Namma Metro: 2 ಜೀವ ಬಲಿ ಬೆನ್ನಲ್ಲೆ ಕಾಮಗಾರಿಯಿಂದ ಇನ್ನೊಂದು ಅವಘಢ: ರಸ್ತೆಗುಂಡಿಗೆ ಬಿದ್ದ ಬೈಕ್ ಸವಾರ
ಬೆಂಗಳೂರು, ಜನವರಿ 12: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾಮಗಾರಿಯಿಂದ ಮತ್ತೊಂದು ಅವಘಡ ನಡೆದಿದೆ. ಮೆಟ್ರೋ ಲೈನ್ ಸುರಂಗ ಮಾರ್ಗದ ಕಾಮಗಾರಿ ಸ್ಥಳದಲ್ಲಿ ಬೃಹತ್ ರಸ್ತೆಗುಂಡಿ ಬಿದ್ದಿದ್ದು, ಅದರಲ್ಲಿ ಬೈಕ್ ಸವಾರನೊಬ್ಬ ಬಿದ್ದ ಘಟನೆ ಗುರುವಾರ ನಡೆದಿದೆ.
ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನೆಲದಡಿ ಕಾಮಗಾರಿ ನಡೆಸಿದೆ. ಮೆಟ್ರೋ ಮಾರ್ಗದ ಕೆಲಸ ಭರದಿಂದ ಸಾಗಿದೆ. ಈ ಸುರಂಗ ಮೇಲೆ ಟಾರು ರಸ್ತೆ ಹೋಗಿದೆ. ಈ ಕಾಮಗಾರಿಯಿಂದಾಗಿ ಬ್ರಿಗೇಡ್ ರಸ್ತೆಯ ಜಾನ್ಸನ್ ಮಾರುಕಟ್ಟೆ ಡಾಂಬರು ರಸ್ತೆಯ ಮಧ್ಯದಲ್ಲೇ ಬೃಹತ್ ರಸ್ತೆಗುಂಡಿ ಸೃಷ್ಟಿಯಾಗಿದೆ.
ಅದೇ ರಸ್ತೆಗುಂಡಿಗೆ ಬೈಕ್ ಸವಾರರೊಬ್ಬರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೋಡಿಸಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಜೀವ ಹಾನಿ ಸಂಭವಿಸಿಲ್ಲ. ಈ ಬೃಹತ್ ರಸ್ತೆಗುಂಡಿ ದುರಸ್ತಿ ಕಾರ್ಯ ನಡೆಯಬೇಕಿದ್ದು, ಆ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.

ದಿಢೀರನೇ ಕೆಳಕ್ಕೆ ಕುಸಿದ ರಸ್ತೆ
ದಿಢೀರನೆ ರಸ್ತೆ ಕುಸಿದು ಬೃಹತ್ ಗುಂಡಿ ನಿರ್ಮಾಣವಾದ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಈ ಬಗ್ಗೆ ವಿವರಿಸಿದ್ದು, ಬ್ರಿಗೇಡ್ ರಸ್ತೆಯ ಜಾನ್ಸನ್ ಮಾರುಕಟ್ಟೆ ರಸ್ತೆಯಲ್ಲಿ ಸಾಕಷ್ಟು ಜನ ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಿದ್ದರು. ಗುಂಡಿ ನಿರ್ಮಾಣವಾದ ಸ್ಥಳದಲ್ಲಿ ಮೊದಲು ರಸ್ತೆ ಮೇಲೆ ಜಂಪ್ ಆದಂತೆ ಅನುಭವಾಯಿತು. ನಂತರ ಒಮ್ಮೆಲೆ ಒಂದೇ ಕಡೆಗೆ ಭೂಮಿ ಕೆಳಗೆ ಕುಸಿದು ಗುಂಡಿ ನಿರ್ಮಾಣವಾಯಿತು ಎಂದರು.
ಕಳೆದ ಐದು ದಿನಗಳ ಹಿಂದಷ್ಟೇ ಈ ಜಾನ್ಸನ್ ಮಾರುಕಟ್ಟೆ ರಸ್ತೆಯಲ್ಲಿ ನೆಲದಡಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಕಾಮಗಾರಿ ಪೂರ್ಣಗೊಳಿಸಿತ್ತು. ಇದಾದ ಬೆನ್ನಲ್ಲೆ ಇಂತದ್ದೊಂದು ಅವಘಡ ನಡೆದಿರುವುದು ಬೆಳಕಿಗೆ ಬಂದಿದೆ.

ಇನ್ನೂ ಎರಡು ದಿನದ ಹಿಂದೆ ನಾಗವಾರ ಸಮೀಪ ಹೆಣ್ಣೂರು ರಸ್ತೆಯಲ್ಲಿ ನಿರ್ಮಾಣ ಹಂತದ ಕಬ್ಬಿಣದ ಪಿಲ್ಲರ್ ಬಿದ್ದು, ಎರಡು ಜೀವಗಳು ಬಲಿಯಾಗಿದ್ದವು. ಅದಾದ ಬಳಿಕ ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಅಂತದ್ದೆ ಪ್ರಕರಣದಲ್ಲಿ ಮತ್ತೆ ಬಿಎಂಆರ್‌ಸಿಎಲ್ ಮುನ್ನೆಲೆಗೆ ಬಂದಿದೆ.












Click it and Unblock the Notifications