ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರರಾಮಚರಿತೆ, ಬುದ್ಧಮಾಧವ ನಾಟಕ ಕಥನ

By Mahesh
|
Google Oneindia Kannada News

ಬೆಂಗಳೂರು,ಅ .19: ಕೆ. ವಿ. ಸುಬ್ಬಣ್ಣನವರು ಸ್ಥಾಪಿಸಿದ ನೀಲಕಂಠೇಶ್ವರ ನಾಟಕ ಸಂಸ್ಥೆ (ನೀನಾಸಂ), ರಾಜ್ಯದ ಅತ್ಯುನ್ನತ ರಂಗ ತರಬೇತಿ ಕೇಂದ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪ್ರತಿ ವರ್ಷವೂ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಾದ ನಟ, ನಟಿಯರು, ಪ್ರತಿ ವರ್ಷ ಜುಲೈ ಯಿಂದ ಅಕ್ಟೋಬರ್ ವರೆಗೆ 2 ನಾಟಕಗಳನ್ನು ಸಿದ್ಧಪಡಿಸಿ, ರಾಜ್ಯದಾದ್ಯಂತ, ಎಲ್ಲ ಜಿಲ್ಲೆಗಳಲ್ಲೂ ಪ್ರದರ್ಶನ ನೀಡುತ್ತದೆ.

ಅಕ್ಟೋಬರ್ 18 2014, ಶನಿವಾರ ಮತ್ತು ಅಕ್ಟೋಬರ್ 19 2014, ಭಾನುವಾರ ದಂದು ನಗರದ ಸೆಕ್ರೆಟಾರಿಯೆಟ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್ ನಲ್ಲಿ ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನವಿದೆ. [ನೀನಾಸಂ ತಿರುಗಾಟ, ಬೆಂಗಳೂರಿಗರಿಗೆ ರಸದೌತಣ]

ಉತ್ತರ ರಾಮಚರಿತೆ ಹಾಗೂ ಶಿವಬಿಕ್ಖು ಮತ್ತು ಬುದ್ಧಮಾಧವ ಎಂಬ ಈ ಎರಡು ನಾಟಕಗಳ ಪ್ರಯೋಗದಲ್ಲಿನ ಕಥನ ಹೀಗಿದೆ:

ಉತ್ತರ ರಾಮಚರಿತೆ: ಉತ್ತರರಾಮಾಯಣವನ್ನು ಆಧರಿಸಿದ ಭವಭೂತಿಯ ‘ಉತ್ತರರಾಮಚರಿತೆ' ನಾಟಕವು ಅನನ್ಯವಾದೊಂದು ದರ್ಶನ ಹಾಗೂ ಕಾವ್ಯಮೀಮಾಂಸೆಯನ್ನು ಮಂಡಿಸುವ ವಿಶಿಷ್ಟ ಕೃತಿ. ಕಥಾನಕದ ನೆಲೆಯಲ್ಲಿ ಭವಭೂತಿಯು ವಾಲ್ಮೀಕಿಯನ್ನು ಅನುಸರಿಸಿದರೂ ಈ ನಾಟಕದ ಸನ್ನಿವೇಶ-ಸಂರಚನೆಗಳಲ್ಲಿ ಹೊಸಬಗೆಯ ಆವಿಷ್ಕಾರಗಳನ್ನೂ ಐಕ್ಯತೆಗಳನ್ನೂ ರೂಪಿಸಿದ್ದಾನೆ.

ಉದಾಹರಣೆಗೆ, ಮೊದಲ ಅಂಕದಲ್ಲಿ ಬರುವ ರಾಮಾಯಣದ ಪೂರ್ವಕತೆಯ ಆಯ್ದ ಸನ್ನಿವೇಶಗಳನ್ನು ಚಿತ್ರದರ್ಶನದ ಮೂಲಕ ತೋರಿಸುವ ಕ್ರಮವು ಈ ನಾಟಕದ ತತ್ವ-ತಂತ್ರಗಳೆರಡಕ್ಕೂ ವಿಶಿಷ್ಟವಾದ ಬುನಾದಿಯನ್ನು ಹಾಕಿಕೊಟ್ಟಿದೆ, ಎರಡನೆಯ ಅಂಕದ ಶಂಭೂಕವಧೆಯ ಪ್ರಸಂಗದಲ್ಲಿ ಈ ನಾಟಕವು ರಾಮನ ವ್ಯಕ್ತಿತ್ವದ ಇನ್ನೊಂದು ಬಗೆಯ ವ್ಯಾಖ್ಯಾನಕ್ಕೆ ತೊಡಗುತ್ತದೆ; ಶಂಭೂಕನ ಕೊಲೆಯ ಪ್ರಸಂಗವು ಇಲ್ಲಿ ಬೇರೆಯೇ ಅರ್ಥದ ಹೊಳಪಿನಲ್ಲಿ ಕಾಣಿಸಿಕೊಂಡು ರಾಮನನ್ನು ಆತ್ಮವಿಮರ್ಶೆಗೆ ಒಡ್ಡುತ್ತದೆ.

ಮೂರನೆಯದಾದ ಛಾಯಾಂಕವು ಅತ್ಯುನ್ನತ ಮಟ್ಟದ ಕಲಾತ್ಮಕತೆಯನ್ನು ಮೆರೆದಿರುವ ಈ ನಾಟಕದ ಶಿಖರಘಟ್ಟವಾಗಿದೆ. ಪರಸ್ಪರ ಬೇರೆ ಬೇರೆ ಬಗೆಯ ಅಸ್ತಿತ್ವ ಮತ್ತು ಅನುಭವ ಸ್ತರಗಳಲ್ಲಿರುವ ರಾಮಸೀತೆಯರು ಬಿಂಬಪ್ರತಿಬಿಂಬಗಳ ಮುಖಾಮುಖಿಯೋ ಎಂಬಂತೆ ಎದುರುಬದುರಾಗುವುದು ಮತ್ತು ಆ ಮೂಲಕ ತಮ್ಮಿಬ್ಬರೊಳಗೂ ಇರುವ ಶೋಕವನ್ನು ಕರುಣ ರಸವಾಗಿ ಪುನರಾವಿಷ್ಕರಿಸಿಕೊಳ್ಳವುದು - ಈ ಅಂಕದ ಕೇಂದ್ರ ಕಥನವಾಗಿದೆ.

‘ಕರುಣ ಒಂದೇ ರಸ' - ಎಂಬ ಪರಿಷ್ಕೃತ ಕಾವ್ಯಮೀಮಾಂಸೆಯ ತತ್ವವನ್ನು ಭವಭೂತಿ ಮಂಡಿಸಿದ್ದು ಇಲ್ಲಿಯೇ. ಮುಂದಿನ ಅಂಕಗಳಲ್ಲಿ - ರಾಮನ ಮಕ್ಕಳಾದ ಕುಶಲವರು ತಮಗೆ ಕಾವ್ಯದ ಮೂಲಕ ಮಾತ್ರ ಪರಿಚಯವಿರುವ ರಾಮನನ್ನು ರಣಕಣದಲ್ಲಿ ಭೇಟಿಯಾಗುವ ವಿಚಿತ್ರ ಪ್ರಸಂಗ ಬರುತ್ತದೆ; ರಾಮನು ವಾಲ್ಮೀಕಿ ರಚಿತ ನಾಟಕದಲ್ಲಿ ಸೀತೆಯನ್ನು ನೋಡುವ ವಿಶಿಷ್ಟ ಸನ್ನಿವೇಶ ಕಾಣುತ್ತದೆ ಮತ್ತು ಇಂಥ ವಿಚಿತ್ರ-ವಿಶಿಷ್ಟ ರಂಗ ಪ್ರತಿಮೆಗಳ ಮೂಲಕ ಭವಭೂತಿಯು ಕಲೆ ಮತ್ತು ಬದುಕಿನ ನಡುವಿನ ಸಂಬಂಧಗಳನ್ನು ಬೇರೆ ಬಗೆಯಿಂದ ನೋಡುವ ತನ್ನ ದರ್ಶನವನ್ನು ನಮ್ಮೆದುರಿಗೆ ಮಂಡಿಸುತ್ತಾನೆ.

ಮಾತು-ಅರ್ಥಗಳ ನಡುವಿನ ಸಂಬಂಧದ ಹುಡುಕಾಟವೂ ಭವಭೂತಿಯ ಮುಖ್ಯ ಆಶಯಗಳಲ್ಲೊಂದಾಗಿ ಇಲ್ಲಿ ನಿರೂಪಿತವಾಗಿದೆ. ಅಲ್ಲದೇ, ಇಂದಿನ ಸಾಮಾಜಿಕ ಪಿಡುಗುಗಳಲ್ಲೊಂದಾಗಿರುವ ವ್ಯಕ್ತಿ, ಹೆಣ್ಣು, ಕಾವ್ಯ ಮತ್ತು ಮಾತಿನ ಚಾರಿತ್ರ್ಯಹನನದ ಗಂಭೀರ ಸಮಸ್ಯೆಯ ಕಡೆಗೂ ಭವಭೂತಿಯ ಈ ನಾಟಕ ತೀವ್ರವಾಗಿ ಸ್ಪಂದಿಸುತ್ತಿದೆ. ಇಂಥದೊಂದು ಬಹುಸಂಕೀರ್ಣ ನಾಟಕವನ್ನು ಇಂದು ಹೇಗೆ ಆಡಬಹುದು ಮತ್ತು ನೋಡಬಹುದು ಎಂಬ ಕುತೂಹಲದಿಂದ ಕೂಡ ಈ ಪ್ರಯೋಗವು ಪ್ರೇರಿತವಾಗಿದೆ.

ನಮ್ಮ ಸಂಸಾರ
ಶಿವಬಿಕ್ಖು ಮತ್ತು ಬುದ್ಧಮಾಧವ ಎಂಬ ಈ ಎರಡು ನಾಟಕಗಳ ಪ್ರಯೋಗದಲ್ಲಿನ ಕಥನಕ್ರಿಯೆ ಜರುಗುವುದು ಕರ್ನಾಟಕದ ಕರಾವಳಿಯ ದಕ್ಷಿಣದೆರಡು ಜಿಲ್ಲೆಗಳಲ್ಲಿ. ರಘುನಂದನರು ಬರೆದಿರುವ ಶಿವಬಿಕ್ಖು ಪದ್ಯನಾಟಕವಾಗಿದ್ದು, ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಆರ್ಥಿಕವಲಯದಂಚಿನ ಕುಟುಂಬವೊಂದರ ಆಸ್ತಿ ಪಾಲಾಗುವ ಹೊತ್ತಿನ ತಗಾದೆಯು ದುರಂತದಲ್ಲಿ ಕೊನೆಗೊಳ್ಳುವುದನ್ನು ಹೇಳುತ್ತದೆ.

ಐತಪ್ಪನೆಂಬ ರೈತನು ತನ್ನ ಜಮೀನನ್ನು ಪಾಲುಮಾಡುವಲ್ಲಿ ನೆರವಾಗಲು ತನ್ನ ಗೆಳೆಯನಾದ ಅಮ್ಮಬ್ಬನನ್ನು ಕೇಳಿಕೊಂಡಿರುತ್ತಾನೆ. ಈ ಇಬ್ಬರು ಹಿರಿಯರು ಮತ್ತು ಐತಪ್ಪನ ಕಿರಿಯ ಮಗಳು ಲಕ್ಷ್ಮಿ ಹಾಗೂ ಹಿರಿಯ ಮಗ ಶಿವರಾಮ, ಇವರ ಬದುಕು ಮತ್ತು ಕಾಳಜಿಗಳು ಒಂದೆಡೆ ತುಡಿದರೆ, ಐತಪ್ಪನ ಕಿರಿಯ ಮಗ ರಾಕೇಶ, ಹಿರಿಯ ಮಗಳು ದೇವಕಿ, ಹಾಗೂ ದೇವಕಿಯ ಗಂಡ ರಂಜಪ್ಪ, ಇವರ ಬದುಕಿನೊತ್ತಡ ಮತ್ತು ಬಯಕೆಗಳು ಬೇರೆಡೆ ತುಡಿಯುತ್ತವೆ. ಆ ತುಡಿತಗಳ ನಡುವೆಯಿರುವ ಅಂತರವನ್ನು ಈ ಪ್ರಯೋಗವು ಎತ್ತಿ ತೋರಿಸುತ್ತದೆ. ನಾಟಕವು ಪದ್ಯಲಯವುಳ್ಳ ಕಾವ್ಯ ಗಂಧಿಯಾದ ಭಾಷೆಯಲ್ಲಿದೆ.

Namma Samsara

ಮಲಯಾಳಿ ನಾಟಕಕಾರ ಓಂಚೆರಿ ನಾರಾಯಣಪಿಳ್ಳೆ ಅವರ ನಾಟಕವೊಂದನ್ನು ಆಧರಿಸಿದ ಬುದ್ಧಮಾದವ ಪ್ರಯೋಗವು ಮಗುವೊಂದರ ಹೆರಿಗೆಯ ಹೊತ್ತಿನಲ್ಲಿ, ಆ ಮಗುವಿನ ಮನೆತನದವರು ತೋರುವ ಆಸ್ತಿ, ಅಂತಸ್ತು ಮತ್ತು ಹಣಸಂಪಾದನೆಯ ಪೀಪಾಸೆಯನ್ನು ವಿಡಂಬಿಸುವ ವಿಷಾದಯುಕ್ತ ಪ್ರಹಸನವಾಗಿದೆ.

ಮಗುವು ನಿಗದಿಯಾಗಿ ಇಂಥ ನಕ್ಷತ್ರದಲ್ಲಿಯೇ ಹುಟ್ಟಬೇಕೆಂದು ಬಯಸುವ ಅದರ ತಂದೆ ಮತ್ತು ಅಜ್ಜಅಜ್ಜಿಯಂದಿರು ಅದಕ್ಕಾಗಿ ಅದರ ಹುಟ್ಟಿನ ಗಳಿಗೆಯನ್ನು ಮುಂದೂಡಲು ಹವಣಿಸುತ್ತಾರೆ; ಅದರಿಂದ ಮಗುವಿನ ತಾಯಿಗೆ ಮತ್ತು ಮಗುವಿನ ಜೀವಕ್ಕೆ ಅಪಾಯವೊದಗಿ ಬರುತ್ತದೆ ಅನ್ನುವುದನ್ನು ಕೂಡಾ ಕಾಣದ ಹುಂಬತನವನ್ನು ಮೆರೆಯುತ್ತಾರೆ. ಅವರ ಹುಚ್ಚಾಟಗಳ ಬೆಲೂನನ್ನು ವಿವೇಕ ಮತ್ತು ಅಂತರಂಗದರ್ಶನದ ಸೂಜಿಯಿಂದ ಚುಚ್ಚುವ ಕೆಲಸವನ್ನು ಈ ನಾಟಕದ ಬಹು ಅರ್ಥಗರ್ಭಿತ ಸಾಂಕೇತಿಕತೆಯ ಜೋಯಿಸನು ಮಾಡುತ್ತಾನೆ.

ಈ ಎರಡೂ ನಾಟಕಗಳು, ಹೀಗೆ, ಎರಡು ಸಂಸಾರಗಳ ಕಥೆಯನ್ನು ಹೇಳಹೇಳುತ್ತಲೇ ಈವತ್ತಿನ ನಮ್ಮ ಲೋಕಸಂಸಾರಕ್ಕೆ ಹೊರಗನ್ನಡಿ ಮತ್ತು ಒಳಗನ್ನಡಿಯನ್ನು ಹಿಡಿಯುತ್ತವೆ. ಹಾಗಾಗಿ ಈ ಪ್ರಯೋಗಕ್ಕೆ ನಮ್ಮ ಸಂಸಾರ ಎಂಬ ಹೆಸರು ಕೊಟ್ಟಿದೆ. ಎರಡೂ ನಾಟಕಗಳ ವಸ್ತು, ಕಥನ ಮತ್ತು ಕ್ರಿಯೆಗೆ ತಕ್ಕ ವಿನ್ಯಾಸ, ಸಂಗೀತ ಮತ್ತು ನಾಟ್ಯವೃತ್ತಿ ಹಾಗೂ ಅಭಿನಯವನ್ನು ಆಡುವ ಹವಣಿಕೆ ಇಲ್ಲಿ ನಡೆದಿದೆ.

English summary
CFD presents NINASAM TIRUGATA : Here is detail about Bhavabhuti's UTTARARAMA CHARITA and Double bill of 'Shivabikshu', a verse play by Raghunandana S, and 'Buddha Madhava' by Omchery Narayana Pillai staged at SECRETARIAT CLUB AUDITORIUM Cubbon Park,Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X