ಬೆಂಗಳೂರು : ಜೂನ್ ನಲ್ಲಿ ನೀರಿನ ದರ ಏರಿಕೆ ಇಲ್ಲ
ಬೆಂಗಳೂರು, ಮೇ 29 : ಜೂನ್ ನಿಂದ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡುವ ಜಲಮಂಡಳಿ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿಲ್ಲ. ಅನಧಿಕೃತ ನೀರಿನ ಸಂಪರ್ಕ, ನೀರಿನ ಪೋಲು ಮುಂತಾದವುಗಳನ್ನು ತಡೆಗಟ್ಟೆ ನಂತರ ನೀರಿನ ದರ ಹೆಚ್ಚಳದ ಕುರಿತು ಚಿಂತನೆ ನಡೆಸುವಂತೆ ಸಿಎಂ ಜಲಮಂಡಳಿಗೆ ಸೂಚನೆ ನೀಡಿದ್ದಾರೆ.
ಮೇ 14ರಂದು ಅಧಿಕಾರಿಗಳ ಸಭೆ ನಡೆಸಿದ್ದ ಬೆಂಗಳೂರು ಜಲಮಂಡಳಿ ನೀರಿನ ದರವನ್ನು ಪರಿಷ್ಕರಣೆ ಮಾಡಿತ್ತು. ಆದರೆ, ಸರ್ಕಾರದ ಅನುಮತಿ ಪಡೆದು ಜೂನ್ ತಿಂಗಳಿನಿಂದ ನೂತನ ದರ ಜಾರಿಗೊಳಿಸುವುದಾಗಿ ಹೇಳಿತ್ತು. ಸದ್ಯ, ಸಿಎಂ ಸಿದ್ದರಾಮಯ್ಯ ದರ ಏರಿಕೆಗೆ ಒಪ್ಪಿಗೆ ನೀಡಿಲ್ಲ. ಆದ್ದರಿಂದ ಬೆಂಗಳೂರಿಗರು ಸ್ಪಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.

ಮೊದಲು ಅನಧಿಕೃತ ನೀರಿನ ಸಂಪರ್ಕವನ್ನು ಪತ್ತೆ ಹಚ್ಚಿ, ನೀರು ಪೋಲಾಗುವುದನ್ನು ತಡೆಗಟ್ಟಿ ನಂತರ ಬೆಲೆ ಏರಿಕೆ ಕುರಿತು ತೀರ್ಮಾನ ಕೈಗೊಳ್ಳಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ಜೂನ್ 1ರಿಂದ ಜಲಮಂಡಳಿ ವ್ಯಾಪ್ತಿಯಲ್ಲಿ ನೀರಿನ ದರ ಏರಿಕೆಯಾಗುವುದಿಲ್ಲ. [ನೀರಿನ ದರ ಎಷ್ಟು ಹೆಚ್ಚಾಗಿದೆ?]
ವಿದ್ಯುತ್ ದರ ಪದೇಪದೆ ಏರಿಕೆಯಾಗುತ್ತಿದ್ದರೂ 9 ವರ್ಷಗಳಿಂದ ನೀರಿನ ದರ ಹೆಚ್ಚಳವಾಗಿಲ್ಲ, ಜಲಮಂಡಳಿ ನಡೆಸುತ್ತಿರುವ ಕಾಮಗಾರಿಗಳಿಗೆ ಅನುದಾನದ ಕೊರತೆ ಇದೆ ಮುಂತಾದ ನೆಪಗಳನ್ನು ಮುಂದಿಟ್ಟುಕೊಂಡು ಜಲಮಂಡಳಿ ನೀರಿನ ದರ ಏರಿಕೆ ಮಾಡಿತ್ತು. ದರ ಏರಿಕೆಯಿಂದ ಹೆಚ್ಚಿನ ಆದಾಯ ಪಡೆಯುವ ಉತ್ಸಾಹದಲ್ಲಿತ್ತು. ಆದರೆ, ಸಿಎಂ ನಿರ್ಧಾರದಿಂದ ಇದಕ್ಕೆ ತಡೆ ಬಿದ್ದಿದೆ.
ವಿಶೇಷ ಕಾರ್ಯಾಚರಣೆ : ಅನಧಿಕೃತವಾಗಿ ನೀರು ಪಡೆಯುತ್ತಿರುವವರು ಮೇ 31ರೊಳಗೆ ಅಧಿಕೃತ ಸಂಪರ್ಕಗಳನ್ನು ಪಡೆಯಬೇಕು ಎಂದು ಜಲಮಂಡಳಿ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜೂ.2ರಿಂದ ಹೊರವಲಯದಲ್ಲಿನ ಅನಧಿಕೃತ ಸಂಪರ್ಕಗಳನ್ನು ತಡೆಗಟ್ಟಲು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಇನ್ನು ಮುಖ್ಯಮಂತ್ರಿಗಳು ಸೂಚಿಸಿರುವ ನೀರಿನ ಪೋಲು ತಡೆಗಟ್ಟುವಿಕೆ ಮುಂತಾದ ವಿಚಾರಗಳ ಕುರಿತಂತೆ ಜಲಮಂಡಳಿ ಅಧಿಕಾರಿಗಳು ಸಭೆ ನಡೆಲಿದ್ದು, ಕಾರ್ಯ ಯೋಜನೆ ತಯಾರಿಸಲಿದ್ದಾರೆ. ಇವುಗಳು ಮುಗಿದ ಬಳಿಕ ನೀರಿನ ದರ ಏರಿಕೆ ಕುರಿತು ಗಮನಹರಿಸಬಹುದು.












Click it and Unblock the Notifications