Breaking: ಐಟಿ ಕಂಪೆನಿಗಳು ರಾಜಕಾಲುವೆ ಒತ್ತುವರಿ ಮಾಡಿದ್ದರೂ ತೆರವು: ಸಿಎಂ
ಬೆಂಗಳೂರು, ಸೆಪ್ಟೆಂಬರ್ 12: ಬೆಂಗಳೂರಿನಲ್ಲಿ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಯಾವುದೇ ಭೇದ ಭಾವ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ರಾಜಕಾಲುವೆ ಮೇಲೆ ಕಟ್ಟಡ, ಮನೆ ಕಟ್ಟಿ ಕಾಲುವೆಗೆ ನೀರು ಹರಿಯಲು ಅಡ್ಡಿ ಪಡಿಸಲಾಗಿದೆ. ಕೆಲವರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮುಚ್ಚಿದ್ದಾರೆ. ಹೀಗಾಗಿ ಮಳೆ ನೀರು ಚರಂಡಿಗೆ ಹರಿಯಲು ಸಾಧ್ಯವಾಗುತ್ತಿಲ್ಲ. ಅಂತಹ ಒತ್ತುವರಿ ಗುರುತಿಸಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಪ್ರವಾಹ ಬಂದಾಗ ಐಟಿ ಬಿಟಿ ಕ್ಷೇತ್ರ ಸೇರಿದಂತೆ ವಿವಿಧ ವರ್ಗದ ಎಲ್ಲರಿಗೂ ತೊಂದರೆಯಾಗಿದೆ. ಜನಸಾಮಾನ್ಯರಿಗೆ, ತಗ್ಗು ಪ್ರದೇಶದ ಮನೆಗಳಿಗೆ ತೊಂದರೆಯಾಗಿದೆ. ನಗರದ ಜನರ ಹಿತದೃಷ್ಟಿಯಿಂದ ಒತ್ತುವರಿಯನ್ನು ತೆರೆವುಗೊಳಿಸುವ ಕಾರ್ಯ ಪೂರ್ಣಗೊಳಿಸಲಾಗುವುದು. ಈ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ಭೇದ ಬಾವ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಒಂದು ವೇಳೆ ಐಟಿ ಕಂಪೆನಿಗಳು ರಾಜಕಾಲುವೆ ಒತ್ತುವರಿ ಮಾಡಕೊಂಡಿರುವ ಬಗ್ಗೆ ಕಂಡು ಬಂದರೆ ಅವುಗಳನ್ನೂ ಸಹ ತೆರವುಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒತ್ತುವರಿ ತೆರವು ಕುರಿತು ಹಲವು ಪ್ರಕರಣಗಳಲ್ಲಿ ನ್ಯಾಯಾಲಯ ಮೂಲಕ ನಿರ್ದೇಶನ ಪಡೆಯಲಾಗಿದೆ. ನ್ಯಾಯಾಲಯದಲ್ಲಿ ಪ್ರವಾಹ ಪ್ರಕರಣಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಹಲವು ನಿರ್ದೇಶನ ಮೇರೆಗೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣ ತೆರೆವುಗೊಳಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಪಿಎಸ್ಐ ಅಕ್ರಮ ನೇಮಕಾತಿ ಆಡಿಯೋ ಬಗ್ಗೆ ಮಾಹಿತಿ ಇಲ್ಲ
ಪಿಎಸ್ಐ ಅಕ್ರಮ ನೇಮಕಾತಿ ಕುರಿತು ಬಿಜೆಪಿ ಶಾಸಕರು ಮಾತನಾಡಿರುವ ವೀಡಿಯೊ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಆಡಿಯೋ, ವೀಡಿಯೋದ ಬಗ್ಗೆ ನನಗೆ ಮಾಹಿತಿ ಇಲ್ಲ. ಪ್ರಕರಣದ ಕುರಿತು ಪರಿಶೀಲಿಸಲಾಗುವುದು. ಹಾಗೇನಾದರೂ ತಪ್ಪು ಕಂಡುಬಂದಲ್ಲಿ ಸರ್ಕಾರ ತನಿಖೆಗೆ ಆದೇಶಿಸುತ್ತದೆ ಎಂದು ಹೇಳಿದರು.












Click it and Unblock the Notifications