ನಾನೇನೂ ಲಂಚ ತಗೋಳಲ್ಲ: ಸಚಿವರ ಖಡಕ್ ನುಡಿ

ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಮಾನವೀಯ ಕಳಕಳಿಯ ಸಚಿವ ಎನಿಸಿಕೊಂಡಿರುವ ಕಿಮ್ಮನೆ ರತ್ನಾಕರ ಅವರೇ ಈ ಮಾತನ್ನು ಹೇಳಿರುವುದು. ಅದೂ ತಮ್ಮ ಶಿಕ್ಷಣ ಇಲಾಖೆಯ ಭ್ರಷ್ಟ ಅಧಿಕಾರಿಗಳ ಎದುರಿಗೆ ಎದೆಯುಬ್ಬಿಸಿ ಹೇಳಿದ್ದಾರೆ.
ತಮ್ಮ ಇಲಾಖೆಯ ಸಚಿವಾಲಯದಲ್ಲಿಯೇ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಕಂಡು ದಂಗಾದ ಸಚಿವ ಕಿಮ್ಮನೆ ರತ್ನಾಕರ ಅವರು ಉನ್ನತಾಧಿಕಾರಿಗಳನ್ನು ಗುರಿಯಾಗಿಸಿಕೊಂಡು ಮಾತಿನ ಚಾಟಿ ಬೀಸಿದ್ದಾರೆ.
ಆರು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ಬಳಿಕ ಮೂರನೆಯ ಬಾರಿಗೆ ಎಂಎಸ್ ಬಿಲ್ಡಿಂಗಿನಲ್ಲಿರುವ ಸಚಿವಾಲಯಕ್ಕೆ ದಿಢೀರನೆ ಭೇಟಿ ನೀಡಿದ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಚೇರಿಯಲ್ಲಿ ಕುಳಿತು ಬುಧವಾರ ಕಡತಗಳ ವಿಲೇವಾರಿ ಮಾಡತೊಡಗಿದರು. ಸ್ಥಳದಲ್ಲಿಯೇ ಇದ್ದ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಮುಖಂಡರು ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳು, ಭ್ರಷ್ಟಾಚಾರದ ಬಗ್ಗೆ ಅಧಿಕಾರಿಗಳ ಸಮ್ಮುಖದಲ್ಲೇ ಮಾಹಿತಿ ನೀಡಿದರು.
ಕಾನೂನುಬದ್ಧ ಕಡತಗಳಿಗೂ ಲಂಚ ನೀಡಬೇಕಾದ ಸ್ಥಿತಿಯಿದೆ. ಪ್ರತಿ ಟೇಬಲಿಗೂ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ, ದೂರುಗಳ ಸುರಿಮಳೆಯನ್ನೇ ಸುರಿಸಿದರು. ( ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಸಂದರ್ಶನ )
ಇದಾದ ನಂತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕಿಮ್ಮನೆ ರತ್ನಾಕರ ಅವರು 'ನಾನು ಯಾರಿಂದಲೂ ಲಂಚ ಕೇಳಿದವನೇ ಅಲ್ಲ. ಅಂಥಾದ್ದರಲ್ಲಿ ನೀವ್ಯಾಕ್ರಿ ಲಂಚ ಪಡೀತೀರಿ? ಒಂದು ವೇಳೆ ನಾನೂ ಲಂಚ ಪಡೆಯುತ್ತಿದ್ದರೆ ಈ ಅಮಾಯಕರಿಂದ ಇನ್ನೆಷ್ಟು ದುಡ್ಡು ಹೊಡೆಯುತ್ತಿದ್ದರೋ? ಅಕ್ಷರಸ್ಥರು ಅದೂ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದರೆ ಜನ ಎಲ್ಲಿಗೆ ಹೋಗಬೇಕು?' ಎಂದು ಚಾಟಿ ಬೀಸಿದರು. ಆದರೆ ಭ್ರಷ್ಟ ಅಧಿಕಾರಿಗಳಿಗೆ ಅದು ಎಷ್ಟರಮಟ್ಟಿಗೆ ತಾಕಿದೆ ಎಂಬುದು ತಿಳಿದುಬಂದಿಲ್ಲ.












Click it and Unblock the Notifications