Pink Line Metro: ಏಪ್ರಿಲ್‌ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ
ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗದ (Namma Metro Pink Line) ಕಾರ್ಯಾಚರಣೆ ಆರಂಭದ ಬಗ್ಗೆ ಪ್ರಯಾಣಿಕರು ಕಾಯರದಿಂದ ಕಾಯುತ್ತಿದ್ದಾರೆ. ಅವರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಶುಭ ಸುದ್ದಿ ನೀಡಿದ್ದು, ಶನಿವಾರ (ಮಾ.21)ದಿಂದಲೇ ಅಗತ್ಯ ಪರಿಶೀಲನಾ ಕಾರ್ಯ ಆರಂಭಿಸಿದೆ. ಕೆಲವೇ ವಾರಗಳಲ್ಲಿ ಉದ್ದೇಶಿತ ಎಲೆವೆಟೆಡ್ ಮೆಟ್ರೋ ಗುಲಾಬಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
ಗುಲಾಬಿ ಮಾರ್ಗ ಆರಂಭಿಸುವ ಮೊದಲು ಬಿಎಂಆರ್‌ಸಿಎಲ್ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಒಟ್ಟು 21.26 ಕಿಲೋ ಮೀಟರ್ ಉದ್ದ ಗುಲಾಬಿ ಮಾರ್ಗವಿದೆ. ಇದರಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ (7.5 ಕಿಮೀ) ಎಲಿವೇಟೆಡ್ ಕಾರಿಡಾರ್ ಮಾರ್ಗದ ಕಾರ್ಯ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಈ ಮಾರ್ಗವನ್ನು ಮುಂದಿನ ಮೇ ತಿಂಗಳಿನಲ್ಲಿ ಶುರು ಮಾಡಲು ಯೋಜಿಸಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (ಆರ್‌ಡಿಓಎಸ್) ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ ಆರಂಭಿಸಲಾಗಿದೆ.

ಏಪ್ರಿಲ್ ಮಧ್ಯಭಾಗಕ್ಕೆ ಪರೀಕ್ಷೆಗಳು ಪೂರ್ಣ
ಪರಿಕ್ಷಾರ್ಥ ಸಂಚಾರಗಳು ನಡೆದಿವೆ. ಮೇ ತಿಂಗಳೊಳಗೆ ಎಲ್ಲ ರೀತಿಯ ಪರಿಶೀಲನೆ, ತಪಾಸಣೆ ಮುಗಿಸಿ ವಾಣಿಜ್ಯ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ನಾಲ್ಕು ಬಾರಿ ರೈಲುಗಳ ಪರೀಕ್ಷೆಗಳು ನಡೆದಿವೆ. ಈ ಮಾರ್ಗದಲ್ಲಿ ಲೋಡ್ ಪರೀಕ್ಷೆ, ವೇಗದ ಸಂಚಾರ, ಸಿಗ್ನಲಿಂಗ್ ಸೇರಿದಂತೆ ಹತ್ತಾರು ತಪಾಸಣೆ ನಡೆದಿವೆ. ಏಪ್ರಿಲ್ ಮೊದಲ ವಾರದವರೆಗೂ ಒಂದಷ್ಟು ಪರೀಕ್ಷೆಗಳು ಮುಂದುವರಿಯಲಿವೆ.
ಕಾಳೇನ ಅಗ್ರಹಾರದಿಂದ ತಾವರೆಕರೆ ವರೆಗೆ ಒಟ್ಟು ಆರು ನಿಲ್ದಾಣಗಳು ಬರುತ್ತವೆ. ಈ ಮಾರ್ಗದಲ್ಲಿ ಒಟ್ಟು 23 ರೈಲುಗಳನ್ನು ಓಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಅಧಿಕಾರಿಗಳು ನಿರ್ಧರಿಸಿದ್ದಾರೆ. ಅದರಲ್ಲಿ ಆರು ಡ್ರೈವರ್‌ಲೆಸ್ ರೈಲು ಸಂಚಾರ ಮಾಡಲಿದ್ದು, ನಾಲ್ಕು ರೈಲುಗಳು ಬೆಂಗಳೂರಿಗೆ ಬಂದಿವೆ. ಉಳಿದ ಎರಡು ರೈಲುಗಳು ಮುಂದಿನ ಏಪ್ರಿಲ್ ತಿಂಗಳಲ್ಲಿ ನಗರಕ್ಕೆ ಬರಲಿವೆ.
2027ಕ್ಕೆ ಮೆಟ್ರೋ ಜಾಲ ವಿಸ್ತರಣೆ
ತಾವರೆಕೆರೆಯಿಂದ ನಾಗವಾರವರೆಗೆ ಉಳಿದ ಮಾರ್ಗವು ಸುರಂಗ ರಸ್ತೆಯಿಂದ ಕೂಡಿದೆ. ಈ ಮಾರ್ಗವನ್ನು ಎರಡನೇ ಹಂತದಲ್ಲಿ ಇದೇ ಡಿಸೆಂಬರ್ 2026 ಅಂತ್ಯಕ್ಕೆ ತೆರೆಯಲು ನಿರ್ಧರಿಸಲಾಗಿದೆ. ಮೇ ತಿಂಗಳಲ್ಲಿ ಎಲಿವೇಟೆಡ್ ಮಾರ್ಗ ತೆರೆಯುತ್ತಿದ್ದಂತೆ ಭೂಗತ ಮಾರ್ಗದಲ್ಲಿ ತಪಾಸಣೆ, ಟ್ರ್ಯಾಕ್ ಪರೀಕ್ಷೆ, ಸಿಗ್ನಲಿಂಗ್ ಸೇರಿ ಎಲ್ಲ ತಪಾಸಣೆ ಆರಂಭಿಸಲಾಗುತ್ತದೆ. ಈ ವರ್ಷಾಂತ್ಯಕ್ಕೆ ಹಾಲಿ ನಮ್ಮ ಮೆಟ್ರೋ ಜಾಲ 96 ಕಿಲೋ ಮೀಟರ್‌ಗೆ 21 ಕಿಲೋ ಮೀಟರ್ ಮಾರ್ಗ ಸೇರ್ಪಡೆಯಾಗಲಿದೆ. ಇದರೊಂದಿಗೆ ನೀಲಿ ಮಾರ್ಗವು ತೆರೆಯಲಿದೆ.












Click it and Unblock the Notifications