Get Updates
Get notified of breaking news, exclusive insights, and must-see stories!

Namma Metro: ನೇರಳೆ, ಹಸಿರು ಮಾರ್ಗದ ದಟ್ಟಣೆಗೆ ಶೀಘ್ರದಲ್ಲೇ ಮುಕ್ತಿ, ಮೇ-ಜೂನ್‌ನಲ್ಲಿ 3 ಹೊಸ ರೈಲುಗಳ ಸೇರ್ಪಡೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಸಿಹಿ ಸುದ್ದಿ ನೀಡಿದೆ. ದಿನೇ ದಿನೇ ಹೆಚ್ಚುತ್ತಿರುವ ಜನದಟ್ಟಣೆಯಿಂದಾಗಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಪ್ರಯಾಣಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಪೀಕ್ ಅವರ್‌ಗಳಲ್ಲಿ ಮುಂಬೈ ಲೋಕಲ್ ರೈಲುಗಳಂತೆ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ ಸಮಸ್ಯೆಗೆ ಅಲ್ಪ ಮುಕ್ತಿ ನೀಡಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ಮುಂಬರುವ ಮೇ ಅಥವಾ ಜೂನ್ ತಿಂಗಳ ವೇಳೆಗೆ ಈ ಮಾರ್ಗಗಳಿಗೆ ಮೂರು ಹೊಸ ರೈಲುಗಳನ್ನು ಸೇರ್ಪಡೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದೆ ಅಂತಾ ಮೂಲಗಳಿಂದ ತಿಳಿದುಬಂದಿದೆ.

ಹಲವು ತಿಂಗಳ ವಿಳಂಬದ ನಂತರ, ಪಶ್ಚಿಮ ಬಂಗಾಳ ಮೂಲದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು ತನ್ನ ಮೊದಲ ಡಿಟಿಜಿ (DTG) ರೈಲನ್ನು ಫೆಬ್ರವರಿ 18 ರಂದು ರವಾನಿಸಿದೆ. ಈ ಹೊಸ ರೈಲು ಇದೇ ಫೆಬ್ರವರಿ ಅಂತ್ಯದ ವೇಳೆಗೆ ನಮ್ಮ ಮೆಟ್ರೋದ ಪೀಣ್ಯ ಡಿಪೋಗೆ ತಲುಪುವ ನಿರೀಕ್ಷೆಯಿದೆ.

Namma Metro

ಹಿಂದಿನ ಗುತ್ತಿಗೆಯ ಹಿನ್ನೆಲೆ

2019 ರಲ್ಲಿ ಚೀನಾ ಮೂಲದ ಸರ್ಕಾರಿ ಸ್ವಾಮ್ಯದ CRRC ನಾನ್‌ಜಿಂಗ್ ಪುಝೆನ್ ಕಂಪನಿಯು ನಮ್ಮ ಮೆಟ್ರೋಗೆ 36 ರೈಲುಗಳನ್ನು ಪೂರೈಸಲು 1,578 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಇದರಲ್ಲಿ 15 ರೈಲುಗಳು ಹಳದಿ ಮಾರ್ಗಕ್ಕೆ ಮತ್ತು 21 ರೈಲುಗಳು ನೇರಳೆ ಹಾಗೂ ಹಸಿರು ಮಾರ್ಗಗಳಿಗೆ ಮೀಸಲಾಗಿವೆ. ಚೀನಾದ ಈ ಕಂಪನಿಯು ಹಳದಿ ಮತ್ತು ನೇರಳೆ ಮಾರ್ಗಕ್ಕೆ ತಲಾ ಒಂದರಂತೆ ಎರಡು ಮಾದರಿ (ಪ್ರೋಟೋಟೈಪ್) ರೈಲುಗಳನ್ನು ಮಾತ್ರ ಪೂರೈಸಿತ್ತು. ಉಳಿದ 34 ರೈಲುಗಳನ್ನು ಭಾರತದಲ್ಲಿರುವ ಸಿಆರ್‌ಆರ್‌ಸಿ (CRRC) ಪಾಲುದಾರ ಸಂಸ್ಥೆಯಾದ ಟಿಆರ್‌ಎಸ್‌ಎಲ್ ನಿರ್ಮಿಸುತ್ತಿದೆ. ಆದರೆ, ಟಿಆರ್‌ಎಸ್‌ಎಲ್ ಈವರೆಗೆ ಹಳದಿ ಮಾರ್ಗಕ್ಕೆ ಕೇವಲ ಎಂಟು ರೈಲುಗಳನ್ನು ಮಾತ್ರ ಪೂರೈಸಿದೆ.

ಪರೀಕ್ಷೆಗಳು ಹೇಗಿರಲಿವೆ?

ಫೆಬ್ರವರಿ 18 ರಂದು ಟಿಆರ್‌ಎಸ್‌ಎಲ್ ರವಾನಿಸಿರುವ ರೈಲು, ನೇರಳೆ ಮತ್ತು ಹಸಿರು ಮಾರ್ಗಗಳಿಗೆ ಬರಲಿರುವ ಒಟ್ಟು 20 ರೈಲುಗಳ ಪೈಕಿ ಮೊದಲನೆಯದಾಗಿದೆ. ಈ ರೈಲು ಪೀಣ್ಯ ಡಿಪೋಗೆ ಆಗಮಿಸಿದ ನಂತರ, ಆರು ಬೋಗಿಗಳನ್ನು (ಕೋಚ್) ಒಟ್ಟಿಗೆ ಸೇರಿಸಿ ಸಂಪೂರ್ಣ ರೈಲನ್ನಾಗಿ ಮಾಡಲಾಗುತ್ತದೆ. ಬಳಿಕ ಸ್ಟ್ಯಾಟಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ನಂತರ ರಾತ್ರಿ ವೇಳೆಯಲ್ಲಿ ಮುಖ್ಯ ಮಾರ್ಗದಲ್ಲಿ 750 ಕಿಲೋ ಮೀಟರ್‌ಗಳಷ್ಟು ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ನಡೆಸಲಾಗುತ್ತದೆ.

ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಕಮ್ಯುನಿಕೇಷನ್ಸ್ ಬೇಸ್ಡ್ ಟ್ರೈನ್ ಕಂಟ್ರೋಲ್ (CBTC) ತಂತ್ರಜ್ಞಾನವನ್ನು ಹೊಂದಿದ್ದು, ಇವು ಚಾಲಕ ರಹಿತವಾಗಿ (Driverless) ಕಾರ್ಯನಿರ್ವಹಿಸಬಲ್ಲವು. ಇದಕ್ಕೆ ವ್ಯತಿರಿಕ್ತವಾಗಿ, ನೇರಳೆ ಮತ್ತು ಹಸಿರು ಮಾರ್ಗದ ರೈಲುಗಳು ಡಿಟಿಜಿ (DTG) ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದಕ್ಕೆ ಲೋಕೋಪೈಲಟ್‌ಗಳ (ಚಾಲಕರ) ಅಗತ್ಯವಿರುತ್ತದೆ.

ಅನುಮೋದನೆಗಳ ನಿರೀಕ್ಷೆಯಲ್ಲಿ ಬಿಎಂಆರ್‌ಸಿಎಲ್

2025ರ ಜನವರಿಯಲ್ಲೇ ನೇರಳೆ ಮಾರ್ಗಕ್ಕೆ ಪ್ರೋಟೋಟೈಪ್ ರೈಲು ಬಂದಿದ್ದರೂ, ವಾಣಿಜ್ಯ ಸೇವೆ ಆರಂಭಿಸಲು ಅಗತ್ಯವಿರುವ 37 ಶಾಸನಬದ್ಧ ಅನುಮತಿಗಳನ್ನು ಪಡೆಯುವುದು ಇನ್ನೂ ಬಾಕಿಯಿದೆ. ಪ್ರಸ್ತುತ ಸಿಗ್ನಲಿಂಗ್ ಸಾಫ್ಟ್‌ವೇರ್ ಪರೀಕ್ಷೆ ನಡೆಯುತ್ತಿದ್ದು, ಹೊಸ ಆವೃತ್ತಿಯನ್ನು ಅಳವಡಿಸಲಾಗುತ್ತಿದೆ. ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಯೂ ಆರಂಭವಾಗಿದೆ.

"ಕಾರ್ಯಾಚರಣೆಯ ಅಗತ್ಯತೆಗಳನ್ನು ಆಧರಿಸಿ, ಮೇ-ಜೂನ್ ವೇಳೆಗೆ ನೇರಳೆ ಮತ್ತು ಹಸಿರು ಎರಡೂ ಮಾರ್ಗಗಳಲ್ಲಿ ಈ ಮೂರು ಡಿಟಿಜಿ ರೈಲುಗಳನ್ನು ಸೇರ್ಪಡೆಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ರೈಲುಗಳಲ್ಲಿನ ವಿಪರೀತ ಜನದಟ್ಟಣೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಿದೆ" ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಪ್ರಸ್ತುತ 57 ರೈಲುಗಳಿದ್ದರೂ, ಪೀಕ್ ಅವರ್‌ಗಳಲ್ಲಿ ಪ್ರಯಾಣಿಸುವುದು ಕಷ್ಟಸಾಧ್ಯವಾಗಿದೆ. ರೈಲಿನಲ್ಲಿ ಕಾಲಿಡಲೂ ಜಾಗವಿಲ್ಲದ ಕಾರಣ ಅನೇಕ ಪ್ರಯಾಣಿಕರು ಎರಡು-ಮೂರು ರೈಲುಗಳನ್ನು ಬಿಟ್ಟು, ಮತ್ತೊಂದು ರೈಲಿಗಾಗಿ ಕಾಯುವ ಪರಿಸ್ಥಿತಿ ಇದೆ. ಪ್ರಸ್ತುತ ನಮ್ಮ ಮೆಟ್ರೋದ ಸರಾಸರಿ ವಾರದ ದಿನದ ಪ್ರಯಾಣಿಕರ ಸಂಖ್ಯೆ ಹತ್ತು ಲಕ್ಷದ ಗಡಿ ದಾಟಿದ್ದು, ಈ ಹೊಸ ರೈಲುಗಳ ಸೇರ್ಪಡೆಯು ಪ್ರಯಾಣಿಕರಿಗೆ ನೆಮ್ಮದಿ ತರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+