Namma Metro: ಚಲ್ಲಘಟ್ಟ - ಕೆಂಗೇರಿ ಮಾರ್ಗದ ಸುರಕ್ಷತಾ ತಪಾಸಣೆ ದಿನಾಂಕ ಬದಲಾವಣೆ
ಕಾವೇರಿ ವಿವಾದದ ಬಿಸಿ ನಮ್ಮ ಮೆಟ್ರೋ ಮೇಲೆ ಕೂಡ ಪರಿಣಾಮ ಬೀರಿದೆ. ಸೆಪ್ಟೆಂಬರ್ 29ರಂದು ಕೆಂಗೇರಿ - ಚಲ್ಲಘಟ್ಟ ಮಾರ್ಗದ ಸುರಕ್ಷತಾ ತಪಾಸಣೆಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ನಿರ್ಧರಿಸಿದ್ದರು, ಆದರೆ ಅಂದೇ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿರುವ ಕಾರಣ ಈಗ ತಪಾಸಣೆ ದಿನಾಂಕ ಕೂಡ ಬದಲಾವಣೆ ಮಾಡಲಾಗಿದೆ.
ಸೆಪ್ಟೆಂಬರ್ 29ರಂದು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಕೆಂಗೇರಿ ಚಲ್ಲಘಟ್ಟ ನಡುವಿನ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ನಡೆಸಬೇಕಾಗಿತ್ತು, ಬಂದ್ ಇರುವ ಕಾರಣ ಈಗ ಒಂದು ದಿನ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 28ರಂದೇ ಸುರಕ್ಷತಾ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ.

ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಈಗಾಗಲೇ ಕೆಆರ್ ಪುರ - ಬೈಯಪ್ಪನಹಳ್ಳಿ ನಡುವಿನ 2-ಕಿಮೀ ಮಾರ್ಗದ ಸುರಕ್ಷತಾ ತಪಾಸಣೆ ಮಾಡಿದ್ದು, ರೈಲು ಸಂಚಾರಕ್ಕೆ ಅನುಮತಿ ಕೂಡ ನೀಡಿದ್ದಾರೆ. ಶೀಘ್ರದಲ್ಲೇ ಈ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಸೆಪ್ಟೆಂಬರ್ 26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ ಕರೆ ನೀಡಿದ್ದವು, ಸೆಪ್ಟೆಂಬರ್ 29ರಂದು ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇಂದು (ಮಂಗಳವಾರ) ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ತಮಿಳುನಾಡಿಗೆ ಮತ್ತೆ 18 ದಿನ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದ್ದು, ಹೋರಾಟ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.
ಸೆ.29ರಂದು ಕರ್ನಾಟಕ ಬಂದ್ ಇರುವ ಕಾರಣ ಸುರಕ್ಷತಾ ತಪಾಸಣೆಗೆ ಅಡ್ಡಿಯಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದ್ದು, ಒಂದು ದಿನ ಮೊದಲನೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ತಪಾಸಣೆ ನಡೆಸಲು ನಿರ್ಧರಿಸಿದ್ದಾರೆ.
ಮೆಟ್ರೋ ಸಂಚಾರ ಯಾವಾಗ?
ಕೆಆರ್ ಪುರ - ಬೈಯಪ್ಪನಹಳ್ಳಿ ನಡುವಿನ ಮಾರ್ಗದ ಸುರಕ್ಷತಾ ತಪಾಸಣೆ ಯಶಸ್ವಿಯಾಗಿ ನಡೆಸಿದ್ದು, ರೈಲು ಸಂಪಾರಕ್ಕೆ ಸಿಎಂಆರ್‌ಎಸ್ ಒಪ್ಪಿಗೆ ನೀಡಿದೆ. ಈಗ ಚಲ್ಲಘಟ್ಟ - ಕೆಂಗೇರಿ ನಡುವೆ ಕೂಡ ಸುರಕ್ಷತಾ ತಪಾಸಣೆ ನಡೆಸಿ ಅನುಮತಿ ನೀಡಿದರೆ ನೇರಳೆ ಮಾರ್ಗ ಸಂಪೂರ್ಣವಾಗಿ ರೈಲು ಸಂಚಾರಕ್ಕೆ ಸಿದ್ಧವಾಗಲಿದೆ.
ಕೆಆರ್ ಪುರ - ಬೈಯಪ್ಪನಹಳ್ಳಿ ಮತ್ತು ಚಲ್ಲಘಟ್ಟ - ಕೆಂಗೇರಿ ನಡುವೆ ಏಕಕಾಲಕ್ಕೆ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಯೋಜಿಸಿತ್ತು, ಆದರೆ ಸದ್ಯದ ಪರಿಸ್ಥಿತಯಲ್ಲಿ ಯಾವಾಗ ಸೇವೆ ಆರಂಭಿಸಲಿದೆ ಎಂದು ಇನ್ನೂ ನಿರ್ಧಾರವಾಗಿಲ್ಲ, ಕೆಲವು ಮೂಲಗಳ ಪ್ರಕಾರ ಅಕ್ಟೋಬರ್ ಮೊದಲ ವಾರ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.












Click it and Unblock the Notifications