Rent In Bengaluru: ಹೊಸ ಆಸ್ತಿ ತೆರಿಗೆ ನಿಯಮಗಳಿಂದ ಬೆಂಗಳೂರಿನಲ್ಲಿ ಬಾಡಿಗೆದಾರ ಮತ್ತು ಮಾಲೀಕ ಇಬ್ಬರಿಗೂ ಬರೆ!
ಬೆಂಗಳೂರು, ಫೆಬ್ರವರಿ.26: ಬೆಂಗಳೂರು ನಗರದ ನಾಗರಿಕ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಏಪ್ರಿಲ್ 1 ರಿಂದ ಮೌಲ್ಯಾಧಾರಿತ ಆಸ್ತಿ ತೆರಿಗೆಯನ್ನು ಜಾರಿಗೆ ತರಲಿದೆ. ಈ ಹೊಸ ಆಸ್ತಿ ತೆರಿಗೆ ಜಾರಿಯಿಂದಾಗಿ ಮನೆ ಅಥವಾ ವಾಣಿಜ್ಯ ಸ್ಥಳವನ್ನು ಬಾಡಿಗೆಗೆ ನೀಡುವ ಮಾಲೀಕರಿಗೆ ತೆರಿಗೆ ಹೊರೆ ಬೀಳಲಿದೆ.
ಬೆಂಗಳೂರು ನಗರದಲ್ಲಿ ವಸತಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ತಮ್ಮ ಆಸ್ತಿಯನ್ನು ಬಾಡಿಗೆಗೆ ನೀಡಿರುವ ಆಸ್ತಿ ಮಾಲೀಕರಿಗೆ ಹೆಚ್ಚುವರಿ ಹೊರೆ ಬೀಳಲಿದೆ. ಮನೆ, ಅಂಗಡಿಗಳನ್ನು ಬಾಡಿಗೆ ನೀಡುವ ಬಾಡಿಗೆದಾತನಿಗೆ ತೆರಿಗೆ ಹೆಚ್ಚಾಗುವ ಕಾರಣ ಹೆಚ್ಚಿನ ತೆರಿಗೆಗಳನ್ನು ಸರಿದೂಗಿಸಲು ಬಾಡಿಗೆಯನ್ನು ಮತ್ತಷ್ಟು ಹೆಚ್ಚಿಸುವುದು ಸಹಜ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಮನೆ ಮಾಡುವುದು ಮತ್ತೂ ದುಬಾರಿ!
ಈಗಾಗಲೇ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ವೆಚ್ಚ ಸಾಕಷ್ಟಿದೆ. ಬಾಡಿಗೆ ಬರೆ ಎದುರಿಸುತ್ತಿರುವ ಬಾಡಿಗೆದಾರನಿಗೆ ಈ ಹೊಸ ಆಸ್ತಿ ತೆರಿಗೆ ನಿಯಮ ಮತ್ತಷ್ಟು ಹೊರೆ ನೀಡಲಿದೆ. ಹೊಸ ತೆರಿಗೆ ನಿಯಮಗಳ ಪ್ರಕಾರ, ಬಾಡಿಗೆದಾರರು ಸ್ವಯಂ ವಸತಿ ಆಸ್ತಿಗಳು ನೀಡುವ ತೆರಿಗೆ ಮೊತ್ತಕ್ಕಿಂತ ಎರಡು ಪಟ್ಟು ಪಾವತಿಸಬೇಕಾಗುತ್ತದೆ. ಇದೆ ಹೊತೆಗೆ ಇತರ ವರ್ಗದ ವಾಣಿಜ್ಯ ಕಟ್ಟಡಗಳಿಗೆ ಸುಂಕವನ್ನು 3 ರಿಂದ 5 ಪಟ್ಟು ಹೆಚ್ಚಿಸಲಾಗಿದೆ.
ಬಿಬಿಎಂಪಿಯ ಹೊಸ ಆಸ್ತಿ ತೆರಿಗೆ ನಿಯಮಗಳ ಪ್ರಕಾರ ಬಾಡಿಗೆ ವಸತಿ ಸ್ಥಳಗಳು ಮನೆಗಳಿಗಿಂತ 100% ಹೆಚ್ಚು ತೆರಿಗೆಯನ್ನು ಕಟ್ಟಬೇಕಾಗುತ್ತದೆ. ವಾಣಿಜ್ಯ ಗುಣಲಕ್ಷಣಗಳಿಗಾಗಿ ಅಂದರೆ ಮಾಲ್‌ಗಳು, ಹೋಟೆಲ್‌ಗಳು ಮುಂತಾದ ಅಂಗಡಿ ಮುಂಗಟ್ಟುಗಳ ತೆರಿಗೆ 3 ರಿಂದ 5 ಪಟ್ಟು ಹೆಚ್ಚಾಗಿರುತ್ತದೆ.
ಬಾಡಿಗೆದಾರರೇ ಅಂತಿಮ ಬಲಿಪಶುಗಳು!
ಉತ್ತಮ ಜೀವನ, ಉದ್ಯೋಗ, ಸ್ವಯಂ ಉದದ್ಯೋಗದ ಕನಸು ಕಂಡು ಸಿಲಿಕಾನ್ ಸಿಟಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇಲ್ಲಿ ಬಾಡಿಗೆ ಮನೆಯನ್ನು ಹುಡುಕುವುದು, ಮನೆ ಸುಗುವುದು ನಿಜಕ್ಕೂ ದೊಡ್ಡ ಸವಾಲಿನ ಕೆಲಸ. ಕೈಗೆಟಕುವ ದರದಲ್ಲಿ ಬಾಡಿಗೆ ಮನೆ ಸಿಗದೆ ಪರದಾಡುತ್ತಿರುವ ಜನಸಂಖ್ಯೆ ದೊಡ್ಡದಿದೆ.

ಇದರ ಬೆನ್ನಲ್ಲೇ ಈ ಹೊಸ ಆಸ್ತಿ ತೆರಿಗೆಯ ಒಟ್ಟು ಪರಿಣಾಮ ಬೀರುವುದು ಈ ಜನರ ಮೇಲೆಯೆ. ಮನೆ, ಅಂಗಡಿ ಮಾಲೀಕರು ಹೆಚ್ಚಿನ ತೆರಿಗೆಯ ಹೊರೆಯನ್ನು ಹಾಕುವುದು ಕೂಡ ಬಾಡಿಗೆದಾರರ ಮೇಲೆಯೇ. ಹಾಗಾಗಿ ಬೆಂಗಳೂರಿಗೆ ಹೊಸ ಕನಸು ಕಟ್ಟಿಕೊಂಡು ಬರುವವರು ಇಲ್ಲಿನ ಬಾಡಿಗೆಯನ್ನು ಭರಿಸುವ ಶಕ್ತಿಯೊಂದಿಗೆ ಬರಬೇಕಾಗಬಹುದು.
ಇನ್ನು, "ಇದು ನಾವು ಅಳವಡಿಸಿಕೊಳ್ಳುತ್ತಿರುವ ಹೊಸ ಮಾದರಿಯಲ್ಲ. ಕರ್ನಾಟಕದ ಬಹುತೇಕ ಎಲ್ಲಾ ನಗರಗಳು ಮಾರ್ಗದರ್ಶಿ ಮೌಲ್ಯ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಹೊಸ ವ್ಯವಸ್ಥೆಯ ಪರಿಣಾಮಗಳನ್ನು ನೋಡಲು ಬಿಬಿಎಂಪಿ ಆರು ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಪರೀಕ್ಷೆ ನಡೆಸಿತು. ಒಟ್ಟಾರೆಯಾಗಿ, ಆಸ್ತಿ ತೆರಿಗೆ ಸಂಗ್ರಹವು ಶೇಕಡಾ 5 ಕ್ಕಿಂತ ಹೆಚ್ಚಾಗುವುದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ" ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications