ಮಕ್ಕಳ ಮೊಬೈಲ್ ಚಟಕ್ಕೆ ಬ್ರೇಕ್ ಹಾಕಲು ನಿಮ್ಹಾನ್ಸ್‌ನಿಂದ ಪೋಷಕರಿಗೆ ಆನ್‌ಲೈನ್ ಸ್ಪೆಷಲ್ ಕ್ಲಾಸ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪೋಷಕರನ್ನು ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆ ಎಂದರೆ ಅದು 'ಮಕ್ಕಳಲ್ಲಿ ಮೊಬೈಲ್ ವ್ಯಸನ' (Mobile Addiction). ಊಟ ಮಾಡುವಾಗ, ಮಲಗುವಾಗ, ಓದುವಾಗ ಹೀಗೆ ಎಲ್ಲದಕ್ಕೂ ಮೊಬೈಲ್ ಬೇಕೇ ಬೇಕು ಎನ್ನುವ ಹಠ ಮಕ್ಕಳದ್ದು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗದೆ ಕಂಗಾಲಾಗಿರುವ ಪೋಷಕರಿಗೆ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯು ಆಶಾಕಿರಣವಾಗಿದೆ. ಶಾಲಾ ಮಕ್ಕಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಚಟವನ್ನು ನಿಯಂತ್ರಿಸಲು ನಿಮ್ಹಾನ್ಸ್‌ನ 'ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ' (SHUT - ಶಟ್) ಕ್ಲಿನಿಕ್ ಪೋಷಕರಿಗಾಗಿಯೇ ವಿಶೇಷ ಆನ್‌ಲೈನ್ ತರಬೇತಿಯನ್ನು ಆಯೋಜಿಸುತ್ತಿದೆ.
ಏನಿದು ತರಬೇತಿ ಕಾರ್ಯಕ್ರಮ?
ತಂತ್ರಜ್ಞಾನದ ವ್ಯಸನ ನಿರ್ವಹಣೆಗಾಗಿ ಪೋಷಕರ ಗುಂಪು (PGMTA) ಎಂಬ ಹೆಸರಿನಲ್ಲಿ ಪ್ರತಿ ಶನಿವಾರ ಆನ್‌ಲೈನ್ ಮೂಲಕ ಪೋಷಕರಿಗೆ ತರಬೇತಿ ನೀಡಲಾಗುತ್ತಿದೆ. ಜುಲೈ 2025ರಲ್ಲಿ ಆರಂಭವಾದ ಈ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಇದುವರೆಗೂ ಸುಮಾರು 5,500ಕ್ಕೂ ಹೆಚ್ಚು ಪೋಷಕರು ಇದರ ಲಾಭ ಪಡೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಶಟ್ ಕ್ಲಿನಿಕ್ ಮುಖ್ಯಸ್ಥರಾದ ಡಾ. ಮನೋಜ್ ಶರ್ಮಾ ಅವರು, "ನಾವು ಪ್ರತಿ ಆನ್‌ಲೈನ್ ಸೆಷನ್‌ಗೂ ಮೊದಲು 'ಎಕ್ಸ್' (ಟ್ವಿಟರ್), ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ನೀಡುತ್ತೇವೆ. ದೇಶದ ನಾನಾ ಮೂಲೆಗಳಿಂದ, ವಿವಿಧ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯುಳ್ಳ ಸುಮಾರು 300ಕ್ಕೂ ಹೆಚ್ಚು ಪೋಷಕರು ಪ್ರತಿ ವಾರ ನೋಂದಣಿ ಮಾಡಿಕೊಳ್ಳುತ್ತಾರೆ. ಆದರೆ, ತರಬೇತಿಯ ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಪ್ರತಿಯೊಬ್ಬ ಪೋಷಕರ ಸಮಸ್ಯೆಗೂ ಸ್ಪಂದಿಸಲು ನಾವು ಒಂದು ಸೆಷನ್‌ಗೆ ಕೇವಲ 50 ರಿಂದ 60 ಜನರಿಗೆ ಮಾತ್ರ ಅವಕಾಶ ನೀಡುತ್ತೇವೆ," ಎಂದು ತಿಳಿಸಿದ್ದಾರೆ.
ಪೋಷಕರ ಅಸಹಾಯಕತೆ ಮತ್ತು ಭಯ
ಮಕ್ಕಳ ಕೈಯಿಂದ ಮೊಬೈಲ್ ಕಸಿದುಕೊಳ್ಳುವುದು ಪೋಷಕರಿಗೆ ಅಷ್ಟು ಸುಲಭದ ಮಾತಾಗಿಲ್ಲ. ಈ ಬಗ್ಗೆ ಮಾತನಾಡಿರುವ ಡಾ. ಶರ್ಮಾ, "ಮಕ್ಕಳಿಗೆ ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾದ ಮಿತ ಬಳಕೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವುದೇ ಪೋಷಕರಿಗೆ ಇರುವ ದೊಡ್ಡ ಸವಾಲು. ಪೋಷಕರು ಬುದ್ಧಿ ಹೇಳಲು ಹೋದರೆ ಮಕ್ಕಳು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ.
ಮೊಬೈಲ್ ಕೊಡದಿದ್ದರೆ ಊಟ ಮಾಡುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸುವುದು, ಸುಳ್ಳು ಹೇಳುವುದು ಅಥವಾ ಆಕ್ರಮಣಕಾರಿಯಾಗಿ ವರ್ತಿಸುವುದು ಮಕ್ಕಳಲ್ಲಿ ಕಂಡುಬರುತ್ತಿದೆ. ಈ ಭಯದಿಂದಲೇ ಪೋಷಕರು ಅಸಹಾಯಕರಾಗಿದ್ದಾರೆ. ಇಂತಹ ಘಟನೆಗಳು ಅನೇಕ ಕುಟುಂಬಗಳಲ್ಲಿ ಗಂಭೀರ ಜಗಳಗಳಿಗೆ ಕಾರಣವಾಗಿದ್ದು, ಕೌನ್ಸಿಲಿಂಗ್‌ಗಾಗಿ ಮನಶಾಸ್ತ್ರಜ್ಞರನ್ನು ಸಂಪರ್ಕಿಸುವ ಪರಿಸ್ಥಿತಿ ನಿರ್ಮಾಣವಾಗಿದೆ," ಎಂದು ವಿವರಿಸಿದರು.
ಗೇಮಿಂಗ್ ಮತ್ತು ಅಶ್ಲೀಲತೆಯ ವ್ಯಸನ
ಕೇವಲ ಸಾಮಾಜಿಕ ಜಾಲತಾಣಗಳಲ್ಲದೆ, ಆನ್‌ಲೈನ್ ಗೇಮಿಂಗ್ ಮತ್ತು ಕೆಲವು ಸಂದರ್ಭಗಳಲ್ಲಿ ಪೋರ್ನೋಗ್ರಫಿ (ಅಶ್ಲೀಲ ದೃಶ್ಯ) ವೀಕ್ಷಣೆಯ ಚಟವೂ ಮಕ್ಕಳನ್ನು ಆವರಿಸಿದೆ. "ನನ್ನ ಬಳಿ ಬರುವ ಬಹುತೇಕ ಪ್ರಕರಣಗಳಲ್ಲಿ, ಹದಿಹರೆಯದ ಮಕ್ಕಳು ದಿನಕ್ಕೆ ಸುಮಾರು 10 ಗಂಟೆಗಳ ಕಾಲ ಮೊಬೈಲ್ ಸ್ಕ್ರೀನ್‌ಗೆ ಅಂಟಿಕೊಂಡಿರುತ್ತಾರೆ ಎಂದು ಪೋಷಕರು ದೂರುತ್ತಾರೆ. ಇದರಿಂದಾಗಿ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ಸಂವಹನ ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಮತ್ತು ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಅರಿವೇ ಇರುವುದಿಲ್ಲ.
ಇದರ ಪರಿಣಾಮವಾಗಿ, ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುವುದಲ್ಲದೆ, ಭವಿಷ್ಯದ ಬಗ್ಗೆ ಯಾವುದೇ ದೀರ್ಘಕಾಲೀನ ಗುರಿಗಳನ್ನು ಹೊಂದುವುದಿಲ್ಲ," ಎಂದು ಡಾ. ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.
ತರಬೇತಿಯಲ್ಲಿ ಏನಿರುತ್ತೆ?
ನಿಮ್ಹಾನ್ಸ್ ನಡೆಸುವ ಈ ಆನ್‌ಲೈನ್ ಸೆಷನ್‌ಗಳು ಪ್ರಮುಖವಾಗಿ ಮೂರು ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ
1.ಸೈಬರ್ ಸಾಕ್ಷರತೆ (Cyber Literacy): ಪೋಷಕರಿಗೆ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು. ಪ್ರೈವೆಸಿ ಸೆಟ್ಟಿಂಗ್‌ಗಳು, ಡೇಟಾ ಸೋರಿಕೆ ತಡೆಗಟ್ಟುವಿಕೆ ಮತ್ತು ಸೈಬರ್ ಬೆದರಿಕೆಗಳಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ ಎಂದು ಕಲಿಸಿಕೊಡಲಾಗುತ್ತದೆ.
2.ಆರೋಗ್ಯಕರ ಸಂವಹನ: ಮಕ್ಕಳೊಂದಿಗೆ ಜಗಳವಾಡುವ ಬದಲು, ಅವರೊಂದಿಗೆ ಆರೋಗ್ಯಕರವಾಗಿ ಮಾತನಾಡುವುದು ಹೇಗೆ ಎಂಬುದನ್ನು ಪೋಷಕರಿಗೆ ತಿಳಿಸಿಕೊಡಲಾಗುತ್ತದೆ.
3.ಸಂಘರ್ಷ ಪರಿಹಾರ: ಮೊಬೈಲ್ ಬಳಕೆಯ ವಿಚಾರವಾಗಿ ಮನೆಯಲ್ಲಿ ಉಂಟಾಗುವ ಗಲಾಟೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಕೌಶಲಗಳನ್ನು ಹೇಳಿಕೊಡಲಾಗುತ್ತದೆ.
"ಈ ಕೌಶಲಗಳನ್ನು ಒಂದೇ ಸೆಷನ್‌ನಲ್ಲಿ ಕಲಿಯಲು ಸಾಧ್ಯವಿಲ್ಲ. ಪೋಷಕರು ತರಬೇತಿ ಸಮಯದಲ್ಲಿ ಟಿಪ್ಪಣಿಗಳನ್ನು ಮಾಡಿಕೊಳ್ಳಬೇಕು ಮತ್ತು ಅದನ್ನು ಪ್ರತಿದಿನ ಅಭ್ಯಾಸ ಮಾಡಬೇಕು. ಅಗತ್ಯವಿದ್ದರೆ ಮತ್ತೆ ಸೆಷನ್‌ಗಳಿಗೆ ಹಾಜರಾಗುವ ಮೂಲಕ ತಮ್ಮ ಕೌಶಲಗಳನ್ನು ಬಲಪಡಿಸಿಕೊಳ್ಳಬೇಕು. ಹೊಸ ಸವಾಲುಗಳನ್ನು ಎದುರಿಸಲು ನಾವು 'ಬೂಸ್ಟರ್ ಸೆಷನ್'ಗಳನ್ನೂ ನಡೆಸುತ್ತೇವೆ. ಜೊತೆಗೆ, ಪ್ರತಿ ಶುಕ್ರವಾರ ಪೋಷಕರಿಗೆ ಬೆಂಬಲ ನೀಡಲು ಹೆಲ್ಪ್‌ಲೈನ್ ಕೂಡ ಲಭ್ಯವಿರುತ್ತದೆ," ಎಂದು ಡಾ. ಶರ್ಮಾ ಮಾಹಿತಿ ನೀಡಿದ್ದಾರೆ.
ನಿಮ್ಮ ಮಕ್ಕಳೂ ಮೊಬೈಲ್ ವ್ಯಸನಕ್ಕೆ ತುತ್ತಾಗಿದ್ದರೆ, ನಿಮ್ಹಾನ್ಸ್‌ನ ಸಾಮಾಜಿಕ ಜಾಲತಾಣಗಳನ್ನು ಫಾಲೋ ಮಾಡುವ ಮೂಲಕ ಮುಂದಿನ ಶನಿವಾರದ ಸೆಷನ್‌ಗೆ ನೋಂದಣಿ ಮಾಡಿಕೊಳ್ಳಬಹುದು.
ಸಂಪರ್ಕ ವಿಳಾಸ
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(NIMHANS)
ಹೊಸೂರು ರಸ್ತೆ, ಬೆಂಗಳೂರು, ಕರ್ನಾಟಕ - 560029
ಶಟ್ ಕ್ಲಿನಿಕ್ ಸಹಾಯವಾಣಿ 094808 29670
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications