Namma Metro: ನೇರಳೆ ಮಾರ್ಗದ ಪ್ರಯಾಣಿಕರೇ ಗಮನಿಸಿ
ಬೆಂಗಳೂರು, ಫೆಬ್ರವರಿ 20; ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರದಲ್ಲಿ ತೊಂದರೆ ಉಂಟಾಗಿದೆ. ನೇರಳೆ ಮಾರ್ಗದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ನಿಧಾನಗತಿಯಲ್ಲಿ ಸಂಚಾರ ನಡೆಸುತ್ತಿವೆ. ಪೀಕ್ ಅವಧಿಯಲ್ಲಿ ಮೆಟ್ರೋ ರೈಲುಗಳ ಸಂಚಾರ ವಿಳಂಬವಾಗುತ್ತಿದೆ. ಇದಕ್ಕಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್ ಪಾಳ್ಯ ನಡುವೆ ನಮ್ಮ ಮೆಟ್ರೋ ರೈಲು ನಿಧಾನಗತಿಯಲ್ಲಿ ಸಂಚಾರ ನಡೆಸುತ್ತಿದೆ ಎಂದು ನಮ್ಮ ಮೆಟ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಇದರಿಂದಾಗಿ ಮೆಜೆಸ್ಟಿಕ್ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದೆ.
ನಮ್ಮ ಮೆಟ್ರೋ ಮಾಹಿತಿ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ನಮ್ಮ ಮೆಟ್ರೋ, "ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್ ಪಾಳ್ಯ ನಡುವೆ ರೈಲುಗಳು ತಾಂತ್ರಿಕ ಕಾರಣದಿಂದ ನಿಧಾನಗತಿಯಲ್ಲಿ ಸಂಚಾರ ನಡೆಸುತ್ತಿವೆ" ಎಂದು ಹೇಳಿದೆ.
Trains in purple line is running at slow speed between Baiyappanahalli to Garudacharpalya due to a technical snag. They will be disruptions in the train schedules . Teams are working to solve at the earliest. Inconvenience is regretted.
— ನಮ್ಮ ಮೆಟ್ರೋ (@OfficialBMRCL) February 20, 2024
"ಇದರಿಂದಾಗಿ ಉಳಿದ ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಿದೆ. ತಾಂತ್ರಿಕ ಪರಿಣಿತರ ತಂಡ ಈ ಕುರಿತು ಪರಿಶೀಲನೆ ನಡೆಸುತ್ತಿದೆ. ಅಡಚಣೆಗಾಗಿ ವಿಷಾದ ವ್ಯಕ್ತಪಡಿಸುತ್ತೇವೆ" ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
"ಪ್ರಯಾಣಿಕರಿಗೆ ಉಂಟಾದ ತೊಂದೆಯನ್ನು ನಿವಾರಿಸಲು ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಮೆಟ್ರೋ ಪ್ರಯಾಣಿಕರು ಸಹಕಾರ ನೀಡಬೇಕು" ಎಂದು ಬಿಎಂಆರ್‌ಸಿಎಲ್ ಟ್ವೀಟ್‌ನಲ್ಲಿ ಮನವಿ ಮಾಡಿದೆ.
ಮತ್ತೆ ಸಂಚಾರ ಆರಂಭ: 9.37ರ ಟ್ವೀಟ್ ಪ್ರಕಾರ 9.20ಕ್ಕೆ ತಾಂತ್ರಿಕ ತೊಂದರೆ ಸರಿಪಡಿಸಲಾಗಿದೆ. ರೈಲುಗಳ ಸಂಚಾರ ಆರಂಭವಾಗಿದೆ. ನಿಗದಿಯಂತೆ ಎಲ್ಲಾ ರೈಲುಗಳು ಸಾಮಾನ್ಯವಾಗಿ ಸಂಚಾರ ನಡೆಸಲು ಕೆಲವು ಹೊತ್ತು ಬೇಕಾಗುತ್ತದೆ. ಅಡಚಣೆಗಾಗಿ ವಿಷಾದಿಸುತ್ತೇವೆ ಎಂದು ನಮ್ಮ ಮೆಟ್ರೋ ಹೇಳಿದೆ.
ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ಚಲ್ಲಘಟ್ಟದಿಂದ ಮೆಜೆಸ್ಟಿಕ್, ಎಂಜಿ ರಸ್ತೆ, ಬೈಯ್ಯಪ್ಪನಳ್ಳಿ, ವೈಟ್‌ಫೀಲ್ಡ್ ಮೂಲಕ ಸಂಚಾರ ನಡೆಸುತ್ತದೆ. ಪೀಕ್ ಅವರ್‌ನಲ್ಲಿ ಸಾವಿರಾರು ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ಆದರೆ ರೈಲುಗಳ ನಿಧಾನಗತಿಯ ಸಂಚಾರದ ಕಾರಣ ಉಳಿದ ರೈಲುಗಳ ವೇಳಾಪಟ್ಟಿ ಬದಲಾಗಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು.











Click it and Unblock the Notifications