Namma Metro Pink Line: ಮೆಟ್ರೋ 4ನೇ ಮಾರ್ಗ ಅಕ್ಟೋಬರ್ 3ನೇ ವಾರದಲ್ಲಿ ಓಪನ್ ಸಾಧ್ಯತೆ
ಬೆಂಗಳೂರು: ಬೆಂಗಳೂರು ನಗರವಾಸಿಗಳ ಬಹುನಿರೀಕ್ಷೆಯ ನಮ್ಮ ಮೆಟ್ರೋ ಕಾಳೇನ ಅಗ್ರಹಾರ- ತಾವರೆಕೆರೆವರೆಗಿನ ಗುಲಾಬಿ ಮಾರ್ಗದ ಕಾರ್ಯಾರಂಭಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ಮೂಲಕ ಗುಲಾಬಿ ಮಾರ್ಗವು ಮೊದಲ ಹಂತದಲ್ಲಿ ಪ್ರಯಾಣಿಕರಿಗೆ ಮುಕ್ತಗೊಳ್ಳಲು ಮಹೂರ್ತ ಕೂಡಿ ಬಂದಂತಾಗಿದೆ. ಇದರಿಂದ ನಮ್ಮ ಮೆಟ್ರೋ ಜಾಲದ ವ್ಯಾಪ್ತಿಯ 100 ಕಿಲೋ ಮೀಟರ್ ಗಡಿ ದಾಟಲಿದೆ.
ನಮ್ಮ ಮೆಟ್ರೋ ಕಾಳೇನ ಅಗ್ರಹಾರ-ನಾಗವಾರವರೆಗಿನ 21 ಕಿಲೋ ಮೀಟರ್ ಉದ್ದದ ಗುಲಾಬಿ ಮಾರ್ಗದಲ್ಲಿ 7.5 ಕಿಲೋ ಮೀಟರ್ ಉದ್ದದ ಕಾಳೇನ ಅಗ್ರಾಹಾರ-ತಾವರೆಕರೆ ಕಾರಿಡಾರ್ ಮಾರ್ಗವು ಮೂರು ಬಾರಿ ಗಡುವು ಮೀರಿತ್ತು. ಇದೀಗ ಅಂತಿಮವಾಗಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ. ಈ ಮೂಲಕ ಅಕ್ಟೋಬರ್ 3ನೇ ವಾರದ ಹೊತ್ತಿಗೆ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಮಾರ್ಗದ ಆರಂಭಿಸುವ ಕುರಿತು ಅಧಿಕೃತ ಮಾಹಿತಿಯು ಇನ್ನೊಂದು ವಾರದಲ್ಲಿ ಹೊರ ಬೀಳುವ ನಿರೀಕ್ಷೆಗಳಿವೆ.

CMRS ಅನುಮೋದನೆ ಬಾಕಿ
ಸದರಿ ಗುಲಾಬಿ ಮಾರ್ಗದ ಆರು ನಿಲ್ದಾಣಗಳನ್ನು ಒಳಗೊಂಡು ಎಲೆವೆಟೆಡ್ ಕಾರಿಡಾರ್ ಮೆಟ್ರೋ ಮಾರ್ಗದ ಶಾಸನ ಬದ್ಧ ಅನುಮೋದನೆ ದೊರೆಯುವುದು ಬಾಕಿ ಉಳಿದ ಪರಿಣಾಮ ವಾಣಿಜ್ಯ ಕಾರ್ಯಾಚರಣೆ ಆರು ತಿಂಗಳಿನಿಂದ ವಿಳಂಬವಾಗಿತ್ತು. ಇದೀಗ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಇನ್ನೂ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಅನುಮೋದನೆ ನೀಡುವುದು ಬಾಕಿ ಇದೆ. ಈ ಆಯುಕ್ತರ ತಂಡ ಅಕ್ಟೋಬರ್ ಆರಂಭದಲ್ಲಿ ಅಂತಿಮ ತಪಾಸಣೆ ಕೈಗೊಳ್ಳಲಿದ್ದಾರೆ. ಸುಮಾರು ಹತ್ತರಿಂದ ಹದಿನೈದು ದಿನಗಳಲ್ಲಿ ಅವರು ಒಪ್ಪಿಗೆ ನೀಡಲಿದ್ದಾರೆ. ಅಕ್ಟೋಬರ್ ಮೂರನೇ ವಾರಕ್ಕೆ ಅಂದುಕೊಂಡಂತೆ ಗುಲಾಬಿ ಎತ್ತರಿಸಿದ 7.5ಕಿಮೀ ಮಾರ್ಗ ಉದ್ಘಾಟನೆ ಗೊಳ್ಳುವುದು ಬಹುತೇಕ ನಿಕ್ಕಿಯಾಗಿದೆ ಎಂದು ಮೂಲಗಳು ತಿಳಿಸಿವೆ.
6 ರೈಲುಗಳ ಕಾರ್ಯಾಚರಣೆ, 6 ನಿಮಿಷಕ್ಕೊಂದು ರೈಲು!
ಈ ಮಾರ್ಗ ಕಾರ್ಯಾರಂಭವಾಗುತ್ತಿದ್ದಂತೆ ಮೊದಲಿಗೆ ಆರು ರೈಲುಗಳನ್ನು ಸಂಚಾರಕ್ಕೆ ಬಿಡಲು ಅಧಿಕಾರಿಗಳು ತೀರ್ಮಾನಿಸಿದೆ. ಈ ರೈಲುಗಳು ಪೀಕ್ ಹವರ್‍ನಲ್ಲಿ 6ನಿಮಿಷಕ್ಕೆ ಒಂದರಂತೆ ಸಂಚಾರ ಸೇವೆ ನೀಡುತ್ತವೆ. ಸಾಮಾನ್ಯ ಸಮಯದಲ್ಲಿ ನಿತ್ಯ 10 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಮುಂದೆ ಎರಡನೇ ಹಂತದಲ್ಲಿ ಗುಲಾಬಿ ಸುರಂಗ ಮಾರ್ಗ ತೆರೆದ ಬಳಿಕ ರೈಲುಗಳ ಸಂಖ್ಯೆ ಹೆಚ್ಚಳಕ್ಕೆ ಪ್ಲ್ಯಾನ್ ಮಾಡಲಾಗಿದೆ. ಆಗ ರೈಲುಗಳ ಆವರ್ತನ ಸಮಯ ಮತ್ತಷ್ಟು ಇಳಿಕೆ ಆಗಲಿದೆ.
100 ಕಿಮೀ ದಾಟಲಿದೆ ಮೆಟ್ರೋ ಜಾಲ
ಬೆಂಗಳೂರಿನ ನೇರಳೆ ಮಾರ್ಗ, ಹಸಿರು ಮತ್ತು ಹಳದಿ ಮಾರ್ಗ ಸೇರಿ ಒಟ್ಟು ಮೂರು ಲೈನ್‌ಗಳ ಮೆಟ್ರೋ ಜಾಲವು ಹಾಲಿ 96.5 ಕಿಲೋ ಮೀಟರ್ ಇದೆ. ಇನ್ನೂ ಈ ನಾಲ್ಕನೇ ಗುಲಾಬಿ ಮಾರ್ಗ ಸೇವೆ ಲಭ್ಯವಾದರೆ ಮೊದಲ ಬಾರಿಗೆ ನಮ್ಮ ಮೆಟ್ರೋ ನೆಟ್‌ವರ್ಕ್ 100 ಕಿಮೀ ದಾಟಲಿದೆ. ಒಟ್ಟು 103.5 ಕಿಲೋ ಮೀಟರ್ ಗೆ ಮೆಟ್ರೋ ವ್ಯಾಪ್ತಿ ಹೆಚ್ಚಲಿದೆ.
ಎರಡನೇ ಹಂತದ ಗುಲಾಬಿ ಮಾರ್ಗ ಓಪನ್ ಯಾವಾಗ?
ಗುಲಾಬಿ ಮಾರ್ಗದ ಮೊದಲ ಹಂತದಲ್ಲಿ 7.5ಕಿಮೀ ಇದೇ ವರ್ಷ ಮೇ ತಿಂಗಳಲ್ಲಿ ಓಪನ್ ಮಾಡಿದರೆ ಎರಡನೇ ಹಂತದಲ್ಲಿ 13.5 ಕಿಮೀ ತಾವರೆಕೆರೆ-ನಾಗವಾರವರೆಗಿನ ಭೂಗತ ಮೆಟ್ರೋ ಮಾರ್ಗವನ್ನು 2026ಡಿಸೆಂಬರ್‍ಗೆ ಓಪನ್ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಇದು 2027ಕ್ಕೆ ಮುಂದೂಡಿಕೆ ಆಗಲಿದೆ. ಆಗಲೂ ಶಾಸನಬದ್ಧ ಸಿಗ್ನಲ್ ಟೆಸ್ಟಿಂಗ್, ಲೋಡ್, ಗುಣಮಟ್ಟ ಪರೀಕ್ಷೆ, ರೈಲ್ವೆ ಮಂಡಳಿ ಸೇರಿದಂತೆ ಅಗತ್ಯ ಅಧಿಕಾರಿಗಳಿಂದ ಅನುಮೋದನೆ ಪಡೆಯಬೇಕಾಗುತ್ತದೆ. ಹೀಗಾಗಿ ಇದರ ಡೆಡ್‌ಲೈನ್ ಮುಂದೂಡಿಕೆ ಆಗಿದೆ.


Click it and Unblock the Notifications
