ರಾಜ್ಯಕ್ಕೆ ಎನ್‌ಜಿಟಿ ಎದುರು ಭಾರಿ ಮುಖಭಂಗ: 75 ಕೋಟಿ ದಂಡ
ಬೆಂಗಳೂರು, ಡಿಸೆಂಬರ್ 6: ಬೆಂಗಳೂರಿನ ಬೆಳ್ಳಂದೂರು ಕೆರೆ ಸೇರಿದಂತೆ ನೈಸರ್ಗಿಕ ಜಲಸಂಪನ್ಮೂಲವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಛಾಟಿ ಬೀಸಿದ್ದು 50 ಕೋಟಿ ರೂ ದಂಡ ವಿಧಿಸಿದೆ.
ಬೆಂಗಳೂರಿನ ಕೆರೆಗಳನ್ನು ಸಂರಕ್ಷಿಸಲು ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಹಾಗೂ ರಾಜ್ಯಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಬಿಬಿಎಂಪಿಗೆ 25 ಕೋಟಿ ರೂ ದಂಡ ವಿಧಿಸಿದೆ. ಮಾತ್ರವಲ್ಲದೆ ಬೆಂಗಳೂರಿನ ಬೆಳ್ಳಂದೂರು, ಅಗರ ಮತ್ತಿತರೆ ಕೆರೆಗಳನ್ನು ಕೂಡಲೇ ಅಭಿವೃದ್ಧಿ ಪಡಿಸುವಂತೆ ತಾಕೀತು ಮಾಡಿದೆ.
ಇದೇ ವೇಳೆ ಬೆಳ್ಳಂದೂರು ಸೇರಿದಂತೆ ಇನ್ನಿತರೆ ಕೆರೆಗಳಿಗೆ ನೇರವಾಗಿ ಕೊಳಚೆ ಹಾಗೂ ವಿಷಯುಕ್ತ ನೀರನ್ನು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀಕ್ಷ್ಣವಾಗಿ ಟೀಕಿಸಿರುವ ಎನ್‌ಜಿಟಿ ನೈಸರ್ಗಿಕ ನೀರನ್ನು ಮಲಿನಗೊಳಿಸುವುದು ಕ್ರಿಮಿನಲ್ ಅಪವಾದ ಎಂದು ಕಟುವಾದ ಮಾತಿನಿಂದ ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಎನ್‌ಜಿಟಿ ಎದುರು ಕೆರೆ ರಕ್ಷಣೆ ವಿಚಾರದಲ್ಲಿ ಎರಡನೇ ಬಾರಿ ಮುಖಭಂಗ ಹಾಗೂ ದಂಡ ವಿಧಿಸಾಗಿದ್ದು, ಇನ್ನು ಮುಂದಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ನೇರ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಎನ್‌ಜಿಟಿ ನೀಡಿರುವ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರಿನ ಕೆರೆಗಳನ್ನು ರಕ್ಷಿಸಲು ಈ ವರೆಗೂ ಸರ್ಕಾರ ಹಾಗೂ ಬಿಬಿಎಂಪಿ ತೋರಿದ್ದ ನಿರ್ಲಕ್ಷ್ಯ ಭಾವನೆಗೆ ತಕ್ಕ ಶಾಸ್ತಿ ಆಗಿದೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಬಿಎಂಪಿಯಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ಎನ್‌ಜಿಟಿ ನೀಡಿರುವ ಆದೇಶವನ್ನು ಸ್ವಾಗತಿಸಿ ರಾಜ್ಯ ಸರ್ಕಾರಕ್ಕೆ ಎನ್‌ಜಿಟಿ 50 ಕೋಟಿ ರೂ ದಂಡ ಹಾಕಿದ್ದು, ಇದರಿಂದ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬೆಂಗಳೂರು ಅಭಿವೃದ್ಧಿ ಸಚಿವ ಜಿ ಪರಮೇಶ್ವರ್ ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದೆ.












Click it and Unblock the Notifications