ಬೆಂಗಳೂರಿನಲ್ಲಿ ರಾತ್ರಿಯೂ ಸ್ವಚ್ಛತಾ ಕಾರ್ಯಾಚರಣೆ: ಜಿಬಿಎ ಹೊಸ ಮಾದರಿ!
ಬೆಂಗಳೂರಿನಲ್ಲಿ ಸ್ವಚ್ಛತೆ ಕೊರತೆ ಇದೆ. ನಗರದ ಸ್ವಚ್ಛತೆ ಗ್ರೇಟರ್ ಬೆಂಗಳೂರು ಆಡಳಿತ ಹಾಗೂ ಸ್ಥಳೀಯ ಸಂಸ್ಥೆ ಇನ್ನಷ್ಟು ಸಕ್ರಿಯವಾಗಿ ಸ್ವಚ್ಛತಾ ಕಾರ್ಯಗಳನ್ನು ನಡೆಸಬೇಕು ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿರುವುದರ ನಡುವೆಯೇ ಗ್ರೇಟರ್ ಬೆಂಗಳೂರು ಆಡಳಿತ ಹಾಗೂ ಬೆಂಗಳೂರು ನಗರ ಪಾಲಿಕೆಯು ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಗರದಲ್ಲಿ ಬ್ಲಾಕ್‌ಸ್ಪಾಟ್‌ಗಳು (ಎಲ್ಲೆಂದರಲ್ಲಿ ಕಸ ಎಸೆಯುವುದು ಹಾಗೂ ಕಸ ವಿಲೇವಾರಿ) ಸಮಸ್ಯೆಗಳು ಹೆಚ್ಚಾಗುತ್ತಿವೆ ಎನ್ನುವ ಆರೋಪದ ನಡುವೆ ಇದೀಗ ಬೆಂಗಳೂರಿನಲ್ಲಿ ಸ್ವಚ್ಛತೆ ಐದು ನಗರ ಪಾಲಿಕೆಗಳು ಮಹತ್ವದ ಕ್ರಮಗಳನ್ನು ವಹಿಸುತ್ತಿವೆ. ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮವನ್ನು ಅಕ್ಟೋಬರ್ 11, 2025 ರಂದು ರಾತ್ರಿ 10:30ರಿಂದ ಮಧ್ಯರಾತ್ರಿ 1:00ರವರೆಗೆ ಆಯೋಜಿಸಲಾಗಿದೆ ಎಂದು ಪಾಲಿಕೆ ಹೇಳಿದೆ. ಇದು ವಿಶೇಷವಾದ ಅಭಿಯಾನವಾಗಿದೆ.

ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಬೆಳಗ್ಗೆ ಸಮಯದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದೀಗ ರಾತ್ರಿ ಸಮಯದಲ್ಲೂ ಸ್ವಚ್ಛತಾ ಅಭಿಯಾನವನ್ನು ಆಯೋಜಿಸುತ್ತಿರುವುದು ವಿಶೇಷವಾಗಿದೆ. ಈ ಕಾರ್ಯವನ್ನು ರಾಮಮೂರ್ತಿ ನಗರ ಬ್ರಿಡ್ಜ್ ಇಂದ ನಾಗಾವರ ವೀರಣ್ಣಪಾಳ್ಯ ಜಂಕ್ಷನ್ (ರಿಂಗ್ ರಸ್ತೆ) ವರೆಗೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಇಲಾಖೆಗಳು ಹಾಗೂ ಸ್ಥಳೀಯ ಸಂಘಟನೆಗಳು ಸಹಭಾಗಿತ್ವವಹಿಸುತ್ತಿವೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು: ಇನ್ನು ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್ ವಿಭಾಗ, ರಸ್ತೆ ಮೂಲ ಸೌಕರ್ಯ ವಿಭಾಗ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಅರಣ್ಯ ಇಲಾಖೆ, ಟ್ರಾಫಿಕ್ ಪೋಲಿಸ್ ಇಲಾಖೆ ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಉಪಸ್ಥಿತರಿರಲಿದ್ದು, ಪೌರಕಾರ್ಮಿಕರು, ಸಹಾಯಕರು ಮತ್ತು ಚಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಆಟೋ ಟಿಪ್ಪರ್‌ಗಳನ್ನು ಬಳಸಿ ಸ್ವಚ್ಛತಾ ಕಾರ್ಯ ನಡೆಸಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಹಭಾಗಿತ್ವ ಸಂಸ್ಥೆಗಳು:
1. NERWA ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್
2. HBR ಲೇಔಟ್ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್
3. ನಾಗವಾರ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್
4. ಕ್ಲೀನ್ ಬೆಂಗಳೂರು ಎನ್‌ಜಿಒ
5. ಹಸಿರು ದಳ ಎನ್‌ಜಿಒ
6. ಸ್ಥಳೀಯ ಮುಖಂಡರು
7. ಬಾಣಸವಾಡಿ ರೈಸಿಂಗ್ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್
8. ರಿಂಗ್ ರಸ್ತೆಯ ವಾಣಿಜ್ಯ ಮಳಿಗೆಗಳ ಮಾಲೀಕರು
ಈ ಅಭಿಯಾನದ ಮೂಲಕ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಸುಧಾರಿಸುವುದು, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತಾ ಅಭ್ಯಾಸಗಳನ್ನು ಉತ್ತೇಜಿಸುವುದು ನಗರಪಾಲಿಕೆ ಯ ಉದ್ದೇಶವಾಗಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು, ವಾಣಿಜ್ಯ ಮಳಿಗೆಯ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸ್ವಚ್ಛತಾ ಅಭಿಯಾನ ಯಶಸ್ವಿಗೊಳಿಸಲು ಸಹಕಾರಿಸಬೇಕು ಎಂದು ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕಕ್ಕಾಗಿ:
ಶ್ರೀಮತಿ ಮಮತಾ, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಮೊಬೈಲ್ ಸಂಖ್ಯೆ.9480688554 ಸಂಪರ್ಕಿಸಬಹುದು ಎಂದು ಹೇಳಲಾಗಿದೆ.












Click it and Unblock the Notifications