'ಆಲ್ ಈಸ್ ವೆಲ್', ಅಸಮಾಧಾನದ ಕಿಡಿಯನ್ನು ಹೊಸಕಿ ಹಾಕಿದ ಡಿಕೆಶಿ
ಬೆಂಗಳೂರು, ಮೇ 23: ನಾನು ಯಾವುದೇ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ, ಹೈಕಮಾಂಡ್ ಯಾವ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ ಎಂದಿರುವ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಮೇಲಿನ ಮುನಿಸಿನ ವದಂತಿಯನ್ನು ತಳ್ಳಿ ಹಾಕಿದ್ದಾರೆ.
ಹಿಲ್ಟನ್ ಹೊಟೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ, ಹಾಗಾಗಿ ಬೇಸರ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಮೈತ್ರಿಯಲ್ಲಿ 'ಆಲ್ ಈಸ್ ವೆಲ್' ಸ್ಥಿತಿ ಇದೆ, ಇಲ್ಲಿ ಏನೂ ಸಮಸ್ಯೆ ಇಲ್ಲ' ಎಂದು ಅವರು ಹೇಳಿದರು.
ಉಪ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ಕಾಂಗ್ರೆಸ್ ಹೈಕಮಾಂಡ್ ಹಾಗೂ ಸ್ಥಳೀಯ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಇಬ್ಬರೂ ಸಹೋದದರು ಕಾಂಗ್ರೆಸ್ ಮುಖಂಡರ ಕೈಗೆ ಸಿಗದೇ, ಕರೆ ಕೂಡ ಸ್ವೀಕರಿಸುತ್ತಿಲ್ಲ ಎನ್ನಲಾಗಿತ್ತು.

ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, 'ರಾಜಕೀಯ ಕಾರ್ಯಕಲಾಪದಲ್ಲಿ ಮನೆಗೆ ತೆರಳಿರಲಿಲ್ಲ, ಹಾಗಾಗಿ ಇಂದು ಹೋಗಿ ಮನೆ ಊಟ ಮಾಡಿ ಬಂದೆವು ಅಷ್ಟೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ' ಎಂದರು.
ಡಿ.ಕೆ.ಶಿವಕುಮಾರ್ ಸಹೋದದರು ಮೈತ್ರಿ ಸರ್ಕಾರವನ್ನು ರಚಿಸುವಲ್ಲಿ ಹಾಗೂ ಶಾಸಕರನ್ನು ಆಪರೇಷನ್ ಕಮಲದಿಂದ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು, ಅಲ್ಲದೆ ಡಿಕೆ ಶಿವಕುಮಾರ್ ಅವರು ಚುನಾವಣೆ ಸಂದರ್ಭದಲ್ಲಿ ಹಲವು ಕ್ಷೇತ್ರಗಳಲ್ಲಿ ಸಂಚರಿಸಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದರು ಇಷ್ಟು ಶ್ರಮ ಹಾಕಿದ್ದರೂ ಕೂಡ ಡಿಸಿಎಂ ಹುದ್ದೆ ಕೈತಪ್ಪಿದುದರ ಬಗ್ಗೆ ಡಿ.ಕೆ.ಶಿವಕುಮಾರ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಡಿಕೆಶಿ ಅವರು ಅದನ್ನು ಅಲ್ಲಗಳೆದಿದ್ದಾರೆ.












Click it and Unblock the Notifications