ಲೋಕಸಭಾ ಚುನಾವಣೆ: 'ನಮ್ಮ ಬೆಂಗಳೂರು ಐಕಾನ್ಸ್' ನಿಯೋಜನೆ: ನಟ ರಮೇಶ್ ಸೇರಿ ರಾಯಭಾರಿಗಳ ಕಳಕಳಿ ಏನು?
ಬೆಂಗಳೂರು, ಏಪ್ರಿಲ್ 02: ಬೆಂಗಳೂರಿನಲ್ಲಿ ಮತದಾನ ಹೆಚ್ಚಿಸಲು ಚುನಾವಣಾಧಿಕಾರಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಲೋಕಸಭಾ ಚುನಾವಣಾ ಮತದಾರರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ 04 ಪ್ರಮುಖ ವ್ಯಕ್ತಿಗಳನ್ನು 'ನಮ್ಮ ಬೆಂಗಳೂರು ಐಕಾನ್ಸ್ (ರಾಯಭಾರಿ)' ನಿಯೋಜನೆ ಮಾಡಲಾಗಿದೆ.
ಮಂಗಳವಾರ ನಗರದ ಟೌನ್ ಹಾಲ್‌ನಲ್ಲಿ ಚುನಾವಣೆ ಆಯೋಗ -ಬಿಬಿಎಂಪಿಯು 'ನಮ್ಮ ಬೆಂಗಳೂರು ಐಕಾನ್ಸ್' ನಿಯೋಜಿಸುವ ಕಾರ್ಯಕ್ರಮ ಚಾಲನೆ ನೀಡಿದ ಚುನಾವಣಾಧಿಕಾರಿ ಮತ್ತು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

ಚುನಾವಣಾ ರಾಯಭಾರಿಯಾದ ಖ್ಯಾತ ಚಿತ್ರನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಅವರು, ಏಪ್ರಿಲ್ 26 ರಂದು ಚುನಾವಣಾ ಹಬ್ಬವಿದ್ದು, ಎಲ್ಲರೂ ಸಡಗರದಿಂದ ಒಟ್ಟಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡೋಣ. ಒಂದು ಮತದಿಂದ ಎಲ್ಲವನ್ನೂ ಬದಲಿಸುವ ಶಕ್ತಿ ಇದೆ. ಆದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಅವರು ಮತದಾನ ಮಹತ್ವವನ್ನು ತಿಳಿಸಿದರು.
ಏನು ಬದಲಾಗಲ್ಲ ಎಂಬ ಭಾವನೆ ಬಿಡಿ
ಚುನಾವಣಾ ವ್ಯವಸ್ಥೆಯಲ್ಲಿ ನಾವು ಮತದಾನ ಮಾಡಿದರೆ ಏನೂ ಬದಲಾಗೋದಿಲ್ಲ ಎಂಬ ಮನೋಭಾವ ಇದ್ದರೆ ಅದನ್ನು ಮೊದಲು ನೀವು ತಲೆಯಿಂದ ತೆಗೆಯಿರಿ. ಜವಾಬ್ದಾರಿಯಿಂದ ಎಲ್ಲರೂ ಒಂದಾಗಿ ಮತದಾನ ಮಾಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಈ ಮೂಲಕ ಉತ್ತಮ ಸಮಾಜವನ್ನು ರೂಪಿಸಬೇಕು ಎಂದು ಪ್ರೇರೇಪಿಸಿದರು.
ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಮಾತನಾಡಿ, ಮತದಾರರ ಹುಮ್ಮಸ್ಸು ತುಂಬುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 4 ಪ್ರಮುಖ ವ್ಯಕ್ತಿಗಳು ರಾಯಭಾರಿಗಳಾಗಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಮತದಾನ ಜಾಗೃತಿ ಮೂಡಿಸುವ ಕಾರ್ಯ ರಾಯಭಾರಿಗಳು ಮಾಡಲಿದ್ದಾರೆ ಎಂದರು.
ಮೊದಲ ಬಾರಿ ಮತದಾನ ಮಾಡುವವರ ಗಮನಕ್ಕೆ
ಮೊದಲ ಬಾರಿ ಚುನಾವಣಾವಣೆಯಲ್ಲಿ ಮತ ಚಲಾಯಿಸುತ್ತಿರುವವರಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬಂದು ಎಲ್ಲರಿಗೂ ಮತದಾನ ಮಾಡಲು ಪ್ರೇರೇಪಿಸಿ ಮತದಾನ ಮಾಡಬೇಕೆಂದು.
ನಿಮ್ಮ ಕರ್ತವ್ಯ ನೀವು ನಿರ್ವಹಿಸಿ
ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ನಿಮಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟ ಮಾಡಲು ಕೂಡಾ ಅವಕಾಶವಿದ್ದು, ಎಲ್ಲರೂ ಮತ ಚಲಾಯಿಸಲು ಅವರು ಮನವಿ ಮಾಡಿದರು.

ಮತದಾನ ಮಾಡಿ ಪ್ರಶ್ನಿಸಲು ಅರ್ಹತೆ ಪಡೆಯಿರಿ
ಚುನಾವಣಾ ರಾಯಭಾರಿಯಾದ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಅವರು, ಎಲ್ಲರೂ ತಪ್ಪದೆ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ, ನಾವು ಮತದಾನ ಮಾಡದೇ ಇದ್ದಲ್ಲಿ ನಾವು ಪ್ರಶ್ನೆ ಮಾಡಲು ಅರ್ಹರಿರುವುದಿಲ್ಲ. ಆದ್ದರಿಂದ ನಾವೆಲ್ಲರೂ ತಪ್ಪದೆ ಮತದಾನ ಮಾಡೋಣ ಎಂದು ಅವರು ಪ್ರೇರೇಪಿಸಿದರು.
ಚುನಾವಣಾ ರಾಯಭಾರಿಯಾದ ನಟಿ ಹಾಗೂ ರೂಪದರ್ಶಿ ನೀತು ವನಜಾಕ್ಷಿ ಮಾತನಾಡಿ, ನಮ್ಮ ನಾಯಕಯನ್ನು ನಾವು ಆಯ್ಕೆ ಮಾಡಬೇಕು. ಆದ ಕಾರಣ ಎಲ್ಲರೂ ತಮ್ಮ ಸ್ವಯಿಚ್ಛೆಯಿಂದ ಮುಂದೆ ಬಂದು ತಪ್ಪದೆ ಮತ ಚಲಾಯಿಸಬೇಕೆಂದು ತಿಳಿಸಿದರು.
''ನಮ್ಮ ಬೆಂಗಳೂರು ಐಕಾನ್ಸ್''ಗಳು ಯಾರು?
* ರಮೇಶ್ ಅರವಿಂದ್, ಖ್ಯಾತ ಚಿತ್ರ ನಟ ಮತ್ತು ನಿರ್ದೇಶಕ.
* ನೀತು ವನಜಾಕ್ಷಿ, ನಟಿ ಹಾಗೂ ರೂಪದರ್ಶಿ.
* ಅನುಪ್ ಶ್ರೀಧರ್, ಬ್ಯಾಡ್ಮಿಂಟನ್ ಆಟಗಾರ.
* ಅರ್ಚನಾ ಜಿ ಕಾಮತ್, ಟೇಬಲ್ ಟೆನ್ನಿಸ್ ಆಟಗಾರ್ತಿ.
ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಕಾಂತರಾಜ್, ವಿಶೇಷ ಆಯುಕ್ತ ಸುರೋಲ್ಕರ್ ವಿಕಾಸ್ ಕಿಶೋರ್, ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ವಿದ್ಯಾರ್ಥಿಗಳು ಸೇರಿ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications