Namma Metro: ಒಂದೇ ದಿನಕ್ಕೆ ಹೆಚ್ಚಾಯ್ತು 'ವೈಟ್‌ಫಿಲ್ಡ್' ಮಾರ್ಗದ ಪ್ರಯಾಣಿಕರ ಸಂಖ್ಯೆ, ಎಷ್ಟು?
ಬೆಂಗಳೂರು, ಅಕ್ಟೋಬರ್ 10: ಬೆಂಗಳೂರು ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದ ಸಂಪೂರ್ಣ ಸಂಚಾರವು ಸೋಮವಾರ ಆರಂಭವಾಗಿದೆ. ಬಿಟ್ಟು ಹೋಗಿದ್ದ ಕೆ.ಆರ್.ಪುರ- ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ.
ಐಟಿ ಕಾರಿಡಾರ್ ಸಂಪರ್ಕಿಸುವ ಈ ನೇರಳೆ ಮಾರ್ಗದಲ್ಲಿ ಸಂಪರ್ಕ ಕೊಂಡಿಯಾಗಿದ್ದ ಬೈಯಪ್ಪನಹಳ್ಳಿ- ಕೆಆರ್ ಪುರಂ ವರೆಗಿನ 2.2 ಕಿಲೋ ಮೀಟರ್ ಮಾರ್ಗದ ಕೆಲಸ ಪೂರ್ಣಗೊಂಡಿರಲಿಲ್ಲ. ಆಗ ಕೆ.ಆರ್ ಪುರಂನಿಂದ ವೈಟ್‌ಫಿಲ್ಡ್‌ಗೆ ಹೋಗುವವರ ಸಂಖ್ಯೆ ಸುಮಾರು 27,000 ರಷ್ಟಿತ್ತು.

ಈಗ ನೇರಳೆ ಮಾರ್ಗ ಪೂರ್ಣ ಆರಂಭಗೊಂಡ ಒಂದೇ ದಿನದಲ್ಲಿ ಕೆ.ಆರ್‌ಪುರಂನಿಂದ ವೈಟ್‌ಫಿಲ್ಡ್‌ಗೆ 54,000ಕ್ಕೂ ಅಧಿಕ ಮಂದಿ ಪ್ರಯಾಣ ಬೆಳೆಸಿದ್ದಾರೆ. ಈ ಮಾರ್ಗದಲ್ಲಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿದೆ. ಈ ಮೂಲಕ ಐಟಿ ಉದ್ಯೋಗಿಗಳು ಮೆಟ್ರೋ ಸೇವೆ ಪಡೆಯುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ-ಸಂಜೆ ತುಂಬಿ ತುಳುಕುವ ರೈಲುಗಳು
ಬೆಂಗಳೂರು ಪಶ್ಚಿಮ ತುದಿಯಲ್ಲಿರುವ ಚಲ್ಲಘಟ್ಟದಿಂದ ಪೂರ್ವ ತುದಿಯಲ್ಲಿರುವ ಕಾಡುಗೋಡಿ (ವೈಟ್‌ಫೀಲ್ಡ್) ವರೆಗೆ ತಡೆರಹಿತ ಮತ್ತು ಕೈಗೆಟುಕುವ ಸಂಪರ್ಕವನ್ನು ನಮ್ಮ ಮೆಟ್ರೋ ಒದಗಿಸಿದೆ. ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್‌ಗಳಲ್ಲಿ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ವಿಭಾಗದಲ್ಲಿ ಜನಸಂದಣಿಯಿಂದಾಗಿ ರೈಲುಗಳು ತುಂಬಿ ತುಳುಕುತ್ತಿರುತ್ತವೆ.

ಕೆಆರ್ ಪುರ ಮತ್ತು ವೈಟ್‌ಫೀಲ್ಡ್ ನಡುವೆ ಪ್ರಯಾಣಿಸುವ ನಾನು ಸೀಟು ಹಿಡಿದು ಪ್ರಮಾಣಸುತ್ತಿದ್ದೆ. ಆದರೆ ಈ ಭಾಗದ ಮೆಟ್ರೋ ಆರಂಭವಾದ ಬಳಿಕ ಮೊದಲ ಬಾರಿಗೆ ಸೋಮವಾರ ಸಂಜೆ ಮೆಟ್ರೋ ರೈಲಿನಲ್ಲಿ ನಿಂತಕೊಂಡೆ ಬಂದಿದ್ದೇನೆ. ಈ ಮೂಲಕ ಬಹುನಿರೀಕ್ಷೆಯ ಮಾರ್ಗದಲ್ಲಿ ಮೆಟ್ರೋ ಓಡಾಡುತ್ತಿರುವುದು ವೈಟ್‌ಫಿಲ್ಡ್ ತೆರಳುವವರಿಗೆ ಸಾಕಷ್ಟು ಸಹಾಯವಾಗಿದೆ ಎಂದು ಟಿಕ್ಕಿಯೊಬ್ಬರು ತಿಳಿಸಿದರು.
ಪ್ರಮಾಣಿಕರ ಸಂಖ್ಯೆ ಹೆಚ್ಚಳ ಖಚಿತಪಡಿಸಿದ BMRCL
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವ್ಯವಸ್ಥಾಪಕ ನಿದೇಶಕ ಅಂಜುಮ್ ಪರ್ವೇಜ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪರ್ಪಲ್ ಲೈನ್‌ನಲ್ಲಿ ಪ್ರಯಾಣಿಕ ಹೆಚ್ಚಾಗುತ್ತಿದ್ದಾರೆ. ಈ ವಿಚಾರವನ್ನು ದೃಢೀಕರಿಸಿದ ಅವರು, ಸೋಮವಾರ ರಾತ್ರಿ 9 ಗಂಟೆಯವರೆಗೆ ವಿಸ್ತೃತ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ 54,000 ಕ್ಕೂ ಹೆಚ್ಚು ಜನರು ಓಡಾಡಿದ್ದಾರೆ.
BMRCL ಮಾರ್ಗಗಳಲ್ಲಿ ರಾತ್ರಿ 9 ಗಂಟೆಯವರೆಗೆ 5.1 ಲಕ್ಷ ಪ್ರಯಾಣಿಕರ ಸಂಚಾರ ದಾಖಲಾಗಿದೆ. ಪ್ರತಿದಿನ ಸರಾಸರಿ 6.2 ಲಕ್ಷ ಪ್ರಯಾಣಿಕರು ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸಂಚರಿಸುತ್ತಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯಲ್ಲಿ ಸುಮಾರು 80,000 ದಷ್ಟು ಪ್ರಯಾಣಿಕರು ಹೆಚ್ಚಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಈ ಮೋದಲು ಅಂದರೆ ಭಾನುವಾರದವರೆಗೆ (ಅ.8) ನೇರಳೆ ಮಾರ್ಗದ ಕೆಂಗೇರಿ-ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ- ವೈಟ್‌ಫೀಲ್ಡ್ (ಕಾಡುಗೋಡಿ) ವರೆಗೆ ಮಾತ್ರ ರೈಲುಗಳು ಓಡಾಡುತ್ತಿದ್ದವು. ಸೋಮವಾರದಿಂದ ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ನಡುವಿನ ಸಂಪರ್ಕ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟವರೆಗಿನ ಮಾರ್ಗಗಳು ತೆರೆದಿವೆ. ಹೀಗಾಗಿ ಸುಮಾರು 40 ಕಿಲೋ ಮೀಟರ್ ನೇರಳೆ ಮಾರ್ಗವು ಸಂಪೂರ್ಣವಾಗಿ ಸಂಚಾರ ಮುಕ್ತವಾಗಿದೆ.
ಪ್ರಯಾಣಿಕರ ಆಯಾಸ ಕಡಿಮೆ- ಸಮಯ ಉಳಿತಾಯ
ಈ ಹಿಂದೆ ಕೆಂಗೇರಿಯಿಂದ ಇಲ್ಲವೇ ಈ ಭಾಗದಿಂದ ವೈಟ್ ಫಿಲ್ಡ್ ಹೋಗುವವರು ಬೈಯಪ್ಪನಹಳ್ಳಿ ವರೆಗೆ ಮೆಟ್ರೋ ದಲ್ಲಿ ತೆರಳಿ ಅಲ್ಲಿಂದ ಫಿಡರ್ ಬಸ್, ಆಟೋ ಗಳ ಮೂಲಕ ಕೆ.ಆರ್ ಪುರಂ ವರೆಗೆ ತಲುಪಿ ಅಲ್ಲಿಂದ ಮತ್ತೆ ಮೆಟ್ರೋ ಮೂಲಕ ವೈಟ್ ಫಿಲ್ಡ್‌ಗೆ ಹೋಗಬೇಕಿತ್ತು. ಇದಕ್ಕೆ ಪ್ರಯಾಣಿಕರು ಸುಮಾರು 30 ನಿಮಿಷ ಕಾಯಬೇಕಿತ್ತು. ಈಗ ಅಷ್ಟು ಸಮಯವು ಉಳಿಯಲಿದ್ದು, ಚಲ್ಲಘಟ್ಟದಿಂದ ಒಂದೇ ರೈಲಿನಲ್ಲಿ ವೈಟ್‌ಫಿಲ್ಡ್‌ವರೆಗೆ ಸಾಗಬಹುದಾಗಿದೆ.
ಸಂಪೂರ್ಣ ನೇರಳೆ ಮಾರ್ಗದ ಪರ್ಪಲ್ ಲೈನ್ ತೆರೆಯುವಿಕೆಯು ದೈನಂದಿನ ಪ್ರಯಾಣಿಕರಿಗೆ, ವ್ಯಾಪಾರ ವಹೀವಾಟುಗಳಿಗೆ ಹೆಚ್ಚಿನ ಸಹಾಯವಾಗಲಿದೆ. ಆಯಾಸ ಆಗದೇ ಧೀರ್ಘ ಕಾಲದ ಪ್ರಯಾಣ ಮತ್ತು ಸಮಯವು ಉಳಿತಾಯಲವಾಗಲಿದೆ ಎಂದು ಮತ್ತೊಬ್ಬ ಪ್ರಯಾಣಿಕರೊಬ್ಬರು ತಿಳಿಸಿದರು.












Click it and Unblock the Notifications