Namma Metro; ಈ 8 ಮೆಟ್ರೋ ನಿಲ್ದಾಣದ ಪ್ರಯಾಣಿಕರಿಗೆ ಸಿಹಿಸುದ್ದಿ
ಬೆಂಗಳೂರು, ನವೆಂಬರ್ 15; ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆ ಆದಂತೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಆದ್ದರಿಂದ ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಸಹ ಮುಂದಾಗಿದೆ.
ನಗರದ 8 ಮೆಟ್ರೋ ರೈಲು ನಿಲ್ದಾಣದ ಸುತ್ತಮುತ್ತ ವಾಹನಗಳ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲು ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. ಒಟ್ಟು 8,956 ಚದರ ಮೀಟರ್ ಸ್ಥಳದಲ್ಲಿ ಪಾರ್ಕಿಂಗ್ ಸೌಲಭ್ಯ ಸಿಗಲಿದೆ.

ಸದ್ಯ ಇರುವ ಮಾದರಿಯಲ್ಲಿಯೇ ಟೆಂಡರ್ ಕರೆದು, ನಿಗದಿತ ಸಂಸ್ಥೆಯೊಂದಕ್ಕೆ ಪಾರ್ಕಿಂಗ್ ಸೌಲಭ್ಯ ನಿರ್ವಹಣೆ ಮಾಡುವ ಟೆಂಡರ್ ನೀಡಲಾಗುತ್ತದೆ. ಬಿಎಂಆರ್‌ಸಿಎಲ್ ನಿಗದಿ ಮಾಡಿದ ದರದಲ್ಲಿ ಟೆಂಡರ್ ಪಡೆದ ಸಂಸ್ಥೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ನೀಡಲಿದೆ.
ಯಾವ-ಯಾವ ನಿಲ್ದಾಣ; ಮೈಸೂರು ರಸ್ತೆ, ಮಂತ್ರಿ ಮಾಲ್ ನಿಲ್ದಾಣ, ಸೀತಾರಾಮಪಾಳ್ಯ, ನಲ್ಲೂರಹಳ್ಳಿ, ಸತ್ಯಸಾಯಿ ಬಾಬಾ, ಕಾಡುಗೋಡಿ ಟ್ರೀ ಪಾರ್ಕ್, ಬೆನ್ನಿಗಾನಹಳ್ಳಿ ಮತ್ತು ಚಲ್ಲಘಟ್ಟ ನಿಲ್ದಾಣದಲ್ಲಿ ಪಾರ್ಕಿಂಗ್ ಸೌಲಭ್ಯಕ್ಕಾಗಿ ಟೆಂಡರ್ ಕರೆಯಲಾಗಿದೆ. ಒಟ್ಟು 2,129 ವಾಹನಗಳ ಪಾರ್ಕಿಂಗ್‌ಗೆ ಸ್ಥಳ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಈ 8 ನಿಲ್ದಾಣಗಳ ಪೈಕಿ ಎರಡು ನಿಲ್ದಾಣಗಳಲ್ಲಿ ಮಾತ್ರ ನಾಲ್ಕು ಚಕ್ರದ ವಾಹನಗಳಿಗೆ ಪಾರ್ಕಿಂಗ್ ಲಭ್ಯವಿದೆ. ಹೊಸದಾಗಿ ಸ್ಥಳಾವಕಾಶ ದೊರೆತರೆ 2069 ಬೈಕ್, 150 ಕಾರುಗಳನ್ನು ನಿಲ್ಲಿಸಲು ಜಾಗ ಸಿಗಲಿದೆ. ಪ್ರತಿ ನಿಲ್ದಾಣದಲ್ಲಿ 10 ಸೈಕಲ್ ನಿಲ್ಲಿಸಲು ಸಹ ಸ್ಥಳಾವಕಾಶವನ್ನು ನೀಡಲಾಗುತ್ತದೆ.
ವಾರದ ಏಳು ದಿನಗಳ ಕಾಲ ಬೆಳಗ್ಗೆ 5 ರಿಂದ ರಾತ್ರಿ 12.30ರ ತನಕ ಪಾರ್ಕಿಂಗ್ ಲಾಟ್ ಪ್ರಯಾಣಿಕರಿಗೆ ಲಭ್ಯವಾಗಿರಬೇಕು ಎಂದು ಟೆಂಡರ್‌ನಲ್ಲಿ ತಿಳಿಸಲಾಗಿದೆ. ಮೈಸೂರು ರಸ್ತೆ, ಮಂತ್ರಿ ಮಾಲ್ ನಿಲ್ದಾಣಗಳಲ್ಲಿ ಮಾತ್ರ ತಡರಾತ್ರಿ ಪಾರ್ಕಿಂಗ್ ಸೌಲಭ್ಯಗಳು ಇರುವುದಿಲ್ಲ.
ಈ ಟೆಂಡರ್ ಮೂರು ವರ್ಷಗಳ ಅವಧಿಯದ್ದು. ಟೆಂಡರ್ ಪಡೆದ ಸಂಸ್ಥೆ ಕಂಪ್ಯೂಟರೀಕೃತ ಟಿಕೆಟ್‌ಗಳನ್ನು ನೀಡಬೇಕಿದೆ. ಇದು ಪಾರ್ಕಿಂಗ್ ಲಾಟ್ ಪ್ರವೇಶ, ನಿರ್ಗಮನ ಸಮಯದ ಮುದ್ರಣ ಒಳಗೊಂಡಿರುತ್ತದೆ. ಪಾರ್ಕಿಂಗ್ ಲಾಟ್ ಭದ್ರತಾ ಸಿಬ್ಬಂದಿ, ಸಿಸಿಟಿವಿ ಕಣ್ಗಾವಲಿನಲ್ಲಿ ಇರಬೇಕು. ಸೈಕಲ್ ಕಳ್ಳತನವಾದರೆ ಟೆಂಡರ್ ಪಡೆದ ಸಂಸ್ಥೆಯೇ ಹೊಣೆಯಾಗಲಿದೆ.
ಮೆಟ್ರೋ ನಿಲ್ದಾಣದಲ್ಲಿ ಕಾರು ನಿಲ್ಲಿಸುವ ಪ್ರಯಾಣಿಕರು ಮೊದಲ 4 ಗಂಟೆಗೆ 30 ರೂ. ಬಳಿಕ ಪ್ರತಿ ಗಂಟೆಗೆ 10 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕು. ದ್ವಿಚಕ್ರ ವಾಹನಗಳು ಮೊದಲ 4 ಗಂಟಗೆ 15 ರೂ. ಬಳಿಕ ಪ್ರತಿ ಗಂಟೆಗೆ 5 ರೂ. ಹೆಚ್ಚು ಶುಲ್ಕ ಕಟ್ಟಬೇಕಿದೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸೈಕಲ್‌ಗಳ ಪಾರ್ಕಿಂಗ್‌ಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇತ್ತು. ಇದಕ್ಕೆ ಬಿಎಂಆರ್‌ಸಿಎಲ್ ಒಪ್ಪಿಗೆ ನೀಡಿದೆ. ಸೈಕಲ್ ನಿಲುಗಡೆಗೆ ಅವಕಾಶ ಇರುವ ಕಡೆ ಮೆಟ್ರೋ ನಿಲ್ದಾಣದ ಹೊರಗೆ ಈ ಕುರಿತ ಮಾಹಿತಿ ನೀಡುವ ಬೋರ್ಡ್ ಹಾಕಲಾಗುತ್ತದೆ. ಸೈಕಲ್ ಸವಾರರು ಪ್ರತಿ ಗಂಟೆಗೆ 1 ರೂ. ದಿನಕ್ಕೆ ಗರಿಷ್ಠ 10 ರೂ. ಪಾರ್ಕಿಂಗ್ ಶುಲ್ಕ ಪಾವತಿ ಮಾಡಬಹುದು.
ನಿಲ್ದಾಣದ ಟೆಂಡರ್ ಪಾರ್ಕಿಂಗ್ ಪಡೆಯುವ ಸಂಸ್ಥೆ ಒಂದು ವರ್ಷಗಳ ಕಾಲ ಪಾರ್ಕಿಂಗ್ ನಿರ್ವಹಣೆ ಮಾಡಿದ ಅನುಭವ ಹೊಂದಿರಬೇಕು. ಬಿಎಂಆರ್‌ಸಿಎಲ್ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಪಡೆಯುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಪಾರ್ಕಿಂಗ್ ಲಾಟ್ ಹೊರಗೆ ಪಾರ್ಕಿಂಗ್ ಶುಲ್ಕ ಎಷ್ಟು? ಎಂದು ಬ್ಯಾನರ್ ಪ್ರದರ್ಶಿಸಬೇಕು.
ನಗರದ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಲಾಟ್‌ನಲ್ಲಿ ಬಿಎಂಆರ್‌ಸಿಎಲ್ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಹೆಚ್ಚಿನ ದರವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಛೇರಿಗೆ ದೂರು ಸಲ್ಲಿಕೆಯಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.












Click it and Unblock the Notifications