ಖಾಸಗಿ ಶಾಲೆಗಳಿಗೂ ನಾಡಗೀತೆ ಕಡ್ಡಾಯ ವಿವಾದ: ಕೋರ್ಟ್‌ನಲ್ಲಿ ವಿಚಾರಣೆ ಹೇಗಿತ್ತು..?
ಬೆಂಗಳೂರು, ಏಪ್ರಿಲ್ 04: ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ರಾಜ್ಯದ ಖಾಸಗಿ ಶಾಲೆಗಳಿಗೂ ಅನ್ವಯವಾಗುತ್ತದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಆ ಮೂಲಕ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ತಿದ್ದುಪಡಿ ಮಾಡಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೂ ಅನ್ವಯವಾಗುವಂತೆ ಮಾಡಲಾಗಿದೆ.

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ 2023ರ ಸೆ.25ರಂದು ಹೊರಡಿಸಿರುವ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠದ ಮುಂದೆ ಈ ವಿಷಯ ತಿಳಿಸಿದ್ದಾರೆ.
ಸರ್ಕಾರಿ ವಕೀಲರು, ಜ.7ರ ಆದೇಶದಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡಬೇಕು ಎಂದು ತಿಳಿಸಿತ್ತು. ಆ ಆದೇಶವನ್ನು ಫೆ.16ರಂದು ಹಿಂಪಡೆಯಲಾಗಿದೆ. ಫೆ.21ರಂದು ಮತ್ತೊಂದು ತಿದ್ದುಪಡಿ ಆದೇಶ ಹೊರಡಿಸಿದ್ದು, ಅದರಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ದೈನದಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ನಾಡಗೀತೆಯನ್ನು ಹಾಡಬೇಕು ಎಂದು ಹೇಳಲಾಗಿದೆ ಎಂದು ಆ ಆದೇಶವ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದರು.
ಶಾಸನಾತ್ಮಕ ಅಧಿಕಾರವೇಲ್ಲಿದೆ?
ಸರ್ಕಾರದ ಸ್ಪಷ್ಟಿಕರಣ ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ನ್ಯಾಯಪೀಠ, ನಾಡಗೀತೆಯು ನಿರ್ದಿಷ್ಟ ರಾಗದಲ್ಲಿ ಹಾಡುವುದನ್ನು ಕಡ್ಡಾಯ ಮಾಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಯಾವುದೇ ಶಾಸನವಿಲ್ಲವೆಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಹಾಗಾದರೆ, ಇಂತಹ ಆದೇಶ ಹೊರಡಿಸಲು ಸರ್ಕಾರ ಯಾವ ಶಾಸನಾತ್ಮಕ ಅಧಿಕಾರ ಹೊಂದಿದೆ ಎಂದು ಪ್ರಶ್ನಿಸಿತು.
ಸರ್ಕಾರದ ವಕೀಲರು, ಈ ಕುರಿತು ರಾಜ್ಯ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆದು ವಿವರಣೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೈಕೋರ್ಟ್, ನಾಡಗೀತೆ ಸಾಂವಿಧಾನಿಕವಾಗಿ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ನಾಡಗೀತೆ ವಿಚಾರದಲ್ಲಿ ರಾಜ್ಯ ಸರ್ಕಾರವು ಏಕೆ ಹೀಗೆ ಗೊಂದಲ ಆದೇಶಗಳನ್ನು ಹೊರಡಿಸುತ್ತಿದೆ? ಒಂದು ಆದೇಶ ಹೊರಡಿಸಿ ನಂತರ ಅದನ್ನು ಹಿಂಪಡೆದು ತಿದ್ದುಪಡಿ ಆದೇಶ ಹೊರಡಿಸುತ್ತಿದೆ.
ಇನ್ನೂ ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸಂವಿಧಾನದ ಅಥವಾ ಇತರೆ ಶಾಸನದ ಬೆಂಬಲವಿರಬೇಕು. ಸರ್ಕಾರ ವಿವೇಚನಾಧಿಕಾರ ಬಳಸಿ ಕಾರ್ಯಕಾರಿ ಆದೇಶ ಹೊರಡಿಸಲಾಗದು. ಈ ಬಗ್ಗೆ ಸಮಗ್ರವಾದ ವಿವರಣೆ ಎಂದು ಸೂಚಿಸಿ ವಿಚಾರಣೆಯನ್ನು ಏ.10ಕ್ಕೆ ವಿಚಾರಣೆ ಮುಂದೂಡಿತು.
ಸಮರ್ಪಕ ಉತ್ತರ ನೀಡಿ
ಅಲ್ಲದೇ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯ ಕೇಳಿರುವ ಪ್ರಶ್ನೆಗಳಿಗೆ ಹಾಗೂ ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳಿಗೆ ಸರ್ಕಾರ ಕಾನೂನಿನ ನೆಲಗಟ್ಟಿನಲ್ಲಿ ಸಮರ್ಪಕ ಉತ್ತರ ನೀಡಬೇಕು. ಹೆಚ್ಚುಕಾಲ ಈ ಅರ್ಜಿ ವಿಚಾರಣೆ ಮುಂದೂಡುತ್ತಾ ಹೋಗಲು ಸಾಧ್ಯವಿಲ್ಲ. ನ್ಯಾಯಾಲಯ ತ್ವರಿತವಾಗಿ ತನ್ನ ನಿರ್ಧಾರ ಪ್ರಕಟಿಸುವ ಮೂಲಕ ಅರ್ಜಿ ವಿಲೇವಾರಿ ಮಾಡಬೇಕಿದೆ.
ಸರ್ಕಾರವು ವಿವರಣೆ ನೀಡಿದರೆ ಬಳಿಕ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ನ್ಯಾಯಾಲಯದಲ್ಲಿ ವಾದ ಮಂಡಿಸುವ ಮುನ್ನ ಸರ್ಕಾರಿ ವಕೀಲರು ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು, ಕಾನೂನುಗಳನ್ನು ಪರಿಶೋಧಿಸಿ, ಮಾಹಿತಿ ನೀಡಬೇಕು ಎಂದು ಮೌಖಿಕವಾಗಿ ಸೂಚಿಸಿತು.
ಸ್ಪಷ್ಟೀಕರಣಕ್ಕೆ ಸೂಚನೆ: ಅರ್ಜಿ 2024ರ ಫೆ.2ರಂದು ವಿಚಾರಣೆಗೆ ಬಂದಾಗ, ನಿರ್ದಿಷ್ಟ ಧಾಟಿಯಲ್ಲಿ ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಆದೇಶವು ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆಯೇ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನಿರ್ದೇಶಿಸಿತ್ತು.












Click it and Unblock the Notifications