ಕರ್ನಾಟಕದಲ್ಲಿ ಇನ್ನೂ 1 ಡಜನ್ ಮೋದಿ ಸಮಾವೇಶ!
ಬೆಂಗಳೂರು, ನ. 22 : ಡಿಸೆಂಬರ್ ಅಂತ್ಯದಿಂದ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶಗಳು ಆರಂಭವಾಗಲಿವೆ. ಗುರುವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕದಲ್ಲಿ 12 ಮೋದಿ ಸಮಾವೇಶಗಳನ್ನು ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಗುರುವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ರಾಜ್ಯ ಪದಾಧಿಕಾರಿಗಳು, ಲೋಕಸಭಾ ಕ್ಷೇತ್ರಗಳ ಪ್ರಭಾರಿ ಮತ್ತು ಸಹ ಪ್ರಭಾರಿಗಳ ಸಭೆ ನಡೆಯಿತು, ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಸುರೇಶ್ ಕುಮಾರ್, ರಾಜ್ಯದಲ್ಲಿ 12 ಮೋದಿ ಸಮಾವೇಶಗಳನ್ನು ಆಯೋಜಿಸಲು ಪಕ್ಷ ನಿರ್ಧರಿಸಿದೆ, ಇದಕ್ಕೆ ನರೇಂದ್ರ ಮೋದಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ಸಮಾವೇಶ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸಮಾವೇಶಗಳ ಸಂಖ್ಯೆಯನ್ನು 8 ರಿಂದ 12ಕ್ಕೆ ಏರಿಸಲಾಗಿದೆ ಎಂದರು. ಯಾವ ಜಿಲ್ಲೆಗಳಲ್ಲಿ ಸಮಾವೇಶ ಏರ್ಪಡಿಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು. ('ಭಾರತ ಗೆಲ್ಲಿಸಿ' ಸಮಾವೇಶ: ವರದಿ)
ನರೇಂದ್ರ ಮೋದಿ ಅವರಿಂದ ಸಮಾವೇಶದ ದಿನಾಂಕ ಪಡೆದ ಬಳಿಕ, ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಸಮಾವೇಶ ಏರ್ಪಡಿಸಲಾಗುವುದು. ಪಕ್ಷದ ಹಿರಿಯ ನಾಯಕರು ಶೀಘ್ರವೇ ಸಭೆ ಸೇರಿ, ಸಮಾವೇಶ ನಡೆಯುವ ಜಿಲ್ಲೆಗಳ ಅಂತಿಮ ಪಟ್ಟಿ ತಯಾರಿಸಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು. (ಭಾರತ ಗೆಲ್ಲಿಸಿ ಮೋದಿ ಬೃಹತ್ ಸಮಾವೇಶ)
ಭಾರತ ಗೆಲ್ಲಿಸಿ ಯಶಸ್ವಿ : ನ. 17ರ ಭಾನುವಾರ ನಡೆದ ಭಾರತ ಗೆಲ್ಲಿಸಿ ಸಮಾವೇಶದಲ್ಲಿ ಸಾರ್ವಜನಿಕರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆದರೆ, ಮೂರೂವರೆ ಲಕ್ಷ ಕಾರ್ಯಕರ್ತರು ಪಾಲ್ಗೊಂಡಿದ್ದರು ಎಂದು ಸುರೇಶ್ ಕುಮಾರ್ ಹೇಳಿದರು. 10 ರೈಲು, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಸೇರಿ 4,341 ಬಸ್‌ಗಳು, 2,155 ಟೆಂಪೋ, 2,234 ಕಾರು, 7,500 ದ್ವಿಚಕ್ರ ವಾಹನಗಳಲ್ಲಿ ಕಾರ್ಯಕರ್ತರು ಆಗಮಿಸಿದ್ದರು ಎಂದರು.












Click it and Unblock the Notifications