E-Khata: ಕರ್ನಾಟಕದಲ್ಲಿ ಇ - ಖಾತಾದಲ್ಲಿ ಹೊಸ ಸಮಸ್ಯೆ, ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ!
E-Khata: ಕರ್ನಾಟಕ ಸರ್ಕಾರವು ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ವಂಚನೆ ಆಗಬಾರದು, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಬೇಕು ಎನ್ನುವ ಉದ್ದೇಶದಿಂದ ಇ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಇ ಖಾತಾ ಕಡ್ಡಾಯ ಮಾಡಿದ ಮೇಲೆ ಹಲವರು ಇ ಖಾತಾ ಮಾಡಿಸಿಕೊಂಡಿದ್ದಾರೆ. ಆದರೆ ಇ ಖಾತಾದಿಂದ ಗೊಂದಲಗಳು ಬಗೆಹರಿದಿಲ್ಲ. ಇನ್ನು ಇ ಖಾತಾ ಮಾಡಿಸಿಕೊಳ್ಳುವುದರಲ್ಲಿ ಹಲವು ಗೊಂದಲಗಳು ಇನ್ನೂ ಮುಂದುವರಿದಿದೆ. ಇ ಖಾತಾಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮತ್ತೊಂದು ಹೊಸ ಸಮಸ್ಯೆ ಎದುರಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರವು ವಿವಿಧ ಆಸ್ತಿಗಳಿಗೆ ಇ ಖಾತಾ ಕಡ್ಡಾಯ ಮಾಡಿದೆ. ಆದರೆ ಇದರಿಂದ ಶಿಕ್ಷಣದ ಮೇಲೆ ಪರಿಣಾಮ ಬೀರುವ ಆತಂಕ ಶುರುವಾಗಿದೆ. ಹೌದು ಕರ್ನಾಟಕ ಸರ್ಕಾರವು ಇ ಖಾತಾ ಕಡ್ಡಾಯ ಮಾಡಿದ ಮೇಲೆ ಆಸ್ತಿಗಳ ಖರೀದಿ ಹಾಗೂ ಮಾರಾಟದ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಬೀರಿದೆ. ಆದರೆ, ಇದೀಗ ಇದು ಶಿಕ್ಷಣದ ಮೇಲೆಯೂ ಪರೋಕ್ಷವಾಗಿ ಪರಿಣಾಮ ಬೀರುವ ಸಾಧ್ಯತೆ ಶುರುವಾಗಿದೆ. ಅದು ಹೇಗೆ ಎನ್ನುವ ವಿವರ ಮುಂದೆ ನೋಡೋಣ.

ರಾಜ್ಯದ ಅನುದಾನ ರಹಿತ ಶಾಲಾ ಕಾಲೇಜುಗಳ ಕಟ್ಟಡಗಳನ್ನು ವಾಣಿಜ್ಯ ಕಟ್ಟಡವೆಂದು ಪರಿಗಣಿಸಲಾಗುತ್ತಿದೆ. ಈ ನಿರ್ದಿಷ್ಟ ಆಸ್ತಿಗಳನ್ನು ಆಸ್ತಿ ಶುಲ್ಕ ಕಟ್ಟಿಸಿಕೊಂಡು ಇ-ಖಾತಾ ಕೊಡಲಾಗುತ್ತಿದೆ ಎಂದು ಅನುದಾನ ರಹಿತ ಶಾಲೆಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅರಸ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇ-ಖಾತಾ ಆನ್ ಲೈನ್ ಅರ್ಜಿ ಸಲ್ಲಿಸುವಾಗ ಇರುವ ಆಯ್ಕೆಯಲ್ಲಿ ಶಾಲೆಗಳ ಕಟ್ಟಡಗಳಿಗೆ ಸಂಬಂಧಿಸಿದಂತೆ ಶಾಲೆ ಅಥವಾ ಕಾಲೇಜು ಕಟ್ಟಡ ಎನ್ನುವ ಆಯ್ಕೆಯನ್ನೇ ಕೊಡದೆ ಇರುವುದರಿಂದ ಸಮಸ್ಯೆ ಆಗುತ್ತಿದೆ. ಈ ಕೂಡಲೇ ಕಂದಾಯ ಇಲಾಖೆಯ ಅಧಿಕಾರಿಗಳು ಇ-ಖಾತಾ ತಂತ್ರಾಂಶದಲ್ಲಿ ಶಾಲೆ ಮತ್ತು ಕಾಲೇಜು ಕಟ್ಟಡ ಎನ್ನುವ ಆಯ್ಕೆಯನ್ನು ಸೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ ಎಂದು "VK" ವರದಿ ಮಾಡಿದೆ.
ಕರ್ನಾಟಕದ ಎಲ್ಲಾ ಖಾಸಗಿ ಅನುದಾನರಹಿತ ಶಾಲೆಗಳು ಇ-ಖಾತಾಗೆ ಅರ್ಜಿ ಹಾಕುತ್ತಿದ್ದಾರೆ. ಆದರೆ, ತಂತ್ರಾಂಶದಲ್ಲಿ ಶಾಲಾ ಮತ್ತು ಕಾಲೇಜು ಕಟ್ಟಡ ಎಂದು ನಮೂದಿಸುವುದಕ್ಕೆ ಆಯ್ಕೆ ನೀಡಿಲ್ಲ. ಈ ಕಾರಣದಿಂದಾಗಿ ಅಧಿಕಾರಿಗಳು ಶಾಲಾ ಕಟ್ಟಡಗಳನ್ನು ವಾಣಿಜ್ಯ ಕಟ್ಟಡಗಳು ಎಂದು ಪರಿಗಣಿಸಿ ಅಥವಾ ನಮೂದಿಸಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇ- ಖಾತಾ ತಂತ್ರಾಂಶದಲ್ಲಿ ಆಗಿರುವ ಈ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸಬೇಕು. ಈ ಸಮಸ್ಯೆ ಪರಿಹಾರವಾಗದೆ ಇರುವುದರಿಂದಾಗಿ ಅನುದಾನ ರಹಿತ ಶಾಲಾ ಕಟ್ಟಡಗಳಿಗೆ ಆಸ್ತಿ ತೆರಿಗೆಯಿಂದ ವಿನಾಯ್ತಿ ಸಿಗುತ್ತಿದ್ದರೂ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಸರ್ಕಾರ ಮತ್ತು ಕಂದಾಯ ಇಲಾಖೆ ಮಧ್ಯಪ್ರವೇಶ ಮಾಡಿ ಇ- ಖಾತಾ ತಂತ್ರಾಂಶದಲ್ಲಿ ತಿದ್ದುಪಡಿ ಮಾಡಬೇಕು. ಶಾಲಾ ಮತ್ತು ಕಾಲೇಜು ಕಟ್ಟಡ ಎನ್ನುವ ಅಂಶವನ್ನು ನಮೂದಿಸಿ, ರಾಜ್ಯದ ಸಾವಿರಾರು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಹೊರೆಯನ್ನು ತಪ್ಪಿಸಬೇಕು ಎಂದು ಆಗ್ರಹಿಸಲಾಗಿದೆ.












Click it and Unblock the Notifications