Namma Metro: ಬೆಂಗಳೂರು-ವಿಮಾನ ನಿಲ್ದಾಣ ಮಾರ್ಗದಲ್ಲಿ ವೈಡಕ್ಟ್ ಅಳವಡಿಕೆ, ಪೂರ್ಣ ಯಾವಾಗ?
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದಿಂದ ಮೆಟ್ರೋ ಸಂಪರ್ಕ ಸಾಧಿಸುವ ಕಾಮಗಾರಿ ಕೆಲಸ ಭರದಿಂದ ಸಾಗಿದೆ. ಇದೀಗ ಇಲ್ಲಿ ಪಿಲ್ಲರ್‌ಗಳ ಮೇಲೆ ವೈಡಕ್ಟ್ ಅಳವಡಿಕೆ ಕಾರ್ಯ ನಡೆದಿದೆ.
ಬೆಂಗಳೂರು, ಮಾರ್ಚ್ 05: ಅತ್ಯಧಿಕ ಪ್ರಯಾಣಿಕರ ಒತ್ತಡ ಇರುವ ಭಾರತದ ಮೂರನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಸಾಧಿಸುವ ಕೆಲಸ ಭರದಿಂದ ಸಾಗಿದೆ. ಇದೀಗ ಇಲ್ಲಿ ವೈಡಕ್ಟ್ ಅಳವಡಿಕೆ ಕಾರ್ಯ ನಡೆದಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಚಾರ ಸಂಪರ್ಕ ಕಲ್ಪಿಸಲಾಗುತ್ತಿದೆ. ಈಗಾಗಲೇ ತಲೆ ಎತ್ತಿರುವ ಪಿಲ್ಲರ್‌ಗಳ ಮೇಲೆ ವೈಡಕ್ಟ್ ಅಳವಡಿಕೆ ಮಾಡಲಾಗುತ್ತಿದೆ. ಲಕ್ಷಾಂತರ ಜನರು ವಿಮಾನಯಾನ ಅವಲಂಬಿಸಿದ್ದಾರೆ. ಬಹುತೇಕ ಮಂದಿಗೆ ಬೆಂಗಳೂರು ನಗರದಿಂದ ಹೆಬ್ಬಾಳ ಫ್ಲೈಓವರ್, ಯಲಹಂಕ ಮಾರ್ಗವಾಗಿ ಸಾಗುವ ರಸ್ತೆ ಅನಿವಾರ್ಯ. ಹೀಗಾಗಿ ಇಲ್ಲಿ ಮೆಟ್ರೋ ಸಾರಿಗೆ ಸೇವೆ ಅತ್ಯಗತ್ಯವಾಗಿದೆ.

ಈ ಕಾರಣದಿಂದ ಕಾಮಗಾರಿಗೆ ಹೆಚ್ಚು ವೇಗ ನೀಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ತಿಳಿಸಿದೆ. ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರ ವರೆಗೆ ( ಮೆಟ್ರೋ ಹಂತ 2A) ಹಾಗೂ ಕೆ.ಆರ್.ಪುರದಿಂದ ವಿಮಾನ ನಿಲ್ದಾಣವರೆಗೆ (ಹಂತ-2B) ಮತ್ತೊಂದು ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ. ಹಂತ 2A ಯೋಜನೆ 2021 ಮಧ್ಯಭಾಗದ ನಂತರ ಆರಂಭವಾದರೆ, ಹಂತ-2B ಕಾಮಗಾರಿ ಅದಕ್ಕಿಂತ ಆರು ತಿಂಗಳು ವಿಳಂಬವಾಗಿ ಶುರುವಾಯಿತು.
ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಂಪನಿ ಹಂತ-2A ಕೆಲಸ ಮಾಡುತ್ತಿದೆ. ಈ ಭಾಗದಲ್ಲಿ ಪಿಲ್ಲರ್‌ಗಳ ನಿರ್ಮಾಣ ನಿರ್ಮಾಣ ಕೆಲಸ ಬಹುತೇಕ ಪೂರ್ಣಗೊಂಡಿದೆ. ಅವುಗಳ ಮೇಲೆ ವಯಡಕ್ಟ್ ಅಳವಡಿಸಲಾಗುತ್ತಿದೆ. ಇನ್ನು ಮಹದೇವಪುರದ ಬಳಿ ರಸ್ತೆ ಮೇಲ್ಸೇತುವೆ ಮಧ್ಯದಲ್ಲಿ ಹಾದು ಹೋಗುತ್ತಿರುವ ಮೆಟ್ರೊ ಮಾರ್ಗಕ್ಕೆ ಸ್ಪ್ಲಿಟ್ ಫ್ಲೈಓವರ್ ನಿರ್ಮಿಸುವ ಕೆಲಸ ನಡೆಯುತ್ತಿದೆ. ಅದು ಪೂರ್ಣಗೊಳ್ಳಲು ಇನ್ನೂ ಕೆಲವು ದಿನ ಹಿಡಿಯಬಹುದು.
ಅಲ್ಲದೇ ಹಲವು ಕಡೆಗಳಲ್ಲಿ ಪಿಲ್ಲರ್‌ಗಳ ಮೇಲೆ ಕ್ಯಾಪ್ ಅಳವಡಿಸಿ ಅವುಗಳ ಮೇಲೆ ವಯಡಕ್ಟ್ ಜೋಡಿಸಲಾಗುವುದು. ವೈಡಕ್ಟ್ ಕಾಮಗಾರಿ ಒಮ್ಮೆ ಪೂರ್ಣಗೊಂಡ ನಂತರ ರೈಲು ಹಳಿ ಜೋಡಣೆ ಕೆಲಸ ಕಾರ್ಮಿಕರು ಆರಂಭಿಸಲಿದ್ದಾರೆ. ಇದರ ಜೊತೆ ಜೊತೆಗೇ ಈ ಮಾರ್ಗದಲ್ಲಿ ನಿಲ್ದಾಣಗಳನ್ನು ನಿರ್ಮಿಸಬೇಕಿರುವುದು ಬಾಕಿ ಇದೆ.

ಸಿಲ್ಕ್‌ಬೋರ್ಡ್-ಕೆ.ಆರ್.ಪುರ ಮಾರ್ಗದ ಕಾಮಗಾರಿ 2024 ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಕೆ.ಆರ್.ಪುರ-ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿ ಕೆಲಸ 2025ಕ್ಕೆ ಅಂತ್ಯಗೊಳ್ಳಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications