Namma Metro: ಸೆ.21ರಂದು ಬೈಯಪ್ಪನಹಳ್ಳಿ-ಕೆಆರ್ ಪುರ ಮೆಟ್ರೋ ಮಾರ್ಗ ಸುರಕ್ಷತಾ ತಪಾಸಣೆ: ಸಂಚಾರ ವ್ಯತ್ಯಯ
ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಸೆಪ್ಟೆಂಬರ್ 21 ರಂದು ಬೈಯಪ್ಪನಹಳ್ಳಿ-ಕೆಆರ್ ಪುರ ವಿಭಾಗದ 2 ಕಿಲೋಮೀಟರ್ ವ್ಯಾಪ್ತಿಯ ತಪಾಸಣೆ ನಡೆಸಲಿದ್ದಾರೆ. ಈ ತಪಾಸಣೆ ವೈಟ್‌ಫೀಲ್ಡ್‌ನ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿದೆ.
ಈ ಬಗ್ಗೆ ಬಿಎಂಆರ್ ಸಿಎಲ್ ಎಕ್ಸ್ (ಟ್ವಿಟರ್) ನಲ್ಲಿ ಅಧಿಕೃತ ಪ್ರಕಟಣೆಯನ್ನು ಹಂಚಿಕೊಂಡಿದ್ದು, ಬೈಯಪ್ಪನಹಳ್ಳಿ - ಕೆಆರ್ ಪುರ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾಗಿರುವ ಮಾರ್ಗದಲ್ಲಿ ಸೆಪ್ಟೆಂಬರ್ 21ರಂದು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ಶಾಸನಬದ್ಧ ಸುರಕ್ಷತಾ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದೆ.

ಅಲ್ಲದೆ ಸುರಕ್ಷತಾ ತಪಾಸಣೆ ಇರುವ ಕಾರಣ ಈ ಮಾರ್ಗದಲ್ಲಿ ಸಂಚಾರದಲ್ಲಿ ವ್ಯತ್ಯಯ ಆಗಲಿದೆ ಎಂದು ಕೂಡ ಮಾಹಿತಿ ನೀಡಲಾಗಿದೆ. ಕೃಷ್ಣರಾಜಪುರದಿಂದ ಗರುಡಾಚರ್ ಪಾಳ್ಯದ ನಡುವೆ ಸೆಪ್ಟೆಂಬರ್ 21ರಂದು ಇಡೀ ದಿನ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೈಯಪ್ಪನಹಳ್ಳಿ-ಇಂದಿರಾನಗರದ ನಡುವೆ ಸೆಪ್ಟೆಂಬರ್ 21ರಂದು ಮಧ್ಯಾಹ್ನ 1.30 ರಿಂದ ಸಂಜೆ 4.30 ರವರೆಗೆ ಮೆಟ್ರೋ ರೈಲು ಸಂಚಾರ ಇರುವುದಿಲ್ಲ ಮಧ್ಯಾಹ್ನ 1.30 ರವರೆಗೆ ಮತ್ತು ಸಂಜೆ 4.30ರ ನಂತರ ರೈಲು ಸಂಚಾರ ಎಂದಿನಂತೆ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಕಾಡುಗೋಡಿ (ವೈಟ್‌ಫೀಲ್ಡ್) - ಗರುಡಾಚಾರ್ ಪಾಳ್ಯ ಮತ್ತು ಇಂದಿರಾನಗರ - ಕೆಂಗೇರಿ ನಡುವೆ ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ ಎಂದು ಹೇಳಿದೆ.
ಸೆಪ್ಟೆಂಬರ್ 29ರಂದಿ ಸಂಚಾರ ಪ್ರಾರಂಭ ಸಾಧ್ಯತೆ
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿರುವ ಪ್ರಕಾರ, ಸೆಪ್ಟೆಂಬರ್ 21ರಂದು ಸುರಕ್ಷತಾ ತಪಾಸಣೆ ನಡೆಯಲಿದ್ದು, ಅವರು ಯಾವುದೇ ಷರತ್ತು, ಅವಶ್ಯಕತೆಗಳನ್ನು ಕೇಳಿದರೆ ಸುರಕ್ಷತೆ ಮತ್ತು ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಆರರಿಂದ ಏಳು ದಿನ ಸಮಯ ಬೇಕಾಗಲಿದ್ದು, ಸೆಪ್ಟೆಂಬರ್ 29ರಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದಲ್ಲಿ ಸೇವೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಕೆಂಗೇರಿ - ಚಲ್ಲಘಟ್ಟ ಮಾರ್ಗ ವಿಳಂಬ
ಬೈಯಪ್ಪನಹಳ್ಳಿ-ಕೆಆರ್ ಪುರ ಭಾಗದ ಸಿಎಂಆರ್‌ಎಸ್ ಪರಿಶೀಲನೆ ಸೆ.21 ರಂದು ನಡೆಯಲಿದ್ದು, ಕೆಂಗೇರಿ-ಚಲ್ಲಘಟ್ಟ ಭಾಗದ ತಪಾಸಣೆ ವಿಳಂಬವಾಗಲಿದೆ. ಮುಂದಿನ ವಾರ ಈ ಮಾರ್ಗದ ಸುರಕ್ಷತಾ ತಪಾಸಣೆ ನಡೆಯುವ ಸಾಧ್ಯತೆ ಇದ್ದು, ಅಕ್ಟೋಬರ್ ಮೊದಲ ವಾರ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ. ಈ ಎರಡೂ ಮಾರ್ಗಗಳಲ್ಲಿ ಏಕಕಾಲದಲ್ಲಿ ಸೇವೆ ಆರಂಭಿಸುವ ಉದ್ದೇಶವನ್ನು ಬಿಎಂಆರ್ ಸಿಎಲ್ ಹೊಂದಿತ್ತು, ಆದರೆ ಸುರಕ್ಷತಾ ತಪಾಸಣೆ ವಿಳಂಬದ ಕಾರಣ ಹಿನ್ನಡೆಯಾಗಿದೆ. ಕೆಂಗೇರಿ-ಚಲ್ಲಘಟ್ಟ ಮಾರ್ಗದ ನಡುವೆ ಸುರಕ್ಷತಾ ತಪಾಸಣೆ ನಡೆಸಲು ಸಿಎಂಆರ್‍ಎಸ್ ನಿಂದ ತಪಾಸಣೆ ದಿನಾಂಕ ಪಡೆಯಲು ಪ್ರಯತ್ನಿಸುತ್ತಿರುವುದಾಗಿ ಅಂಜುಮ್ ಪರ್ವೇಜ್ ಹೇಳಿದ್ದಾರೆ.
ಬೈಯಪ್ಪನಹಳ್ಳಿ-ಕೆಆರ್ ಪುರ ವಿಭಾಗದ ವಾಣಿಜ್ಯ ಕಾರ್ಯಾಚರಣೆಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯದಲ್ಲಿ ಉದ್ಘಾಟನಾ ದಿನಾಂಕವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಂದಿನ 15 ರಿಂದ 30 ದಿನಗಳಲ್ಲಿ ಕೆಂಗೇರಿ-ಚಲ್ಲಘಟ್ಟ ಭಾಗಕ್ಕೆ ಸಿಎಂಆರ್‌ಎಸ್ ತಪಾಸಣೆ ನಡೆಯಲಿದ್ದು, ಸಂಚಾರಕ್ಕೆ ಮುಕ್ತವಾಗಲಿದೆ.
ಬೈಯಪ್ಪನಹಳ್ಳಿ-ಕೆಆರ್ ಪುರ ವಿಭಾಗದ ಮುಂಬರುವ ಸಿಎಂಆರ್‍ಎಸ್ ಪರಿಶೀಲನೆಯು ಈ ನಿರ್ಣಾಯಕ ಮೆಟ್ರೋ ರೈಲು ವಿಭಾಗದ ಸುರಕ್ಷತೆ ಮತ್ತು ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಸಮಗ್ರ ಮೌಲ್ಯಮಾಪನ ಪ್ರಕ್ರಿಯೆಯಾಗಿದೆ. ತಪಾಸಣೆಯ ಸಮಯದಲ್ಲಿ, ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯಗಳು, ಪಂಪ್ ರೂಮ್‌ಗಳು, ಅಗ್ನಿಶಾಮಕ ವ್ಯವಸ್ಥೆಗಳು, ಪ್ಲಾಟ್‌ಫಾರ್ಮ್ ಕ್ಲಿಯರೆನ್ಸ್, ಟ್ರ್ಯಾಕ್ ಮೂಲಸೌಕರ್ಯ ಮತ್ತು ರೈಲುಗಳಿಗೆ ಶಕ್ತಿ ನೀಡುವ ಮೂರನೇ ರೈಲಿನ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡುತ್ತದೆ.
ತಪಾಸಣೆಯು ರೈಲು ಮಾರ್ಗದ ಉದ್ದಕ್ಕೂ ಕರ್ವ್‌ಗಳನ್ನು ಪರಿಶೀಲಿಸುವುದು, ತೆರೆದ ವೆಬ್ ಗರ್ಡರ್ ಸೇತುವೆಯನ್ನು ಪರಿಶೀಲಿಸುವುದು, ಬೇರಿಂಗ್‌ಗಳನ್ನು ಪರಿಶೀಲಿಸುವುದು ಮತ್ತು ರೆಜಿಸ್ಟರ್‌ಗಳು ಮತ್ತು ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ.












Click it and Unblock the Notifications