• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾದಲ್ಲಿ ಕನ್ನಡ ಪುಸ್ತಕ ಪ್ರದರ್ಶನಕ್ಕೆ ಕೊಕ್‌; ಹೆಚ್‌ಡಿಕೆ ಕಿಡಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 28: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಕನ್ನಡ ಪುಸ್ತಕ ಪ್ರದರ್ಶನವನ್ನು ಕೈಬಿಟ್ಟಿರುವ ರಾಜ್ಯ ಬಿಜೆಪಿ ಸರ್ಕಾರದ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ಅವರು, ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ್ದಾರಲ್ಲದೆ, ಮಾಧ್ಯಮ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಕನ್ನಡ ನಾಡಿನ ಶ್ರೀಮಂತ ಪರಂಪರೆ, ಸಾಹಿತ್ಯ ಸಿರಿ ಸಂಪತ್ತಿನ ಹೆಗ್ಗುರುತು ನಾಡಹಬ್ಬ ಮೈಸೂರು ದಸರಾ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ನೀತಿ ಅತ್ಯಂತ ಖಂಡನೀಯವಾಗಿದೆ.

ಕನ್ನಡ ನಾಡಿನ ಶ್ರೀಮಂತ ಪರಂಪರೆ, ಸಾಹಿತ್ಯ ಸಿರಿ ಸಂಪತ್ತಿನ ಹೆಗ್ಗುರುತು ನಾಡಹಬ್ಬ ಮೈಸೂರು ದಸರಾ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ನೀತಿ ಅತ್ಯಂತ ಖಂಡನೀಯವಾಗಿದೆ. ಕನ್ನಡ ಭಾಷೆ, ಸಂಸೃತಿಯ ಕುರಿತು ಆಡಳಿತ ನಡೆಸುವವರ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಮಾತೃಭಾಷೆಗೆ ಅಪಮಾನ ಮತ್ತು ದ್ರೋಹ ಮಾಡಿದ್ದಾರೆ ಎಂದು ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.

ಮೈಸೂರು ದಸರಾ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮೈಸೂರು ದಸರಾ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ "ದಸರಾ ದರ್ಶನ"

ಕನ್ನಡಕ್ಕೆ ಅವಮಾನ ಮಾಡಿದ ಸರ್ಕಾರ
ಮೈಸೂರು ದಸರಾ ಉತ್ಸವದಲ್ಲಿ ಕನ್ನಡ ಪುಸ್ತಕ ಪ್ರದರ್ಶನ ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವ ಸೇವಾ ಕೈಂಕರ್ಯ ಆಗಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಕನ್ನಡ ಪುಸ್ತಕ ಪ್ರದರ್ಶನಕ್ಕೇ ಕೊಕ್ ಕೊಟ್ಟಿದ್ದು, ತನ್ನ ಕನ್ನಡ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾರಿದೆ. ಈ ಮೂಲಕ ಪುಸ್ತಕ ಸಂಸ್ಕೃತಿಗೆ ಧಕ್ಕೆ ತಂದಿದೆ. ಮೈಸೂರು ಸಾಂಸ್ಕೃತಿಕ ನಗರಿ ಅಂತಲೇ ಹೆಸರುವಾಸಿ ಆಗಿದೆ. ಮೈಸೂರು ದಸರಾ ವಿಶ್ವವಿಖ್ಯಾತ ಆಗಿದ್ದು, ಇದು ಸಾಂಸ್ಕೃತಿಕ ಉತ್ಸವ ಅಂತಲೂ ಪ್ರಖ್ಯಾತಿ ಹೊಂದಿದೆ. ಹೀಗಿದ್ದರೂ ಕೂಡ ರಾಜ್ಯ ಸರ್ಕಾರ ಕನ್ನಡವನ್ನು ಧಿಕ್ಕರಿಸಿ ತನ್ನ ರಹಸ್ಯ ಕಾರ್ಯಸೂಚಿಯನ್ನು ಹೇರಲು ಹೊರಟಿದೆ. ಹಿಂದಿ ಭಾಷೆಯ ವಕ್ತಾರಿಕೆ ಮಾಡುವ ಪಕ್ಷದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಪ್ರಶ್ನಿಸುವುದರ ಮೂಲಕ ಟ್ವೀಟ್‌ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ರಾಜ್ಯ ಸರ್ಕಾರದಿಂದ ಕನ್ನಡ ಕಡೆಗಣನೆ
ಕನ್ನಡವನ್ನು ಮುಗಿಸುವುದನ್ನೇ ರಾಜ್ಯ ಸರ್ಕಾರ ನಿತ್ಯ ಕಾಯಕ ಮಾಡಿಕೊಂಡಿದೆ. ಸಮಯ ಸಿಕ್ಕಾಗಲೆಲ್ಲಾ ಕನ್ನಡಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡುತ್ತಲೇ ಇದೆ. ಕನ್ನಡಿಗರ ಶಾಂತಿ, ಸಹನೆಯನ್ನು ಬಿಜೆಪಿ ಪರೀಕ್ಷೆ ಮಾಡುತ್ತಿದೆ. ಬೇಕಂತಲೇ ಉದ್ದೇಶಪೂರ್ವಕವಾಗಿ ಕನ್ನಡ ಪುಸ್ತಕ ಪ್ರದರ್ಶನವನ್ನು ಕೈಬಿಟ್ಟಂತೆ ಕಾಣುತ್ತಿದೆ. ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವ ಕಾರ್ಕಳ ಸುನೀಲ್‌ ಅವರೇ ಈ ಬಗ್ಗೆ ಕನ್ನಡಿಗರಿಗೆ ಉತ್ತರ ಕೊಡಬೇಕು. ತಕ್ಷಣ ಕನ್ನಡ ಪುಸ್ತಕ ಪ್ರದರ್ಶನವನ್ನು ಆಯೋಜನೆ ಮಾಡಬೇಕು ಎಂದು ತಮ್ಮ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಬ್ಯಾರಿ ಭಾಷೆಗೆ ಅವಕಾಶ ನಿರಾಕರಣೆ ಸಮ್ಮತವಲ್ಲ
ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವುದು ಸಮ್ಮತವಲ್ಲ. ಬ್ಯಾರಿಯು ಕನ್ನಡದ ನೆರಳಿನಲ್ಲಿ ಅರಳಿರುವ ಭಾಷೆ ಆಗಿದೆ ಹಾಗೂ ಕರಾವಳಿಯಲ್ಲಿ ಅನೇಕರ ನಿತ್ಯ ನುಡಿ ಆಗಿದೆ. ಕೇವಲ ಒಂದು ಸಮುದಾಯದವರು ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಬ್ಯಾರಿಯನ್ನು ಬೇಡ ಎನ್ನುವುದು ತಪ್ಪು. ರಾಜ್ಯ ಬಿಜೆಪಿ ಸರ್ಕಾರದ್ದು ಏಕಪಕ್ಷೀಯ ನಡೆ ಆಗಿದೆ. ಈ ವರ್ಷದ ದಸರಾ ಕವಿಗೋಷ್ಠಿಯಲ್ಲಿ ಕನ್ನಡದೊಂದಿಗೆ ತುಳು, ಕೊಂಕಣಿ, ಕೊಡವ, ಅರೆಭಾಷೆ ಮತ್ತು ಎರವ ಬಾಷೆಗಳಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವುದು ರಾಜ್ಯ ಸರ್ಕಾರದ ಸಂಕುಚಿತ ಮನೋಭಾವಕ್ಕೆ ಸಾಕ್ಷಿಯಾಗಿದೆ. ಏಕಭಾಷೆಯನ್ನು ಮೆರೆಸುವ ಬಿಜೆಪಿ ಪಕ್ಷಕ್ಕೆ ಈ ನೆಲದ ತಾಯಿಭಾಷೆ ಕನ್ನಡವೂ ಸೇರಿ ಇತರೆ ಎಲ್ಲಾ ಉಪಭಾಷೆಗಳನ್ನು ಅಳಿಸಿ ಹಾಕಬೇಕೆಂಬ ಕೆಟ್ಟ ಮನಃಸ್ಥಿತಿ ಇರುವಂತಿದೆ. ಇದು ಖಂಡಿತಾ ಬಹಳ ದಿನ ನಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

No Kannada book exhibition in Mysuru Dasara: HD Kumaraswamy Condemned

ಬ್ಯಾರಿ ಭಾಷೆಗೆ ಅವಕಾಶ ಕಲ್ಪಿಸಿ
ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಬ್ಯಾರಿ ಭಾಷೆಯನ್ನು ಮಾತಾಡುತ್ತಾರೆ. 2007ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬ್ಯಾರಿ ಭಾಷಿಗರ ಬಹುಕಾಲದ ಬೇಡಿಕೆ ಆಗಿದ್ದ 'ಬ್ಯಾರಿ ಸಾಹಿತ್ಯ ಅಕಾಡೆಮಿʼ ಸ್ಥಾಪನೆಗೆ ಅನುಮೋದನೆ ನೀಡಿದ್ದೆ. ಬ್ಯಾರಿ ಅಕಾಡೆಮಿಯ ಮೂಲಕ ಅತ್ಯುತ್ತಮ ಸಾಹಿತ್ಯಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠವನ್ನೂ ಸ್ಥಾಪಿಸಲಾಗಿದೆ. ವಿಶೇಷ ಎಂದರೆ ಬ್ಯಾರಿ ಭಾಷಿಗರು ಕನ್ನಡ ಲಿಪಿಯನ್ನೇ ಬಳಸಿ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲ ಕೃತಿಗಳು ಕನ್ನಡಕ್ಕೂ ಅನುವಾದಿಸಲ್ಪಟ್ಟಿವೆ. ವಚನ ಸಾಹಿತ್ಯ ಸೇರಿ ಅನೇಕ ಕನ್ನಡದ ಅಮೂಲ್ಯ ಕೃತಿಗಳು ಬ್ಯಾರಿಗೂ ಅನುವಾದಗೊಂಡಿವೆ. ಕನ್ನಡ ನೆಲದಲ್ಲಿ ಕನ್ನಡ ಲಿಪಿಯೊಂದಿಗೆ ಸಾಮರಸ್ಯದ ಭಾಷೆಯಾಗಿ ಬೆರೆತಿರುವ ಬ್ಯಾರಿ ಭಾಷೆಗೆ ಈ ವರ್ಷ ದಸರಾ ಕವಿಗೋಷ್ಠಿಯಲ್ಲಿ ಅವಕಾಶ ನಿರಾಕರಿಸಿರುವುದು ಅಕ್ಷಮ್ಯ. ರಾಜ್ಯ ಸರ್ಕಾರ ಮತ್ತು ದಸರಾ ಸಮಿತಿ ಕೂಡಲೇ ಈ ಬಗ್ಗೆ ಪರಿಶೀಲಿಸಿ, ಆಗಿರುವ ಪ್ರಮಾದವನ್ನು ಸರಿಪಡಿಸಿ ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ
Know all about
ಎಚ್.ಡಿ. ಕುಮಾರಸ್ವಾಮಿ
English summary
HD Kumaraswamy expressed anger against state BJP government, not organizing Kannada book exhibition during in Mysuru Dasara, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X