Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
ಬೆಂಗಳೂರು, ಏಪ್ರಿಲ್ 19: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕೈಗೆತ್ತಿಕೊಂಡ ಗುಲಾಬಿ ಮಾರ್ಗ (Namma Metro Pink Line) ದಲ್ಲಿ ಸಾಧನೆ ಸನಿಹದಲ್ಲಿದೆ. 13 ಕಿಲೋಮೀಟರ್ ಸುರಂಗ ಮಾರ್ಗ ಅಂತಿಮ ಹಂತದಲ್ಲಿದೆ ಎಂದು ಮೆಟ್ರೋ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರು ನಮ್ಮ ಮೆಟ್ರೋ ''ಗುಲಾಬಿ ಮಾರ್ಗ'ದಲ್ಲಿ ಭೂಗತ ಸುರಂಗ ಮಾರ್ಗ ಕಾರ್ಯ ನಡೆಯುತ್ತಿದೆ. ಇದು ಇನ್ನೇನು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಮೂಲಕ ನಮ್ಮ ಮೆಟ್ರೋ ಮತ್ತೊಂದು ಸಾಧನೆ ಹಂತದಲ್ಲಿದೆ ಎಂದು 'ಎಕನಾಮಿಕ್ ಟೈಮ್ಸ್' ವರದಿ ಮಾಡಿದೆ.

ನಗರದ ಬನ್ನೇರುಘಟ್ಟ ರಸ್ತೆಯಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ 'ಗುಲಾಬಿ ಮಾರ್ಗ'ದಲ್ಲಿ ಸುರಂಗ ಕೊರೆಯುವ ಗುರಿ ಬಹುತೇಕ ಅಂತಿಮ ಹಂತದಲ್ಲಿದೆ. ಇದೇ ವರ್ಷ ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ನಂತರ ಸಿವಿಲ್ ಕೆಲಸಗಳು, ಟ್ರ್ಯಾಕ್ ಹಾಕುವ ಕಾರ್ಯ ನಡೆಯಲಿವೆ.
ಪಿಂಕ್ ಲೈನ್ ನಲ್ಲಿ ಭೂಗತ ಮಾರ್ಗ ಎಷ್ಟು?
ಈ ಗುಲಾಬಿ ಮಾರ್ಗವು ಒಟ್ಟು 21.26 ಕಿಲೋ ಮೀಟರ್ ಉದ್ದವಿದೆ. ಇದರಲ್ಲಿ ಸುಮಾರು 13 ಕಿಲೋಮೀಟರ್ ಭೂಗತ ಕಾಮಗಾರಿಯಲ್ಲೇ ರೈಲು ಸಾಗುವಂತೆ ಸುರಂಗ ಕೊರೆಯಲಾಗುತ್ತಿದೆ. 7.5-ಕಿಲೋಮೀಟರ್ ಎತ್ತರದ ಮಾರ್ಗ ಹೊಂದಿರುವ ಈ ಪಿಂಕ್ ಮಾರ್ಗದಲ್ಲಿ 18 ನಿಲ್ದಾಣಗಳು ಇವೆ.

ಸುರಂಗದ ಶೇ.94 ರಷ್ಟು ಕೆಲಸ ಪೂರ್ಣ
ಮೆಟ್ರೋ ಗುಲಾಬಿ ಯೋಜನೆಯನ್ನು ಮೂರು ವಿಭಾಗವಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವಿಂಗಡಿಸಲಾಗಿದೆ. ಮೊದಲ ಎರಡು ಹಂತಗಳಲ್ಲಿ ಸುರಂಗ ಕೆಲಸ ಮುಗಿದಿದೆ. ಮೂರನೇ ಹಂತದಲ್ಲಿ ಸುರಂಗ ಕೊರೆವ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಸದ್ಯ ಶೇ. 94 ರಷ್ಟು ಕೆಲಸ ಪೂರ್ಣಗೊಂಡಿದೆ.
ಯಶಸ್ವಿ ಸುರಂಗ ಕೊರೆದ 'ಭದ್ರಾ' ಟಿಬಿಎಂ
ಇದೇ ಮಾರ್ಗದಲ್ಲಿ ಈ ಹಿಂದೆ ಕೆ.ಜಿ.ಹಳ್ಳಿ ಮತ್ತು ನಾಗವಾರ ನಡುವೆ 935 ಮೀಟರ್ ಸುರಂಗ ಕಾರ್ಯವು ಸುಧಾರಿತ ಟಿಬಿಎಂ ಯಂತ್ರ 'ಭದ್ರಾ' ಸಹಾಯದಿಂದ ಕೊರೆಯಲಾಗಿದೆ. ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ಕ್ರಮವಾಗಿ ತಮ್ಮ ಕಾರ್ಯಾಚರಣೆ ಪೂರ್ಣಗೊಳಿಸಲಾಗಿದೆ. ಇದೇ ಭದ್ರಾ ಟಿಬಿಎಂ ಈಗ ಕೊನೆಯ ಹಂತ ಸುರಂಗ ಕೊರೆಯುತ್ತಿದ್ದು, ಮುಂದಿನ ಆಗಸ್ಟ ವೇಳೆಗೆ ಕಾರ್ಯ ಮುಗಿಸಿ ಹೊರ ಬರಲಿದೆ.
ಮೆಟ್ರೋ ಮಾರ್ಗದಲ್ಲಿನ ಈ ಸುರಂಗ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಟ್ರ್ಯಾಕ್ ಅಳವಡಿಕೆ ಸೇರಿದಂತೆ ಇನ್ನಿತರ ಸಿವಿಲ್ ಕೆಲಸ ನಡೆಯುತ್ತವೆ. 2024ರ ಅಂತ್ಯದ ಹೊತ್ತಿಗೆ ಈ ಗುಲಾಬಿ ಮಾರ್ಗದಲ್ಲಿನ ಟ್ರ್ಯಾಕ್ ಅಳವಡಿಕೆ ಕೆಲಸ ಅಂತಿಮಗೊಂಡು, ಸಿಗ್ನಲಿಂಗ್ ಕೆಲಸ ನಡೆಯುವ ಸಾಧ್ಯತೆಗಳು ನಡೆಯಬಹದು ಎಂದು ಅಧಿಕಾರಿಗಳು ಯೋಜಿಸಿದ್ದಾರೆ.












Click it and Unblock the Notifications