ನೀರಿಲ್ಲ... ನೀರಿಲ್ಲ... ಸಿಎಂ ಗೃಹ ಕಚೇರಿಯಲ್ಲೂ ನೀರಿಲ್ಲ: ಜಲಮಂಡಳಿ ಟ್ಯಾಂಕರ್‌ನಿಂದ ನೀರು ಪೂರೈಕೆ
ಬೆಂಗಳೂರು ಮಾರ್ಚ್ 5: ಖಾಲಿ ಬಿಂದಿಗೆ, ಒಣಗಿ ಹೋದ ನಲ್ಲಿ ಇರುವ ಪ್ರದೇಶ, ನೀರಿನ ಟ್ಯಾಂಕರ್ ಬರುವಿಕೆಗಾಗಿ ಕಾಯುವ ಜನ. ಇದು ನಿತ್ಯ ರಾಜ್ಯದಲ್ಲಿ ಕಾಣಸಿಗುತ್ತಿರುವ ದೃಶ್ಯಗಳು. ಎಲ್ಲಿ ನೋಡಿದರೂ ನೀರಿಗಾಗಿ ಜನ ಪರದಾಡುವಂತಾಗಿದೆ. ನೀರಿಲ್ಲ... ನೀರು ಬರ್ತಾಯಿಲ್ಲ... ನೀರು ಸಿಗ್ತಾಯಿಲ್ಲ.. ಇದೇ ಮಾತು ಜನರ ಬಾಯಲ್ಲಿ ಪದೇ ಪದೇ ಕೇಳಿ ಬರುತ್ತಿದೆ. ಆದರೆ ಈ ನಡುವೆ ಸಿಎಂ ಕಚೇರಿಗೂ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ.
ಹೌದು... ರಾಜ್ಯದಲ್ಲಿ ನೀರಿನ ಸಮಸ್ಯೆ ದಿನಕಳೆದಂತೆ ಹೆಚ್ಚಾಗುತ್ತಿದೆ. ವಿಶೇಷ ಅಂದರೆ ಸಿಎಂ ಕಚೇರಿಗೂ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಜಲಮಂಡಳಿ ಟ್ಯಾಂಕರ್‌ನಿಂದ ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಕಚೇರಿಗೆ ನೀರು ಪೂರೈಕೆ ಮಾಡಲಾಗಿದೆ. ಸಿಎಂ ಕಚೇರಿಯಲ್ಲಿ ನೀರಿಲ್ಲ ಎನ್ನುವ ಸುದ್ದಿ ಜನರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಸಿಎಂ ಕಚೇರಿಗೇ ನೀರಿಲ್ಲ ಎನ್ನುವುದಾದರೆ ಜನಸಾಮಾನ್ಯರ ಗತಿ ಏನು ಎನ್ನುವ ಚಿಂತೆ ಕಾಡತೊಡಗಿದೆ.

ಇನ್ನೂ ಬೇಸಿಗೆ ಆರಂಭವಾಗಿಲ್ಲ. ಆರಂಭದಲ್ಲೇ ಡ್ಯಾಂಗಳಲ್ಲಿ ನೀರು ಕಾಣಸಿಗುತ್ತಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಮೂಲಗಳು ಬತ್ತಿ ಹೋಗಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಿಗದೇ ಹೋಗುವ ಆತಂಕ ಎದುರಾಗಿದೆ. ಹೀಗಾಗಿ ಈಗಾಗಲೇ ಬೇಸಿಗೆ ಮುನ್ನವೇ ಬೆಂಗಳೂರಿಗೆ ಬರಗಾಲ ಎದುರಾಗಿದೆ. ಇಷ್ಟು ಮಾತ್ರವಲ್ಲದೆ ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾ ಕೂಡ ಶುರುವಾಗಿದೆ
ಈ ಬಗ್ಗೆ ಡಿಸಿಎಂ ಸಭೆ ಮಾಡಿದರೂ ನೀರಿನ ಟ್ಯಾಂಕರ್ ಮಾಫಿಯಾ ತಡೆಗಟ್ಟಲು ಕೆಲ ಕ್ರಮಗಳನ್ನು ಕೈಗೊಂಡಿದ್ದಾರೆ. ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾ ತಡೆಯಲು ಸಿಎಂ ಕೂಡ ಖುದ್ದು ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಸಿಎಂ ಕಚೇರಿಯಲ್ಲಿ ನೀರಿಲ್ಲ ಅನ್ನೋದು ಆಶ್ಚರ್ಯವನ್ನುಂಟು ಮಾಡಿದ್ದು, ನೀರಿನ ಟ್ಯಾಂಕರ್ ಮೂಲಕ ಸಿಎಂ ಕಚೇರಿಗೆ ನೀರು ಪೂರೈಕೆ ಕಂಡು ಜನ ಮುಂದೆ ಹೇಗಪ್ಪಾ ಎಂದು ಯೋಚಿಸುತ್ತಿದ್ದಾರೆ.

ಈ ದೃಶ್ಯ ರಾಜ್ಯದಲ್ಲಿ ನೀರಿನ ಹಾಹಾಕರಕ್ಕೆ ಹಿಡಿದ ಕೈಗನ್ನಡೆ ಅಂದರೆ ತಪ್ಪಾಗಲಿಕ್ಕಿಲ್ಲ. ಇದು ನಿಜಕ್ಕೂ ಆತಂಕದ ವಿಚಾರವಾಗಿದ್ದು ಮುಂದಿನ ದಿನಗಳಲ್ಲಿ ಆಗುವ ನೀರಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳು ಈಗಲಿಂದಲೇ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಭೀಕರ ಬರಗಾಲ ಎದುರಿಸಬೇಕಾಗುತ್ತದೆ.
ಬೆಂಗಳೂರು ನೀರಿನ ಬಿಕ್ಕಟ್ಟು:
ಬೆಂಗಳೂರು ನಗರ ತೀವ್ರ ನೀರಿನ ಸಮಸ್ಯೆಯಿಂದ ತತ್ತರಿಸಿ ಹೋಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರ ನೀರಿನ ವಿತರಣೆಯನ್ನು ಸಮರ್ಥವಾಗಿ ನಿರ್ವಹಿಸಲು ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಬೆಂಗಳೂರು ನಿವಾಸಿಗಳಿಗೆ ಭರವಸೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಗರದಲ್ಲಿನ ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡುವ ಎಲ್ಲಾ ನೀರಿನ ಟ್ಯಾಂಕರ್‌ಗಳನ್ನು ರಾಜ್ಯ ಸರ್ಕಾರವು ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಿದರು.

ಸೂಕ್ತ ಕ್ರಮಕ್ಕೆ ಡಿಸಿಎಂ ಭರವಸೆ:
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ ವೇಗವಾಗಿ ಕುಸಿಯುತ್ತಿರುವ ಪರಿಣಾಮ ಬೆಂಗಳೂರಿನ ನೀರಿನ ಪೂರೈಕೆ ಕಡಿಮೆಯಾಗಿದೆ. ಈ ಅಣೆಕಟ್ಟು ಬೆಂಗಳೂರಿನ ಪ್ರಮುಖ ಕುಡಿಯುವ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ನಗರದ ಎಲ್ಲಾ ಪ್ರದೇಶಗಳಲ್ಲಿ ನೀರಿನ ಪೂರೈಕೆಯನ್ನು ಸುಗಮಗೊಳಿಸಲು ಬಿಡ್ಲ್ಯುಎಸ್‌ಎಸ್‌ಬಿ ಪ್ರಯತ್ನಿಸುತ್ತಿದೆ. ಖಾಸಗಿ ನೀರಿನ ಏಜೆನ್ಸಿಗಳಿಂದ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಲಾಗುವುದು ಎಂದು ಡಿಸಿಎಂ ಭರವಸೆ ನೀಡಿದ್ದಾರೆ.
ಹೀಗಾಗಿ ನಗರದ ನಾಗರಿಕ ಸಂಸ್ಥೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಎಲ್ಲಾ ಕುಡಿಯುವ ನೀರಿನ ಟ್ಯಾಂಕರ್ ಮಾಲೀಕರು ತಮ್ಮನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಬಿಬಿಎಂಪಿಯಲ್ಲಿ ನೀರಿನ ಟ್ಯಾಂಕರ್‌ಗಳ ಮಾಲೀಕರು ಸ್ವಯಂ ನೋಂದಣಿಗೆ ಮಾರ್ಚ್ 7 ಕೊನೆಯ ದಿನಾಂಕವಾಗಿದೆ. ಈ ಮೂಲಕ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ನೀರು ಪೂರೈಕೆಯಲ್ಲಿ ಯಾವುದೇ ಮಾಫಿಯಾಗಳಿಗೆ ಅವಕಾಶವನ್ನು ನೀಡದಿರಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.












Click it and Unblock the Notifications