ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಅಂದ್ರು ಸಿಎಂ!
ಬೆಂಗಳೂರು, ನ. 19 : ನಿಗಮ ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮಾತ್ರ ನೇಮಕ ಮಾಡಲಾಗುವುದು, ಸದ್ಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದರು, ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ನಿಗಮ ಮಂಡಳಿ ನೇಮಕದ ಕುರಿತು ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೂ ತಾವು ಚರ್ಚಿಸಿದ್ದು, ಶೀಘ್ರವೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡುವಂತೆ ಸೂಚಿಸಿದ್ದಾರೆ ಎಂದರು.

ರಾಜ್ಯ ಸಚಿವ ಸಂಪುಟ ಸಭೆ ವಿಸ್ತರಣೆ ಮಾಡಲು ಅನುಮತಿ ದೊರಕಿದೆ ಎಂಬ ಮಾತನ್ನು ತಳ್ಳಿ ಹಾಕಿದ ಅವರು, ಸಮನ್ವಯ ಸಮಿತಿ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆದಿಲ್ಲ. ಸದ್ಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿದರು. (ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಸ್ತು)
ಮಂಚ, ಹಾಸಿಗೆ ಇಲ್ಲ : ಸರ್ಕಾರ ಶಾದಿ ಭಾಗ್ಯ ಯೋಜನೆಯಡಿ ಮಂಚ ಹಾಗೂ ಹಾಸಿಗೆ ನೀಡುವುದಾಗಿ ಘೋಷಿಸಿತ್ತು. ಸದ್ಯ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಂಚ ಹಾಸಿಗೆ ಬದಲಾಗಿ ಕೇವಲ 50 ಸಾವಿರ ರೂ. ನಗದು ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು. ಶಾದಿ ಭಾಗ್ಯ ಯೋಜನೆಯನ್ನು ಎಲ್ಲ ವರ್ಗಗಳಿಗೂ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. (ಮುಸಲ್ಮಾನರ ಮದುವೆಗೆ ಶಾದಿ ಭಾಗ್ಯ)
ಶಾಂತಿಯುತ ಧರಣಿ ಮಾಡಲಿ ಬಿಡಿ : ಶಾದಿ ಭಾಗ್ಯ ಯೋಜನೆಯನ್ನು ಎಲ್ಲರಿಗೂ ವಿಸ್ತರಿಸಲು ಚಿಂತನೆ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದೇವೆ. ಆದರೂ ಯಡಿಯೂರಪ್ಪ ಧರಣಿ ನಡೆಸುತ್ತಿದ್ದಾರೆ. ಶಾಂತಿಯುತವಾಗಿ ಅವರು ಧರಣಿ ಮುಂದುವರೆಸಲು ನಮ್ಮ ಯಾವ ಅಭ್ಯಂತರವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.











Click it and Unblock the Notifications