ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ವಿವಾದ: ಮುದ್ರಣ ದೋಷ ಎಂದ ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು, ಫೆಬ್ರವರಿ.21: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆ ಬೆಳಕಿಗೆ ಬಂದ ಬೆನ್ನಲ್ಲೆ, ಎಚ್ಚೆತ್ತುಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ. ಫೆಬ್ರವರಿ 16ರಂದು ಹೊರಡಿಸಿರುವ ಆದೇಶ ಇಂದಷ್ಟೇ ಬೆಳಕಿಗೆ ಬಂದಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಚಿವ ಶಿವರಾಜ್ ತಂಗಡಗಿ, "ಪ್ರಿಂಟ್ ಮಿಸ್ಟೇಕ್ ಆಗಿದೆ. ಆದೇಶ ಮಾಡುವಾಗ ಎಲ್ಲಾ ಶಾಲೆ ಎಂದು ಬದಲಾಗಲಿದೆ" ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ನಮಗೆ ಎಲ್ಲಾ ಶಾಲೆಗಳು ಒಂದೆ" ಎಂದು ಹೇಳಿದ್ದಾರೆ.

"ಮನುಷ್ಯ ನಡೆಯುವಾಗ ಎಡವುತ್ತಾನೆ. ಹಾಗೆಯೇ ಇಲ್ಲಿ ಸಣ್ಣ ತಪ್ಪಾಗಿದೆ. ಸಣ್ಣ ತಪ್ಪಿನಿಂದ ಈ ಗೊಂದಲ ಆಗಿದೆ. ಎಲ್ಲವನ್ನೂ ಸರಿಪಡಿಸಿ ಆದೇಶ ಹೊರಡಿಸುತ್ತೇವೆ. ನಮ್ಮ ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ. ಈ ಬಗ್ಗೆ ನಾವು ಬಹಳ ಸ್ಪಷ್ಟವಾಗಿದ್ದೇವೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆಯಾಗಿದೆ" ಎಂದು ತಿಳಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ 'ಜಯ ಭಾರತ ಜನನಿಯ ತನುಜಾತೆ' ಹಾಡುವುದಕ್ಕೆ ವಿನಾಯಿತಿ ನೀಡಿ, ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು ಎಂಬರ್ಥದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಾದಿತ ಆದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರತಿ ಎಲ್ಲಾ ಕಡೆ ಸಕತ್ ವೈರಲ್ ಆಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶದಲ್ಲಿ ಏನಿದೆ..?
"ರಾಷ್ಟ್ರಕವಿ ಜ್ಞಾನಪೀಠ ಪುರಸ್ಕೃತರಾದ ಡಾ. ಕುವೆಂಪುರವರ "ಜಯ ಭಾರತ ಜನನಿಯ ತನುಜಾತೆ" ಕವನವನ್ನು 'ನಾಡಗೀತೆ'ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ: ಸಂಕಇ 207 ಕಸಧ 2003, ದಿನಾಂಕ:07-01-2004ರ ಹಾಗೂ ತಿದ್ದುಪಡಿ ದಿನಾಂಕ:01-02-2024ರ ಅನ್ವಯ "ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು" ಎಂಬುದರ ಬದಲಾಗಿ "ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು" ಎಂದು ತಿದ್ದಿ ಓದಿಕೊಳ್ಳತಕ್ಕದ್ದು" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಸರ್ಕಾರದಿಮದ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಈಗಾಗಲೇ ಕಿಡಿ ಕಾರುತ್ತಿರುವ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಇತ್ತೀಚೆಗೆ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹದ ಸಾಲುಗಳನ್ನು ಬೇರೆ ರೀತಿಯಲ್ಲಿ ಬರೆದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ.












Click it and Unblock the Notifications