S.M.Krishna Funeral: ಸಿಬ್ಬಂದಿಗೆ ರಜೆ; ಇಂದು ಎಂದಿನಂತೆ ನಮ್ಮ ಮೆಟ್ರೋ ಸೇವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟನೆ
Namma Metro: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ ಹಿನ್ನೆಲೆ ಡಿಸೆಂಬರ್ 11ರಂದು ರಾಜ್ಯ ಸರ್ಕಾರದಿಂದ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನು ನಮ್ಮ ಮೆಟ್ರೋದ ಅಧಿಕಾರಿ, ಸಿಬ್ಬಂದಿಗೆ ಮಾತ್ರವೇ ರಜೆ ಘೋಷಣೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ ನಮ್ಮ ಮೆಟ್ರೋ ರೈಲು ಸಂಚಾರ ಸೇವೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬಿಎಂಆರ್‌ಸಿಎಲ್, ಮೆಟ್ರೋ ಕಾರ್ಯಾಚರಣೆಗಳು ಅತ್ಯಗತ್ಯ ಸೇವೆಯಾಗಿದೆ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಬುಧವಾರ ಸಾಮಾನ್ಯ ವೇಳಾಪಟ್ಟಿಯ ಪ್ರಕಾರವೇ ಮೆಟ್ರೋ ಸಂಚಾರ ಇರಲಿದೆ ಎಂದು ತಿಳಿಸಿದೆ.

ಮೆಟ್ರೋ ಅಧಿಕಾರಿ, ಸಿಬ್ಬಂದಿಗೆ ರಜೆ: ರಾಜ್ಯ ಸರ್ಕಾರದಿಂದ ಮಾಜಿ ಸಿಎಂ ಎಸ್.ಎಂ ಕೃಷ್ಣ ನಿಧನದ ಹಿನ್ನೆಲೆ ನಾಳೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಈ ಕಾರಣದಿಂದ ಬೆಂಗಳೂರಿನ ನಮ್ಮ ಮೆಟ್ರೋ ಅಧಿಕಾರಿ, ಸಿಬ್ಬಂದಿಗೂ ಬಿಎಂಆರ್‌ಸಿಎಲ್ ರಜೆ ಘೋಷಿಸಿದೆ.
ಈ ಸಂಬಂಧ ಕಚೇರಿ ಆದೇಶವನ್ನು ಹೊರಡಿಸಿರುವಂತಹ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ದಿವಂಗತರ ಗೌರವಾರ್ಥವಾಗಿ ಡಿಸೆಂಬರ್ 11ರದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ ಎಂದು ಹೇಳಿದೆ.
ಈ ಹಿನ್ನೆಲೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಬುಧವಾರದಂದು ರಜೆಯನ್ನು ಘೋಷಣೆ ಮಾಡಿದೆ. ಆದರೆ ಮೆಟ್ರೋ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ ಎಂದು ಸ್ಪಷ್ಟನೆ ನೀಡಿದೆ.
ಕರ್ನಾಟಕ ಕಂಡಂತಹ ಅತ್ಯಂತ ಧೀಮಂತ, ಹಿರಿಯ ರಾಜಕಾರಣಿ, ಸ್ವಾತಂತ್ರ್ಯ ಪೂರ್ವದ ತಲೆಮಾರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಳಿತಾತ್ಮಕ ಅನೇಕ ಹುದ್ದೆ ಅಲಂಕರಿಸಿದ್ದ ನಮ್ಮ ಕನ್ನಡದ ಹೆಮ್ಮೆಯ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಶಾಕ್ ಆಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರ ಅಗಲಿಕೆಯಿಂದ ದೇಶ ಒಬ್ಬ ಹಿರಿಯರು, ಮಾರ್ಗದರ್ಶಕರನ್ನು ಕಳೆದುಕೊಂಡು ಬಡವಂತಾಗಿದೆ. ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪರಿಶುದ್ಧವಾದ ಬದುಕು ನಡೆಸಿ, ಆದರ್ಶಮಯ ಜೀವನ ನಡೆಸಿ, ಇಡೀ ಭಾರತಕ್ಕೆ ಪ್ರಿಯರಾಗಿದ್ದರು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ನಾಲ್ಕೂ ಸದನಗಳಲ್ಲಿ ಸೇವೆ ಮಾಡಿದ್ದಾರೆ. ರಾಜ್ಯದ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ಈ ಮೂಲಕ ದೇಶ ಹಾಗೂ ರಾಜ್ಯದ ಸೇವೆ ಮಾಡಿದ ಕೀರ್ತಿ ಅವರದ್ದಾಗಿದೆ.












Click it and Unblock the Notifications