ಬಿಡಿಎ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್, ಭೂ ಮಾಲೀಕರ ಆತಂಕ ದೂರ
ಬೆಂಗಳೂರು, ಫೆಬ್ರವರಿ 04: ಬೆಂಗಳೂರು ನಗರದ ಮಹತ್ವದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. 73 ಕಿ. ಮೀ. ಉದ್ದದ ರಸ್ತೆ ಯೋಜನೆ ಇದಾಗಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗೆ ಸುಮಾರು 27,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಹುಡ್ಕೋ ಹಣಕಾಸಿನ ನೆರವು ನೀಡಲಿದೆ.
ಕಾಂಗ್ರೆಸ್ ಸರ್ಕಾರ 73 ಕಿ. ಮೀ. ಉದ್ದದ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆಯನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರು ನಾಮಕಾರಣ ಮಾಡಿ, ಜಾರಿಗೊಳಿಸುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಈಗಾಗಲೇ ಕೆಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಡಿ. ಕೆ. ಶಿವಕುಮಾರ್ ಬಿಎಂಆರ್‌ಡಿಎ ಕಛೇರಿಯಲ್ಲಿ ಬಿಡಿಎ ಹಾಗೂ ಬಿಎಂಆರ್‌ಡಿಎ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಬಾಕಿ ಉಳಿದಿರುವ ಕಾಮಗಾರಿಗಳು ಹಾಗೂ ಮುಂದೆ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಸಂಬಂಧ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಈ ಸಭೆಯಲ್ಲಿ ಬಿಬಿಸಿ ಯೋಜನೆ ಕುರಿತು ಚರ್ಚೆ ನಡೆದಿದೆ.
ಯೋಜನೆಗೆ ರೈತರ ಭೂ ಸ್ವಾಧೀನ: ಡಿ. ಕೆ. ಶಿವಕುಮಾರ್ ಬಿಡಿಎ ಭೂ ಸ್ವಾಧೀನ ಅಧಿಕಾರಿಗಳಿಗೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಭೂಮಿ ನೀಡುವ ರೈತರ ಮನವೊಲಿಕೆ ಮಾಡಿ, ಪರಿಹಾರವನ್ನು ನಿಗದಿಗೊಳಿಸಿ. ಪರಿಹಾರದ ವಿಚಾರದಲ್ಲಿ ಕಾನೂನು ಹೋರಾಟ ಆರಂಭವಾಗಿ ಯೋಜನೆ ವಿಳಂಬವಾಗುವುದು ಬೇಡ ಎಂದು ಸೂಚನೆ ನೀಡಿದ್ದಾರೆ.
ಬಿಬಿಸಿ ಯೋಜನೆಗೆ ಭೂಮಿ ನೀಡುವ ರೈತರಿಗೆ ಕೊಡುವ ಪರಿಹಾರದ ಕುರಿತು ರೈತರು ಅಸಮಾಧಾನಗೊಂಡಿದ್ದಾರೆ. ರಾಜ್ಯ ಸರ್ಕಾರ ಈಗಿನ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಪರಿಹಾರವನ್ನು ನಿಗದಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದ್ದರಿಂದ ಪರಿಹಾರದ ವಿಚಾರದಲ್ಲಿ ಕಾನೂನು ಸಮರ ಆರಂಭವಾಗಬಹುದು ಎಂದು ಡಿ. ಕೆ. ಶಿವಕುಮಾರ್ ಅಂದಾಜಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಯೋಜನೆಗೆ ಭೂಮಿ ನೀಡುವ ರೈತರಿಗೆ ಎಕರೆಗೆ 1.5 ಕೋಟಿಯಿಂದ 8 ಕೋಟಿ ರೂ. ತನಕ ಪರಿಹಾರ ದೊರೆಯಲಿದೆ. ಆದರೆ ಇದು ಜಮೀನು ಯಾವ ಪ್ರದೇಶದಲ್ಲಿ ಬರಲಿದೆ ಎಂಬುದರ ಮೇಲೆ ತೀರ್ಮಾನವಾಗಲಿದೆ. ಸರ್ಕಾರ ರಚನೆ ಮಾಡಿರುವ ಮಾರ್ಗಸೂಚಿ ದರದ ಮೇಲೆ ಪರಿಹಾರ ವಿತರಣೆಯಾಗಲಿದೆ.
19 ವರ್ಷಗಳ ಹಿಂದೆ ರೂಪಿಸಿದ್ದ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆ ಈಗ ಜಾರಿಗೆ ಬರುತ್ತಿದೆ. ಇದು ತುಮಕೂರು-ಹೊಸೂರು ರಸ್ತೆಯನ್ನು ವಯಾ ಬಳ್ಳಾರಿ ರೋಡ್, ಹಳೆ ಮದ್ರಾಸ್ ರಸ್ತೆ ಮತ್ತು ವೈಟ್‌ಫೀಲ್ಡ್ ಮೂಲಕ ಸಂಪರ್ಕಿಸುತ್ತದೆ.
ಬಿಬಿಸಿ ಯೋಜನೆಗೆ 2,560 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ಈಗಾಗಲೇ ಯೋಜನೆಯನ್ನು ಮೂರು ವರ್ಷಗಳಲ್ಲಿ ಮುಗಿಸಬೇಕು ಎಂದು ಡಿ. ಕೆ. ಶಿವಕುಮಾರ್ ಗಡುವು ಕೊಟ್ಟಿದ್ದಾರೆ. ಈ ಯೋಜನೆಯ ಭೂ ಸ್ವಾಧೀನಕ್ಕೆ ಹುಡ್ಕೋ 21,000 ಕೋಟಿ ಮತ್ತು ರಸ್ತೆ ನಿರ್ಮಾಣಕ್ಕೆ 6000 ಕೋಟಿ ರೂ. ಅನುದಾನ ನೀಡಲಿದೆ. ಈ ಕುರಿತು ಒಪ್ಪಂದವಾಗಬೇಕಿದೆ.












Click it and Unblock the Notifications