Namma Metro: ಕೆ.ಆರ್.ಮಾರುಕಟ್ಟೆ ಮೆಟ್ರೋ ನಿಲ್ದಾಣದ ಸುತ್ತಲೂ 'ಬನ್ನಿ ನೋಡಿ' ಸೂಚನಾ ಫಲಕಗಳು.! ಏನದು?
Namma Metro: ಬೆಂಗಳೂರು ಸುತ್ತಮುತ್ತ ಪುರಾತನ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ಅದರಲ್ಲೂ ಬೆಂಗಳೂರಿನ ಕೆಆರ್ ಮಾರುಕಟ್ಟೆ ಮೆಟ್ರೋ ನಿಲ್ದಾಣದ ಸುತ್ತ 1.5 ಕಿಲೋ ವ್ಯಾಪ್ತಿಯಲ್ಲಿ 15 ಬನ್ನಿ ನೋಡಿ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದೆ. ಹಾಗಾದರೆ ಇದರಲ್ಲಿ ಯಾವೆಲ್ಲ ಸ್ಥಳಗಳ ಬಗ್ಗೆ ಮಾಹಿತಿ ಇದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರು ನಗರದಲ್ಲಿನ ಪುರಾತನ ಸ್ಥಳಗಳಿಗೆ ಭೇಟಿ ನೀಡಲು ಯೋಚನೆ ಮಾಡುವ ಅವಶ್ಯಕತೆಯಿಲ್ಲ. ಕೆಆರ್ ಮಾರುಕಟ್ಟೆ ಮೆಟ್ರೋ ನಿಲ್ದಾಣದ ಯಾವುದೇ ದ್ವಾರದಿಂದ ಹೊರಬಂದರೂ ಬನ್ನಿ ನೋಡಿ ಎಂಬ ಸೂಚನಾ ಫಲಕವನ್ನು ಅಳವಡಿಕೆ ಮಾಡಿದ್ದು, ಈ ಇಂಟರೆಸ್ಟಿಂಗ್ ಸೂಚನಾ ಫಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಲೇ ಇದೆ.

ಈ ಸೂಚನಾ ಫಲಕವು ಮೆಟ್ರೋ ನಿಲ್ದಾಣ ಸುತ್ತಮುತ್ತ ಇರುವ ಪುರಾತನ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತದೆ. ಬೆಂಗಳೂರು ಕೋಟೆಯ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ 15 ಬನ್ನಿ ನೋಡಿ ಎಂಬ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಮಾರ್ಗದರ್ಶನದಿಂದ ನೀವು ಸುಲಭವಾಗಿ ಪುರಾತನ ಸ್ಥಳಗಳಿಗೆ ಭೇಟಿ ನೀಡಬಹುದು.
ಇನ್ನು ಈ ಸೂಚನಾ ಫಲಕದಲ್ಲಿ 20ನೇ ಶತಮಾನಕ್ಕೆ ಸೇರಿದ ಕೋಟೆ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ ಮತ್ತು ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಬಗ್ಗೆ ಮಾಹಿತಿ ಇರುತ್ತದೆ. ಜೊತೆಗೆ ಈ ಸ್ಥಳಗಳಿಗೆ ಹೇಗೆ ಹೋಗಬೇಕೆಂಬ ಮಾರ್ಗದರ್ಶಿ ಮ್ಯಾಪ್ ಕೂಡ ಇರುತ್ತದೆ. ಈ ಸೂಚನಾ ಫಲಕ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿಯೂ ಇದೆ.
ಬನ್ನಿ ನೋಡಿ ಸೂಚನಾ ಫಲಕ ಪರಿಕಲ್ಪನೆಯನ್ನು ನಮ್ಮ ಮೆಟ್ರೋ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ ಸಹಭಾಗಿತ್ವದಲ್ಲಿ ಸೆನ್ಸಿಂಗ್ ಲೋಕಲ್, ಅರ್ಬನ್ ಲಿವಿಂಗ್ ಲ್ಯಾಬ್ ಮತ್ತು ನೇಟಿವ್ ಪ್ಲೇಸ್ ಸಂಸ್ಥೆಗಳು ಜಂಟಿಯಾಗಿ ಆರಂಭ ಮಾಡಿವೆ.
2016ರಲ್ಲಿ ಬನ್ನಿ ನೋಡಿ ಸೂಚನಾ ಫಲಕ ಯೋಜನೆ ರೂಪಗೊಂಡಿತ್ತು. ಆದರೆ, 2020ರಲ್ಲಿ ಕಾರ್ಯರೂಪಕ್ಕೆ ಬಂದಿತು. ಇನ್ನು ಬನ್ನಿ ನೋಡಿ ಸೂಚನಾ ಫಲಕ ಕುರಿತಾಗಿ ಸೆನ್ಸಿಂಗ್ ಲೋಕಲ್ ಸಂಸ್ಥೆಯ ಸಹ-ಸಂಸ್ಥಾಪಕ ಅಂಕಿತ್ ಭಾರ್ಗವ ಈ ಬಗ್ಗೆ ಮಾತನಾಡಿ, ನಗರದ ಪುರಾತನ ಸ್ಥಳಗಳ ಬಗ್ಗೆ ತಿಳಿಸುವ ಮೊದಲ ಹೆಜ್ಜೆಯಾಗಿದೆ. ಮೆಟ್ರೋ ಮಾರ್ಗವು ನಗರದ ಹಲವು ಐತಿಹಾಸಿಕ ಸ್ಥಳಗಳ ಬಳಿ ಹಾದು ಹೋಗುತ್ತದೆ.
ಆದ್ದರಿಂದ ನಾವು ಈ ಐತಿಹಾಸಿಕ ಸ್ಥಳಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆವು. ಕೊರೊನಾ ಹಿನ್ನೆಲೆ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲು 4.5 ವರ್ಷ ಸಮಯ ತೆಗೆದುಕೊಂಡಿತು ಎಂದು ಹೇಳಿದರು. ಒಟ್ಟಿನಲ್ಲಿ ಈ ಮೂಲಕ ಜನರಿಗೆ ಪುರಾತನ ಕಾಲದ ತಾಣಗಳ ಬಗ್ಗೆ ಪರಿಚಯಿಸುವ ಸುಲಭ ದಾರಿ ಇದಾಗಿದೆ.












Click it and Unblock the Notifications