Namma Metro: ಮೆಟ್ರೋ ಮಾರ್ಗಗಳಲ್ಲಿ ಸುರಕ್ಷತೆ ಮೇಲ್ವಿಚಾರಣೆ ನಡೆಸಲಿದೆ IISc ತಂಡ- ವರದಿ, ವಿವರ
ಬೆಂಗಳೂರು, ಮಾರ್ಚ್ 11: ಮುಂಬರುವ ಮೂರು ಮೆಟ್ರೋ ಮಾರ್ಗಗಳ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡಲು IISc ತಜ್ಞರ ತಂಡವನ್ನು BMRCL ನಿಯೋಜಿಸಿದೆ. ಬುಧವಾರ ತನ್ನ ಕೆಲಸ ಆರಂಭಿಸಿರುವ ತಂಡ 75 ದಿನಗಳಲ್ಲಿ ವರದಿ ನೀಡಲಿದೆ ಎಂದು BMRCL ಹೇಳಿದೆ.
ನಿರ್ಮಾಣ ಹಂತದಲ್ಲಿರುವ ಹೊರ ವರ್ತುಲ ರಸ್ತೆ ಮಾರ್ಗ (ಕೆಆರ್ ಪುರಂನಿಂದ ಸಿಲ್ಕ್ ಬೋರ್ಡ್), ವಿಮಾನ ನಿಲ್ದಾಣ ಮಾರ್ಗ (ಕೆಆರ್ ಪುರಂನಿಂದ ಕೆಐಎ) ಹಾಗೂ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಭೂಗತ ಕಾರಿಡಾರ್‌ಗಳನ್ನು ಮೂವರು ಸದಸ್ಯರ ತಂಡ ಪರಿಶೀಲಿಸಲಿದೆ.

ಜನವರಿ 10 ರಂದು ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಕುಸಿದು ಬಿದ್ದ ಪರಿಣಾಮ ಮಹಿಳೆ ಮತ್ತು ಆಕೆಯ ಮಗ ಸಾವನ್ನಪ್ಪಿದ ದುರ್ಘಟನೆ ನಡೆದಿತ್ತು. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಬಿಎಂಆರ್‌ಸಿಎಲ್‌ನ ಬ್ಯಾರಿಕೇಡ್‌ಗಳು ಮತ್ತು ಸಿಂಕ್‌ಹೋಲ್‌ಗಳನ್ನು ಒಳಗೊಂಡ ಸಣ್ಣ ಅಪಘಾತಗಳು ಕಳೆದ ತಿಂಗಳು ಮತ್ತೆ ಸಂಭವಿಸಿವೆ. ಇದು ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ತಂಡದ ಸದಸ್ಯರು: ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜೆ ಎಂ ಚಂದ್ರ ಕಿಶನ್, ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಸಹ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ರಾವ್ ಮತ್ತು ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದಲ್ಲಿ ಈ ಹಿಂದೆ ಕೆಲಸ ಮಾಡಿದ ರಮೇಶ್ ಬಾಬು ನಾರಾಯಣಪ್ಪ.

ಈ ಕುರಿತು ನ್ಯೂ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಗೆ ಮಾತನಾಡಿರುವ ಪ್ರೊ.ಕಿಶನ್, 'ಮೆಟ್ರೊ ನಿರ್ಮಾಣದ ಸ್ಥಳಗಳಲ್ಲಿ ಬ್ಯಾರಿಕೇಡಿಂಗ್ ಸೇರಿದಂತೆ ಎಲ್ಲ ಸುರಕ್ಷತಾ ಅಂಶಗಳನ್ನು ಪರಿಶೀಲಿಸುತ್ತೇವೆ. ನಾವು ಒದಗಿಸಿದ ಮಾರ್ಗಸೂಚಿಗಳನ್ನು ಅಧ್ಯಯನ ಮಾಡುತ್ತೇವೆ. ಗುತ್ತಿಗೆದಾರರು ಅವುಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು ಪರಿಶೀಲಿಸುತ್ತೇವೆ. ಸೈಟ್‌ಗಳಲ್ಲಿ ಟ್ರಾಫಿಕ್ ದೃಶ್ಯ ಮತ್ತು ಹತ್ತಿರದ ಜಂಕ್ಷನ್‌ಗಳನ್ನು ಸಹ ವಿವರವಾಗಿ ಪರಿಶೀಲಿಸಲಾಗುವುದು' ಎಂದು ತಿಳಿಸಿದ್ದಾರೆ.
ಜನವರಿ 10 ರಂದು ಸಂಭವಿಸಿದ ದುರ್ಘಟನೆ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪ್ರೊಫೆಸರ್ ಚಂದ್ರ ಕಿಶನ್ ಅವರು ಸಲ್ಲಿಸಿದ ವರದಿಯನ್ನು BMRCL ಅನುಸರಿಸರಿಸುತ್ತಿದೆ. ಬಲವರ್ಧನೆಯ ಪಂಜರವನ್ನು ನಿರ್ಮಿಸುವ ಪ್ರಮಾಣಿತ ಕಾರ್ಯಾಚರಣೆಯ ವಿಧಾನವನ್ನು BMRCL ಈಗ ಬದಲಾಯಿಸಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕ ಕಲ್ಪಿಸುವ 2ಎ ಮತ್ತು 2ಬಿ ಮೆಟ್ರೋ ಹಂತಗಳಲ್ಲಿ 12 ಮೀಟರ್‌ಗಿಂತ ಎತ್ತರದ ಪಿಲ್ಲರ್‌ಗಳ ನಿರ್ಮಾಣವನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
'ನಾವು 12 ಮೀಟರ್‌ಗಿಂತ ಹೆಚ್ಚಿನ ಬಲವರ್ಧನೆಯ ಪಂಜರಗಳ ಕೆಲಸವನ್ನು ನಿಲ್ಲಿಸಿದ್ದೇವೆ. 12 ಮೀಟರ್‌ಗಿಂತ ಕಡಿಮೆ ಇರುವ ಬಲವರ್ಧನೆಯ ಪಂಜರಗಳ ಕೆಲಸವನ್ನು ಕೈಗೊಳ್ಳಲಾಗಿದೆ' ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ.












Click it and Unblock the Notifications