ವಿಧಾನಸೌಧಕ್ಕೆ ಹೊಸ ಲೈಟಿಂಗ್ ವ್ಯವಸ್ಥೆ: ಪ್ರತಿ ವೀಕೆಂಡ್‌ನಲ್ಲೂ ವೀಕ್ಷಣೆಗೆ ಅವಕಾಶ
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಇದೀಗ ಹೊಸ ರೂಪ ನೀಡಲಾಗಿದೆ. ಸಾಮಾನ್ಯವಾಗಿ ವಿಶೇಷ ದಿನಗಳಂದು ಈ ಹಿಂದೆ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗುತ್ತಿತ್ತು. ಇದನ್ನು ಕಣ್ತುಂಬಿಕೊಳ್ಳಲು ಜನ ಮುಗಿಬೀಳುತ್ತಿದ್ದರು. ಇದೀಗ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವೀಕೆಂಡ್‌ನಲ್ಲೂ ಇನ್ನು ಮುಂದೆ ವಿಧಾನಸೌಧವು ಈ ಹೊಸ ಲೈಟಿಂಗ್ ವ್ಯವಸ್ಥೆಯಲ್ಲಿ ಮಿಂಚಲಿದೆ. ಪ್ರತಿ ವಾರಾಂತ್ಯದಲ್ಲಿ ಸಂಜೆ ವೇಳೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಮಹತ್ವದ ದಿನಗಳಂದು ಈ ದೀಪಗಳನ್ನು ಹಾಕಲಾಗುತ್ತದೆ.
ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸ್ಪೀಕರ್ ಯು.ಟಿ.ಖಾದರ್ ಅವರು ಭಾನುವಾರ ಸಂಜೆ 4ರಿಂದ 7ರವರೆಗೆ ಸಾರ್ವಜನಿಕರಿಗೆ ವಿದ್ಯುತ್ ದೀಪಗಳಿಂದ ಬೆಳಗುವ ವಿಧಾನಸೌಧಕ್ಕೆ ಭೇಟಿ ನೀಡಲು ಮತ್ತು ವೀಕ್ಷಿಸಲು ಅವಕಾಶ ನೀಡಬೇಕೆಂದು ಪ್ರಸ್ತಾಪ ಮಾಡಿದ್ದಾರೆ. ಇಲ್ಲಿವರೆಗೆ ಹೊರಗಿನಿಂದಲೇ ವಿಧಾನಸೌಧವನ್ನು ವೀಕ್ಷಿಸಲು ಅವಕಾಶವಿತ್ತು. ಶೀಘ್ರದಲ್ಲೇ ಈ ಲೈಟಿಂಗ್ ವ್ಯವಸ್ಥೆ ನೋಡಲು ವಿಧಾನಸೌಧಕ್ಕೆ ಪ್ರವೇಶ ನೀಡಲು ರಾಜ್ಯ ಸರ್ಕಾರ ಚಿಂತನೆಯಲ್ಲಿದೆ. ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ಈ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಇನ್ನು ಮುಂದೆ ವಿದ್ಯುತ್ ದೀಪಗಳ ಪ್ರಭಾವಳಿಯಲ್ಲಿ ಮಿಂದೇಳಲಿದೆ ನಮ್ಮ ಶಕ್ತಿಸೌಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂಸತ್ತು ಮತ್ತು ವಿಧಾನಸೌಧ ಜನರ ಮತ್ತು ರಾಜ್ಯದ ಹಾಗೂ ದೇಶದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ದೇಗುಲಗಳು ಎಂದು ಸಿಎಂ ಕರೆದಿದ್ದಾರೆ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತನ್ನು ಪ್ರತಿಯೊಬ್ಬರೂ ಸಾರ್ಥಕಗೊಳಿಸುವ ರೀತಿಯಲ್ಲಿ ಕೆಲಸ ಮಾಡಿ, ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಸ್ವಾತಂತ್ರ್ಯ ಬಂದು, ಸಂವಿಧಾನ ರಚನೆಯಾಗಿ 75 ವರ್ಷಗಳಾದರೂ ಅಸಮಾನತೆಯನ್ನು ಇನ್ನೂ ತೆಗೆದು ಹಾಕಲು ಸಾಧ್ಯವಾಗಿಲ್ಲ. ವಿಧಾನಸೌಧ, ಸುವರ್ಣಸೌಧ, ವಿಕಾಸಸೌಧದಲ್ಲಿ ಕುಳಿತು ಸಮಸಮಾಜ ತರುವ ದಿಕ್ಕಿನಲ್ಲಿ ಶ್ರಮಿಸಬೇಕು. ಕಾನೂನು ಸುವ್ಯವಸ್ಥೆ ಸುಗಮ ಆಗಿರಬೇಕಾದರೆ ಅಸಮಾನತೆ ಅಳಿಯಬೇಕು ಎಂದಿದ್ದಾರೆ.

ಜನರ ಕೆಲಸ ಸರಿಯಾಗಿ ಮಾಡಲು ನಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಈ ಉದ್ದೇಶಕ್ಕಾಗಿ ವಿಧಾನಸೌಧ ಕಟ್ಟಿಸಲಾಗಿದೆ. ಈ ಉದ್ದೇಶ ಈಡೇರಿಸಿ, ಜನರ ಸಮಸ್ಯೆ ಬಗೆಹರಿಸುವ ಶಕ್ತಿ ನಮಗೆ ಬರಲಿ, ರಾಜ್ಯದ ಜನತೆಗೂ ಆರ್ಥಿಕ ಶಕ್ತಿ ತರಲು ಯತ್ನಿಸೋಣ. ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ಅಳವಡಿಸಲು ಕಾಳಜಿ ವಹಿಸಿ, ಅದನ್ನು ಕಾರ್ಯಗತ ಮಾಡಿದ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ವಿಧಾನಸೌಧ ಒಂದು ಪಾರಂಪರಿಕ ಕಟ್ಟಡವಾಗಿದ್ದು, ನಮ್ಮ ರಾಜ್ಯದ ಹೆಮ್ಮೆ ಹಾಗೂ ಆಡಳಿತದ ಹೆಗ್ಗುರುತು. ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಗಳ ಅಲಂಕಾರವನ್ನು ಗೌರವಾನ್ವಿತ ಸಭಾಧ್ಯಕ್ಷರಾದ ಯುಟಿ ಖಾದರ್, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸೇರಿ ಲೋಕಾರ್ಪಣೆ ಮಾಡಲಾಗಿದೆ. ಝಗಮಗಿಸುವ ಬೆಳಕಿನ ಚಿತ್ತಾರ ನೋಡುಗರ ಕಣ್ಮನ ಸೆಳೆಯುವುದಲ್ಲದೆ, ವಿಧಾನಸೌಧದ ಮೆರುಗನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.












Click it and Unblock the Notifications