ಇನ್ನೂ ಒಂದು ವಾರ ಪೀಣ್ಯ ಫ್ಲೈ ಓವರ್ ವಾಹನಗಳಿಗೆ ಬಂದ್
ಬೆಂಗಳೂರು, ಫೆಬ್ರವರಿ 03; ಬೆಂಗಳೂರಿನ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ದುರಸ್ತಿ ಕಾಮಗಾರಿ ಇನ್ನು ಒಂದು ವಾರಗಳ ಕಾಲ ನಡೆಯಲಿದೆ. ತುರ್ತು ದುರಸ್ತಿ ಕಾಮಗಾರಿಗಾಗಿ ಡಿಸೆಂಬರ್ 26ರಿಂದಲೇ ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರಿನ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 4ರ ಎಲಿವೇಟೆಡ್ ಹೈವೇಯಲ್ಲಿ ಒಂದು ವಾರಗಳ ಕಾಲ ವಿಶೇಷ ಪರೀಕ್ಷೆಗಳನ್ನು ನಡೆಸಲಿದೆ. ಫ್ಲೈ ಓವರ್ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ಎಲ್ಲಾ ಸುರಕ್ಷತೆಗಳ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಲಿದ್ದು, ಇದಕ್ಕೆ ಒಂದು ವಾರಗಳ ಕಾಲ ಮತ್ತೆ ಫ್ಲೈ ಓವರ್ ಬಂದ್ ಆಗಿರಲಿದೆ.
ಡಿಸೆಂಬರ್ 26ರಿಂದಲೇ ಜಾರಿಗೆ ಬರುವಂತೆ ಎನ್‌ಎಚ್‌ಎಐ ತುರ್ತು ಕಾಮಗಾರಿ ಕೈಗೊಂಡ ಕಾರಣ ಫ್ಲೈ ಓವರ್ ಬಂದ್ ಮಾಡಲಾಗಿದೆ. ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಫೆಬ್ರವರಿ ಮೊದಲ ವಾರದಲ್ಲಿಯೂ ಫ್ಲೈ ಓವರ್ ವಾಹನಗಳಿಗೆ ಮುಕ್ತವಾಗುತ್ತಿಲ್ಲ.
ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಿರುವ ಆದೇಶ ವಿಸ್ತರಣೆಯಾಗುತ್ತಲೇ ಇದೆ. ಆದರೆ ದುರಸ್ತಿ ಕಾರ್ಯ ಇನ್ನೂ ಮುಗಿಯದೇ ವಾಹನ ಸವಾರರು ಪರದಾಡುತ್ತಿದ್ದಾರೆ. 3 ಕಿ. ಮೀ. ಫ್ಲೈ ಓವರ್ ಬಂದ್ ಆಗಿರುವ ಕಾರಣ ಬೆಂಗಳೂರು-ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿದ್ದು ಜನರು ಪರದಾಟ ನಡೆಸುತ್ತಿದ್ದಾರೆ.

ಫ್ಲೈ ಓವರ್ ಬಂದ್ ಆಗಿದ್ದು ಏಕೆ?
ಡಿಸೆಂಬರ್ 25ರಂದು ನಿರ್ವಹಣಾ ಕಾರ್ಯ ಕೈಗೊಳ್ಳುವಾಗ ಪೀಣ್ಯ ಎಲಿವೇಟೆಡ್ ಹೈವೇ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಪಿಲ್ಲರ್ ನಂ 102 ಮತ್ತು 103ರ ಮಧ್ಯೆ 8ನೇ ಮೈಲಿಯ ಸ್ವಾತಿ ಪೆಟ್ರೋಲ್ ಬಂಕ್ ಬಳಿ ಫ್ಲೈ ಓವರ್‌ಗೆ ಅಳವಡಿಸಿರುವ ಕೇಬಲ್ ತುರ್ತಾಗಿ ದುರಸ್ತಿ ಆಗಬೇಕು ಎಂಬುದು ಪತ್ತೆ ಮಾಡಲಾಯಿತು. ಆದ್ದರಿಂದ ಡಿಸೆಂಬರ್ 26ರಿಂದಲೇ ಅನ್ವಯವಾಗುವಂತೆ ಫ್ಲೈ ಓವರ್ ಎರಡೂ ಕಡೆ ವಾಹನ ಸಂಚಾರ ಬಂದ್ ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ದುರಸ್ತಿ ಕಾರ್ಯವನ್ನು ಕೈಗೊಂಡಿದೆ. ಒಂದು ವಾರದ ಮಟ್ಟಿಗೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಬಳಿಕ ಆದೇಶ ವಿಸ್ತರಣೆ ಆಗುತ್ತಲೇ ಸಾಗಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ.

8 ಪಿಲ್ಲರ್‌ಗಳ ನಡುವೆ ಅದೇ ಸಮಸ್ಯೆ
ಫ್ಲೈ ಓವರ್‌ನ ಪಿಲ್ಲರ್ ನಂ 102 ಮತ್ತು 103ರ ಮಧ್ಯೆ ಫ್ಲೈ ಓವರ್‌ಗೆ ಅಳವಡಿಸಿರುವ ಕೇಬಲ್ ಸಡಿಲಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಆರಂಭಿಸಿದ ಬಳಿಕ 8 ಪಿಲ್ಲರ್‌ಗಳಲ್ಲಿ ಇದೇ ಮಾದರಿ ತೊಂದರೆ ಕಂಡಿದೆ. ಆದ್ದರಿಂದ ಅದನ್ನು ದುರಸ್ತಿ ಮಾಡಬೇಕಾ ಕಾರಣ ಒಂದು ವಾರಕ್ಕೆ ಮುಗಿಯಬೇಕಿದ್ದ ಕಾಮಗಾರಿ ಒಂದು ತಿಂಗಳು ತೆಗೆದುಕೊಂಡಿದೆ. 10 ವರ್ಷದ ಹಿಂದೆ ನಿರ್ಮಿಸಿರುವ ಫ್ಲೈ ಓವರ್‌ನಲ್ಲಿ 116 ಪಿಲ್ಲರ್‌ಗಳಿವೆ. ಇಡೀ ಫ್ಲೈ ಓವರ್‌ನಲ್ಲಿ ವಿಶೇಷ ಪರೀಕ್ಷೆ ಮಾಡಿದ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಇನ್ನೂ ಒಂದು ವಾರ ಕಾಮಗಾರಿ ನಡೆಯಲಿದೆ.

8 ದಿನದಲ್ಲಿ ಪರೀಕ್ಷೆ ಪೂರ್ಣ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ. ಕೆ. ವಥೋರೆ ಈ ಕುರಿತು ಮಾತನಾಡಿದ್ದು, 'ಐಐಎಸ್‌ಸಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ತಜ್ಞರು ಒಂದು ವಾರಗಳ ಕಾಲ ಫ್ಲೈ ಓವರ್ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ವಾಹನಗಳಿಗೆ ಫ್ಲೈ ಓವರ್ ಓಪನ್ ಮಾಡುವ ಮುನ್ನ ವಿಶೇಷ ಪರೀಕ್ಷೆ ನಡೆಸಬೇಕಿದೆ. ಇದಕ್ಕೆ ಒಂದು ವಾರಗಳ ಕಾಲ ಕಾಲಾವಕಾಶ ಬೇಕು ಎಂದು ಅಂದಾಜಿಸಲಾಗಿದೆ" ಎಂದು ಹೇಳಿದ್ದಾರೆ.
ದಾಸರಹಳ್ಳಿಯ ಶಾಸಕ ಆರ್. ಮಂಜುನಾಥ್ ಎನ್‌ಎಚ್‌ಎಐಗೆ ಸೋಮವಾರ ಪತ್ರ ಬರೆದಿದ್ದರು. ಕಾಮಗಾರಿ ನಿಧಾನವಾಗುತ್ತಿದೆ. ಇದರಿಂದಾಗಿ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಆಗುತ್ತಿರುವ ವಾಹನ ಸಂಚಾರ ದಟ್ಟಣೆಯಿಂದ ಜನರು ಪರದಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದರು.

ರಸ್ತೆಯಲ್ಲಿ ಸಂಚಾರ ದಟ್ಟಣೆ
ಪೀಣ್ಯ ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. 10 ನಿಮಿಷದಲ್ಲಿ ಸಂಚಾರ ನಡೆಸಬೇಕಾದ ಮಾರ್ಗದಲ್ಲಿ ವಾಹನ ಸವಾರರು ಗಂಟೆಗಟ್ಟಲೇ ಕಾಯುತ್ತಿದ್ದಾರೆ. ಈ ಮಾರ್ಗದಲ್ಲಿ ಪ್ರತಿದಿನ 50 ರಿಂದ 60 ಸಾವಿರ ವಾಹನಗಳು ಸಂಚಾರ ನಡೆಸುತ್ತವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರಕ್ಕೆ ಹೊರ ಜಿಲ್ಲೆಗಳಿಂದ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ.
ತುಮಕೂರು ಕಡೆಯಿಂದ ಬೆಂಗಳೂರು ನಗರದೊಳಗೆ ಪ್ರವೇಶಿಸುವ ವಾಹನಗಳು ಮಾದಾವರದ ಬಳಿ ಬಲತಿರುವು ಪಡೆದು ನೈಸ್ ರಸ್ತೆಯ ಮೂಲಕ ಬೆಂಗಳೂರು ನಗರಕ್ಕೆ ಬರಬಹುದಾಗಿದೆ ಎಂದು ಪರ್ಯಾಯ ಮಾರ್ಗವನ್ನು ಸಹ ಪೀಣ್ಯ ಸಂಚಾರಿ ಪೊಲೀಸರು ನೀಡಿದ್ದಾರೆ.











Click it and Unblock the Notifications