲಿ ಲಕ್ಷ ಲಕ್ಷ ಕೋಟಿ ಲೂಟಿ ಹೊಡೆದ ಆರೋಪ ಕೇಳಿಬರುತ್ತೆ. ಹೀಗಿದ್ದಾಗ ಏನು ಮಾಡೋದು, ನಾವು ವೋಟ್ ಹಾಕಲ್ಲ ಅಂತಾರೆ ಜನ. ಇಂತಹವರಿಗೆ ಇಲ್ಲಿ 'ನೋಟಾ' ಎಂಬ ಬ್ರಹ್ಮಾಸ್ತ್ರ ಇರೋದೆ ಗೊತ್ತಿರಲ್ಲ.

ಕರ್ನಾಟಕದಲ್ಲಿ 'ನೋಟಾ' ಬ್ರಹ್ಮಾಸ್ತ್ರದ ಸಾಧನೆ
ಹೌದು, ಈ ಬಾರಿ ಚುನಾವಣೆ ಕೇವಲ ಕಾಂಗ್ರೆಸ್‌ನ 135 ಸ್ಥಾನಗಳಿಗೆ ಸೀಮಿತವಾಗಿಲ್ಲ. ಬದಲಾಗಿ 'ನೋಟಾ' ಎಂಬ ಬ್ರಹ್ಮಾಸ್ತ್ರದ ವಿಚಾರವಾಗಿಯೂ ಇಡೀ ದೇಶದಲ್ಲಿ ಕರ್ನಾಟಕ ಚುನಾವಣೆ ಚರ್ಚೆಗೆ ಬಂದಿದೆ. ಕಾರಣ ಏನಂದ್ರೆ ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು 'ನೋಟಾ' ಮತಗಳ ಸಂಖ್ಯೆ ಬರೋಬ್ಬರಿ 2.6 ಲಕ್ಷ! ಹೌದು ಇದಕ್ಕಿಂತ ಇನ್ನೊಂದು ಆಶ್ಚರ್ಯಕರ ಸಾಧನೆ 'ನೋಟಾ' ಮತಗಳ ಚಲಾವಣೆ ವಿಚಾರದಲ್ಲಿ ಕೇಳಿಬಂದಿದ್ದು ಆ ಬಗ್ಗೆ ಮಾಹಿತಿ ಮುಂದೆ ಇದೆ ಓದಿ.
'ನೋಟಾ' ಹಾಕುವುದು ಮೇಲು!
ನೋಟಾ ಆಯ್ಕೆ 2013ರಲ್ಲಿ ಪರಿಚಯಿಸಲಾಯಿತು. ಇದು ತನ್ನದೇ ಆದ ಚಿಹ್ನೆ ಹೊಂದಿದೆ. 2013ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣಾ ಆಯೋಗ EVMಗಳಲ್ಲಿ ನೋಟಾ ಬಟನ್ ಅನ್ನು ಮತದಾನದ ಫಲಕದಲ್ಲಿ ಆಯ್ಕೆಯಾಗಿ ಸೇರಿಸಿದೆ. ಹೀಗೆ ಸದ್ದೇ ಇಲ್ಲದೆ 'ನೋಟಾ' ಎಂಬ ಬ್ರಹ್ಮಾಸ್ತ್ರ 2013ರಿಂದ ಚಾಲ್ತಿಗೆ ಬಂದಿದ್ದು, ನೋಟಾ ಆಯ್ಕೆ ಬಗ್ಗೆ ಗೊತ್ತಿರುವ ಮತದಾರರು ಈಗ ಅದನ್ನೇ ಅಸ್ತ್ರವಾಗಿ ಬಳಸುತ್ತಿದ್ದಾರೆ. ವೋಟ್ ಹಾಕದೇ ಇರುವುದಕ್ಕಿಂತ 'ನೋಟಾ' ಹಾಕುವುದು ಮೇಲು ಅಂತಿದ್ದಾರೆ ಲಕ್ಷ ಲಕ್ಷ ಕನ್ನಡಿಗ ಮತದಾರರು.
2018ರಲ್ಲಿ ಹೊಸ ಕ್ರಾಂತಿ ಶುರು
ಕರ್ನಾಟಕದಲ್ಲಿ 'ನೋಟಾ' ಕ್ರಾಂತಿ ಹುಟ್ಟುಹಾಕಿದ್ದು 2018ರಿಂದ ಎನ್ನಬಹುದು. ಮತದಾನ ಪ್ರಮಾಣ ಹೆಚ್ಚು ಮಾಡಲು ಚುನಾವಣಾ ಆಯೋಗ ಪರಿಚಯಿಸಿದ ನೋಟಾ ಎಂಬ ಅಸ್ತ್ರ ಇತ್ತೀಚಿಗೆ ಟ್ರೆಂಡ್ ಕ್ರಿಯೇಟ್ ಮಾಡ್ತಿದೆ ಎಂಬುದು ವೀಶೇಷ. ಅದರಲ್ಲೂ 2018ರ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲೇ ಒಟ್ಟು 16,362 ಜನರು ನೋಟಾ ಚಲಾಯಿಸಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು 3,13,696 ಜನ ನೋಟಾ ಪರವಾಗಿ ಮತ ಚಲಾಯಿಸಿದ್ದರು. ಇದೀಗ ನೋಟಾ ಮತದಾರರ ಸಂಖ್ಯೆ ಕುಸಿದಿದ್ದರೂ ಸಂಚಲನ ಸೃಷ್ಟಿಯಾಗಿದೆ.

2023ರಲ್ಲಿ ಎಷ್ಟು 'ನೋಟಾ' ಮತ?
ಅಂದಹಾಗೆ 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2023ರಲ್ಲಿ ನೋಟಾ ಮತ ಹಾಕಿದ ಮತದಾರರ ಸಂಖ್ಯೆ 2,69,593ಕ್ಕೆ ಕುಸಿದಿದೆ. ಈ ಮೂಲಕ ಸುಮಾರು 44 ಸಾವಿರ 'ನೋಟಾ' ಮತ ಕಡಿಮೆ ಆಗಿದ್ದರೂ, 'ನೋಟಾ' ಎಂಬ ಬ್ರಹ್ಮಾಸ್ತ್ರ ಜಿಲ್ಲಾ ಮಟ್ಟದಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಬಲವಾಗುತ್ತಿದೆ ಎಂಬುದು ಗಮನಾರ್ಹ ಸಂಗತಿ. ನಿಮಗೆ ನಿಮ್ಮ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿ ಇಷ್ಟವಾಗದೇ ಇದ್ದರೆ, ಈ 'ನೋಟಾ' ಎಂಬ ಬ್ರಹ್ಮಾಸ್ತ್ರ ಬಳಸಿ ಪಾಠ ಕಲಿಸಬಹುದು.
'ನೋಟಾ' ಪರವಾಗಿ ನಿಂತ ಜನ?
ರಾಮನಗರ ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ 3,356 ನೋಟಾ ಮತ ಚಲಾವಣೆ ಆಗಿವೆ. 2018ರಲ್ಲಿ ಈ ಸಂಖ್ಯೆ 4,254 ಆಗಿತ್ತು. ಚನ್ನಪಟ್ಟಣ ಕ್ಷೇತ್ರದಲ್ಲಿ 1110 ನೋಟಾ ಮತಗಳು. ಕನಕಪುರ ಕ್ಷೇತ್ರದಲ್ಲಿ 762 ಮತದಾರರು ನೋಟಾ ಪ್ರಯೋಗ ಮಾಡಿದ್ದಾರೆ. ಮಾಗಡಿ ಕ್ಷೇತ್ರದಲ್ಲಿ 604 ನೋಟಾ ಮತ ಚಲಾವಣೆಯಾಗಿವೆ. ರಾಮನಗರ ಕ್ಷೇತ್ರದಲ್ಲಿ ಒಟ್ಟು 880 ಮತಗಳು ನೋಟಾ ಪರವಾಗಿ ಚಲಾವಣೆ ಆಗಿವೆ. ಈ ಲೆಕ್ಕಾಚಾರದಲ್ಲಿ ನೋಟಾ ಮತಕ್ಕೆ ಸಾಕಷ್ಟು ಜನ ಒಲವು ತೋರಿಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಪಕ್ಷೇತರರಿಗಿಂತ ಹೆಚ್ಚು ಮತ ನೋಟಾಗೆ!
ಗದಗ ಜಿಲ್ಲೆಯಲ್ಲಿ ಈ ಬಾರಿ ಹೊಸ ಅಂಕಿ-ಅಂಶ ಬಯಲಾಗಿದ್ದು, ಗದಗ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 2 ಸ್ಥಾನ ಪಡೆದಿವೆ. ಹಾಗೇ ಗದಗ ಜಿಲ್ಲೆಯಲ್ಲಿ ಈ ಬಾರಿ ನೋಟಾಗೆ ಬಿದ್ದ ಮತಗಳ ಸಂಖ್ಯೆ ಸಾಕಷ್ಟು ಗಮನ ಸೆಳೆದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಎಪಿ ಹಾಗೂ ಪಕ್ಷೇತರರನ್ನೂ ಒಪ್ಪಿಕೊಳ್ಳದ ಮತದಾರರು ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೋಟಾ ಮತ ಚಲಾಯಿಸಿದ್ದಾರೆ. ಗದಗದ 4 ಮತಕ್ಷೇತ್ರಗಳಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ನೋಟಾ ಚಲಾವಣೆಯಾಗಿದೆ? ತಿಳಿಯೋಣ ಬನ್ನಿ.

ಗದಗ ಜಿಲ್ಲೆಯಲ್ಲೂ 'ನೋಟಾ' ಹವಾ
ಗದಗ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲ 88,986 ಮತ ಪಡೆದು ಗೆಲುವು ಸಾಧಿಸಿದ್ದರೆ, ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ 73,820 ಮತ ಪಡೆದಿದ್ದಾರೆ. ಆದರೆ ಇಲ್ಲಿ ಜೆಡಿಎಸ್ & ಆಪ್ ಸೇರಿದಂತರೆ ಪಕ್ಷೇತರ ಅಭ್ಯರ್ಥಿಗಳನ್ನೂ ಮೀರಿ 1537 ಮತಗಳನ್ನು ಪಡೆದುಕೊಂಡ ನೋಟಾ 3ನೇ ಸ್ಥಾನ ಪಡೆದಿದೆ. ನರಗುಂದ ಮತಕ್ಷೇತ್ರದಲ್ಲಿ ಪಕ್ಷೇತರರನ್ನು ಮೀರಿಸುವಂತೆ 1,450 ಮತ ಪಡೆದುಕೊಂಡಿದೆ ನೋಟಾ. ಇದು ಮಾತ್ರವಲ್ಲ ಇನ್ನುಳಿದ 2 ಕ್ಷೇತ್ರದಲ್ಲೂ ಇದೇ ರೀತಿಯ ನೋಟಾ ಫಲಿತಾಂಶ ಜಿಲ್ಲೆಯಲ್ಲಿ ಬಂದಿದೆ.
ಯಾರನ್ನೂ ಒಪ್ಪಿಕೊಳ್ಳದ ಮತದಾರ ಪ್ರಭು
ರೋಣ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ 94,064 ಮತ ಪಡೆದು ಗೆದ್ದಿದ್ದು, ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ 69,519 ಮತ ಪಡೆದು 2ನೇ ಸ್ಥಾನ ಪಡೆದಿದ್ದಾರೆ. ಎಎಪಿ 8,761 ಮತ ಪಡೆದು 3ನೇ ಸ್ಥಾನವನ್ನ ಪಡೆದಿದ್ದು, ಜೇಡಿಎಸ್, ಶಿವಸೇನಾ ಮತ್ತು ಪಕ್ಷೇತರರಿಗಿಂತ ಹೆಚ್ಚು ಅಂದರೆ 1,586 ಮತ ಪಡೆದ ನೋಟಾ 4ನೇ ಸ್ಥಾನ ಅಲಂಕರಿಸಿದೆ. ಈ ಮೂಲಕ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲೂ ನೋಟಾ ಮತ ಚಲಾವಣೆ ಬಗ್ಗೆ ಭಾರಿ ಕೂತಹಲ ಮೂಡುತ್ತಿರುವುದು ಕಂಡುಬರುತ್ತಿದೆ.
ಶಿರಹಟ್ಟಿಯಲ್ಲೂ ಸದ್ದು ಮಾಡಿದ 'ನೋಟಾ'
ಉಳಿದಂತೆ ಶಿರಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಚಂದ್ರು ಲಮಾಣಿ 73,600 ಮತ ಪಡೆದು ಗೆಲುವು ಸಾಧಿಸಿದ್ದರೆ. ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ 45637 ಮತ ಪಡೆದು 2ನೇ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಇಲ್ಲಿ 34,550 ಮತಗಳನ್ನು ಪಡೆದು 3ನೇ ಸ್ಥಾನ ಅಲಂಕರಿಸಿದೆ. ಜೆಡಿಎಸ್ ಅಭ್ಯರ್ಥಿ 2,054 ಮತ ಪಡೆದು ನಾಲ್ಕನೇ ಸ್ಥಾನದಲ್ಲಿದ್ದರೆ, ಎಎಪಿ ಹಾಗೂ ಪಕ್ಷೇತರರನ್ನ ಮೀರಿ 1,633 ಮತಗಳನ್ನ ಪಡೆದ ನೋಟಾ 5ನೇ ಸ್ಥಾನ ಪಡೆದಿದ್ದು ವಿಶೇಷ ಸಂಗತಿ ಎನ್ನಬಹುದು.
ಒಟ್ನಲ್ಲಿ ಹೀಗೆ ನೋಟಾ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಅದರಲ್ಲೂ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೋಟಾ ಮತಗಳ ಸಂಖ್ಯೆ ದೇಶದ ಗಮನ ಸೆಳೆದಿದೆ. ಈ ಮೂಲಕ ಯಾವುದೇ ಅಭ್ಯರ್ಥಿಯು ನಮಗೆ ಬೇಡ ಎನ್ನುವವರು ನೋಟಾ ಪರವಾಗಿ ಮತ ಹಾಕುತ್ತಿದ್ದಾರೆ. ಈ ಮೂಲಕ ಹೊಸ ಕ್ರಾಂತಿಯ ಕಡೆಗೆ ಮತದಾರರು ಹೆಜ್ಜೆ ಹಾಕುತ್ತಿರುವುದು ವಿಶೇಷ.












Click it and Unblock the Notifications