ಬಂಧಿತ ಜೆಎಂಬಿ ಉಗ್ರ ಬೆಂಗಳೂರಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ
ಬೆಂಗಳೂರು, ಆಗಸ್ಟ್ 30 : ಎನ್‌ಐಎ ಬಂಧಿಸಿದ ಜಮಾತ್ ಉಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಶಂಕಿತ ಉಗ್ರ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ. ಎನ್‌ಐಎ ಉಗ್ರನ ವಿಚಾರಣೆಯನ್ನು ನಡೆಸುತ್ತಿದೆ.
ತ್ರಿಪುರಾ ರಾಜಧಾನಿ ಅಗರ್ತಾಲದಲ್ಲಿ ಜೆಎಂಬಿ ಉಗ್ರ ನಜೀರ್ ಶೇಖ್ ಅಲಿಯಾಸ್ ಪಾಟ್ಲಾ ಅಸನ್‌ನನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಚಿಕ್ಕಬಣಾವರದ ಮನೆಯಲ್ಲಿ ಸಿಕ್ಕ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿಚಾರಣೆ ನಡೆಯುತ್ತಿದೆ.
ನಜೀರ್ ಶೇಖ್ ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ನಿವಾಸಿ. ಜಹೀದುಲ್ ಇಸ್ಲಾಂ, ನಸ್ರುಲ್ ಇಸ್ಲಾಂ, ಆಸಿಫ್ ಇಕ್ಬಾಲ್ ಮತ್ತು ಇತರರ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದ. ನಗರದಲ್ಲಿ ವಿಧ್ವಂಸದ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ.

ನಗರದ ಹೊರವಲಯದಲ್ಲಿ ಮನೆಯನ್ನು ಬಾಡಿಗೆ ಪಡೆದಿದ್ದ ನಜೀರ್ ಶೇಖ್ ಸ್ಫೋಟಕಗಳನ್ನು ತಯಾರು ಮಾಡುತ್ತಿದ್ದ. ಬೆಂಗಳೂರು ನಗರದಲ್ಲಿ ಸ್ಫೋಟಕಗಳನ್ನು ಬಳಸಿ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ.
ಈ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದಾಗ 5 ಹ್ಯಾಂಡ್ ಗ್ರನೈಡ್, 9 ಎಂಎಂ ಪಿಸ್ತೂಲ್, ಒಂದು ಏರ್ ಗನ್, ಸ್ಫೋಟಕಗಳಿಗೆ ಬಳಸುವ ಪೌಡರ್ ಇತ್ಯಾದಿಗಳನ್ನು ವಶಕ್ಕೆ ಪಡೆಯಲಾಗಿತ್ತು.
2019ರ ಜುಲೈ 7ರಂದು ಚಿಕ್ಕಬಣಾವರ ಸಮೀಪದ ಮನೆಯ ಮೇಲೆ ದಾಳಿ ಮಾಡಿದ್ದ ಎನ್‌ಐಎ ಅಧಿಕಾರಿಗಳು ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದರು. ಈ ಮನೆಯನ್ನು ಜೆಎಂಬಿ ಉಗ್ರರು ಬಾಡಿಗೆಗೆ ಪಡೆದಿದ್ದರು.
ನಜೀರ್ ಜಮಾತ್ ಉಲ್ ಮುಜಾಹಿದ್ದೀನ್ ಭಾರತದಲ್ಲಿ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದ. 2018ರಿಂದ ಆತ ಇತರರ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದ. ಎನ್‌ಐಎ ಶಂಕಿತ ಉಗ್ರನ ವಿಚಾರಣೆಯನ್ನು ಮುಂದುವರೆಸಿದೆ.












Click it and Unblock the Notifications