RV Road-Bommasandra Metro Line: ಜುಲೈ ಹೋಯ್ತು, ಆಗಸ್ಟ್‌ನಲ್ಲಿ ಪ್ರಧಾನಿ ಮೋದಿಯಿಂದ ಮೆಟ್ರೋಗೆ ಚಾಲನೆ?
ಬೆಂಗಳೂರು, ಜುಲೈ 03: ನಮ್ಮ ಮೆಟ್ರೋ ಬಹುನಿರೀಕ್ಷೆಯ ಹಳದಿ ಮೆಟ್ರೋ ಮಾರ್ಗ ಮತ್ತೆ ವಿಳಂಬವಾಗುತ್ತಿದೆ. ಪ್ರಯಾಣಿಕರ ನಿರೀಕ್ಷೆ, ಆಸೆ ಮೆಲಿಂದ ಮೇಲೆ ಹುಸಿಯಾಗುತ್ತಿದೆ. ಹಳದಿ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆಗೆ ಹೊಸ ಗುಡುವು ನೀಡಲಾಗಿದೆ. ಜೂನ್ ಇಲ್ಲವೇ ಜುಲೈನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂಬ ಮಾತು ಸುಳ್ಳಲಾಗಿದೆ. ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಪ್ಡೇಟ್ ನೀಡಿದೆ.
ಹೌದು, ಸುಮಾರು ಒಂದೂವರೆಗೆ ವರ್ಷದ ಹಿಂದೆಯೇ ಡ್ರೈವರ್‌ಲೆಸ್ ಮೆಟ್ರೋ ರೈಲುಗಳು ಆರ್‌ವಿ.ರಸ್ತೆ-ಬೊಮ್ಮಸಂದ್ರವರೆಗಿನ 19ಕಿಲೋ ಮೀಟರ್ ನೂತನ ಮಾರ್ಗದಲ್ಲಿ ಸಂಚರಿಸಬೇಕಿತ್ತು. ಆದರೆ ಅಲ್ಲಿಂದ ವಿಳಂಬವಾಗುತ್ತಲೇ ಬಂದಿದೆ. ಇದೀಗ ಮತ್ತೆ ಒಂದು ತಿಂಗಳ ತಡವಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಮ್ಮ ಮೆಟ್ರೋ ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗ ಜುಲೈಗೆ ಬದಲಾಗಿ ಮುಂದಿನ ಆಗಸ್ಟ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಿದೆ ಎಂಬುದು ಸದ್ಯದ ಮಾಹಿತಿ.

ಜಯದೇವ್ ಆಸ್ಪತ್ರೆ, ಸಿಲ್ಕ್‌ಬೋರ್ಡ್ ಜಂಕ್ಷನ್, ರಾಗಿಗುಡ್ಡ ಪ್ರಸನ್ನಾಂಜನೇಯ ಸ್ವಾಮಿ ದೇವಸ್ಥಾನ, ಎಲೆಕ್ಟ್ರಾನಿಕ್ ಸಿಟಿ ಹೀಗೆ ಪ್ರಮುಖ ಬಡಾವಣೆಗಳ ಮೂಲಕ ಬೊಮ್ಮಸಂದ್ರ ತಲುಪುವ ಮಾರ್ಗ ಇದಾಗಿದೆ. ಚಲಘಟ್ಟ-ವೈಟ್‌ಫಿಲ್ಡ್ ನಂತರ ಈ ಹಳದಿ ಮಾರ್ಗವು ಐಟಿ ಕಾರಿಡಾರ್ ಅನ್ನು ಸಂಪರ್ಕಿಸುತ್ತದೆ.
ಆಗಸ್ಟ್‌ನಲ್ಲಿ ಉದ್ಘಾಟನೆಯಾದರೆ 25 ನಿಮಿಷಗಳಿಗೆ ಒಂದರಂತೆ ರೈಲುಗಳನ್ನು ಕಾರ್ಯಾಚರಣೆ ಮಾಡಲು ಬಿಎಂಆರ್‌ಸಿಎಲ್ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ಸಿಗ್ನಲಿಂಗ್, ಹಳಿ, ಇಡೀ ಮೆಟ್ರೋ ಮಾರ್ಗ ಪರಿಶೀಲನೆ ಆಗಿದೆ. ಇತ್ತೀಚೆಗೆ ಬಂದ ಮೂರನೇ ರೈಲಿನ ತಪಾಸಣೆ ಸಹ ಮುಕ್ತಾಯಗೊಂಡಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಪರಿಶೀಲಿಸಿದ್ದಾರೆ. ಅದರ ವರದಿ ನೀಡಬೇಕಿದ್ದು, ಅದಕ್ಕೆ ಸಚಿವಾಲಯ ಒಪ್ಪಿಗೆ ನೀಡಬೇಕಿದೆ. ಜುಲೈ 15ರ ನಂತರ ಅಂತಿಮ ತಪಾಸಣೆ ಕೈಗೊಳ್ಳಲಾಗುತ್ತದೆ. ಅದಾಗಿ ಒಂದು ವಾರದಲ್ಲಿ ಹಳದಿ ಮಾರ್ಗದ ಕಾರ್ಯಾಚರಣೆ ಆರಂಭದ ನಿಖರ ದಿನಾಂಕ ಗೊತ್ತಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಜುಲೈಗೆ ತಪಾಸಣೆ ಪೂರ್ಣ, ಆಗಸ್ಟ್‌ನಲ್ಲಿ ಪಿಎಂ ಉದ್ಘಾಟನೆ
ಆರ್‌ವಿ.ರಸ್ತೆಯಿಂದ-ಬೊಮ್ಮಸಂದ್ರವರೆಗೆ ಒಟ್ಟು 16 ಮೆಟ್ರೋ ನಿಲ್ದಾಣಗಳು ಬರುತ್ತವೆ. ಎಲೆಕ್ಟ್ರಾನಿಕ್ ಸಿಟಿ ಮೂಲಕ ಹಾದು ಹೋಗುವ ಮಾರ್ಗ ಇದಾಗಿದ್ದು, ಬೊಮ್ಮಸಂದ್ರವರೆಗೆ ಸೇವೆ ನೀಡುತ್ತದೆ. ಬೊಮ್ಮಸಂದ್ರದಿಂದ ಈ ಹಳದಿ ಮಾರ್ಗವನ್ನು ಹೊಸೂರಿಗೆ ಸಂಪರ್ಕಿಸುವ ಕಾರ್ಯ ಸಾಧ್ಯತಾ ವರದಿಯನ್ನು ತಮಿಳುನಾಡಿನ ಚೆನ್ನೈ ಮೆಟ್ರೋ ಅಧಿಕಾರಿಗಳು ಬೆಂಗಳೂರು ಮೆಟ್ರೋಗೆ ಸಲ್ಲಿಸಿದ್ದರು. ಇದಕ್ಕೆ ಕನ್ನಡಿಗರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಕೈಗೂಡಿಲ್ಲ.
ಜುಲೈ ಅಂತ್ಯದ ಹೊತ್ತಿಗೆ ಹಳದಿ ಮಾರ್ಗ, ಡ್ರೈವರ್‌ಲೆಸ್ ರೈಲುಗಳು ಅಗತ್ಯ ಎಲ್ಲ ತಪಾಸಣೆ ಮುಗಿಸಿ ಒಪ್ಪಿಗೆ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಆಗಸ್ಟ್ ಮೊದಲ ಪ್ರಧಾನಿ ನರೇಂದ್ರ ಮೋದಿಯವರು ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಸಾಧ್ಯತೆ ಇದೆ. ಇದಕ್ಕಾಗಿ ಸಿಲ್ಕ್‌ಬೋರ್ಡ್ ಬಳಿ ಬೃಹತ್ ಕಾರ್ಯಕ್ರಮ ಆಯೋಜನೆಗೊಳ್ಳುವ ನಿರೀಕ್ಷೆ ಇದೆ. ಒಂದು ವೇಳೆ ಪಾಲ್ಗೊಳ್ಳದಿದ್ದಲ್ಲಿ, ಪ್ರಧಾನಿಯವರು ಆನ್ಲೈನ್ ಮೂಲಕವೇ ಹಸಿರು ನಿಶಾನೆ ತೋರಿಸಬಹುದು ಎನ್ನಲಾಗಿದೆ.
ತೇಜಸ್ವಿ ಸೂರ್ಯ ಪ್ರತಿಭಟನೆ
ಇನ್ನೂ ಈ ಹಳದಿ ಮೆಟ್ರೋ ಮಾರ್ಗ ವರ್ಷಗಳ ಬಳಿಕವು ತೆರೆಯದೇ ವಿಳಂಬ ಮಾಡಲಾಗುತ್ತಿದೆ. ಕಾಮಗಾರಿ ಮುಗಿದು ಎರಡು ವರ್ಷವಾಗುತ್ತಾ ಬಂದಿದೆ. ಜನರ ತೆರಿಗೆ ಹಣ ಬಳಕೆ ಆಗುತ್ತಿದೆ. ಜನರು ಮೆಟ್ರೋ ಕಾದು ಕಾದು ಸುಸ್ತಾಗಿದ್ದಾರೆ. ಆದರೆ ಈವರೆಗೆ ಮೆಟ್ರೋ ಕಾರ್ಯಾಚರಣೆ ಆರಂಭಿಸಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ ಬೆಳಗ್ಗೆ ಶಾಂತಿನಗರ ಮೆಟ್ರೋ ಮುಖ್ಯ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಿದರು. ಬಿಎಂಆರ್‌ಸಿಎಲ್ ವಿಳಂಬ ನೀತಿ ವಿರುದ್ಧ ಆಕ್ರೋಶ ಹೊರ ಹಾಕಿದರು.












Click it and Unblock the Notifications