ವಾರಪೂರ್ತಿ ಬೆಳಗ್ಗೆ 7ರಿಂದ ಸಂಜೆ 8ರವರೆಗೆ ನಮ್ಮ ಮೆಟ್ರೋ ಸಂಚಾರ
ಬೆಂಗಳೂರು, ಜುಲೈ 05: ಕರ್ನಾಟಕದಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7 ರಿಂದ ಸಂಜೆ 8ರವರೆಗೆ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಹಾಗೆಯೇ ನಮ್ಮ ಮೆಟ್ರೋ ರೈಲು ವಾರಾಂತ್ಯದಲ್ಲೂ ಕೂಡ ಕಾರ್ಯನಿರ್ವಹಿಸಲಿದೆ, ಬಿಎಂಟಿಸಿ ಬಸ್‌ಗಳು ರಾತ್ರಿ 9 ಗಂಟೆಯವರೆಗೂ ಇರಲಿವೆ.
ಪ್ರತಿ 5 ರಿಂದ 15 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಚಲಿಸಲಿದೆ, ಈ ಹಿಂದೆ ಮೊದಲ ಹಂತದ ಅನ್ಲಾಕ್ ಆಗುತ್ತಿದ್ದಂತೆ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಾತ್ರ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಆ ಅವಧಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿತ್ತು.

ಇದೀಗ ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆವರೆಗೆ ಅವಕಾಶ ನೀಡಲಾಗಿದೆ. ಜನದಟ್ಟಣೆ ಅವಧಿಯಲ್ಲಿ 5 ನಿಮಿಷಕ್ಕೊಂದರಂತೆ ಸಂಚರಿಸಲಿರುವ ರೈಲು, ಉಳಿದ ಸಂದರ್ಭದಲ್ಲಿ 15 ನಿಮಿಷ ಅಂತರದಲ್ಲಿ ಓಡಾಡಲಿದೆ.
ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದ್ದರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಕೊರೊನಾ ನಿಯಮಾವಳಿಗಳ ಪಾಲನೆಯಾಗುವಂತೆ ನೋಡಿಕೊಳ್ಳುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೇ.100ರಷ್ಟು ಮಂದಿಗೆ ಪ್ರಯಾಣಿಸಲು ಅವಕಾಶ ನೀಡಿದ್ದರೂ ಕೊರೊನಾ ನಿಯಮ ಪಾಲಿಸುವುದು ಅವಶ್ಯಕ, ಮಾಸ್ಕ್ ಕಡ್ಡಾಯ, ಟೋಕನ್ ವ್ಯವಸ್ಥೆ ಕೂಡ ಇರಲಿದೆ.
ಜುಲೈ 1ರಿಂದಲೇ ನಮ್ಮ ಮೆಟ್ರೋದ ಎಲ್ಲ ಸ್ಟೇಷನ್ಗಳಲ್ಲಿ ಟೋಕನ್ ನೀಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿತ್ತಾದ್ದರಿಂದ ಕಾರ್ಡ್ ಇಲ್ಲದವರೂ ಟೋಕನ್ ಪಡೆದು ಸಂಚರಿಸಬಹುದಾಗಿದೆ.
ಈ ಮೊದಲು ಸುರಕ್ಷತೆ ದೃಷ್ಟಿಯಿಂದ ಮೆಟ್ರೋ ಕಾರ್ಡ್ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕಾರ್ಡ್ ಹೊಂದಿದವರು ಆನ್ಲೈನ್ ಮೂಲಕವೇ ರಿಚಾರ್ಜ್ ಮಾಡಿಸಿಕೊಂಡು ಮೆಟ್ರೋದಲ್ಲಿ ಪ್ರಯಾಣಿಸಬಹುದು ಎನ್ನಲಾಗಿತ್ತು. ಟೋಕನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದ ಕಾರಣ ಕಾರ್ಡ್ ಬಳಸದ ಅನೇಕ ಪ್ರಯಾಣಿಕರಿಗೆ ಅನನುಕೂಲವಾಗಿತ್ತು. ಎರಡೂ ಮಾರ್ಗದಲ್ಲೂ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ.












Click it and Unblock the Notifications