'ಮೈ ಲ್ಯಾಂಗ್' ಆ್ಯಪ್ ಬಿಡುಗಡೆ: ಸಾಹಿತ್ಯವನ್ನು 'ಕೇಳಿಸುವ' ಹೊಸ ಪ್ರಯತ್ನ
ಬೆಂಗಳೂರು, ಮಾರ್ಚ್ 01: ನಗರದ ಬಿ.ಪಿ.ವಾಡಿಯಾ ರಸ್ತೆಯ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್' ನಲ್ಲಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ 'ಮೈ ಲ್ಯಾಂಗ್' App ಬಿಡುಗಡೆ ಮಾಡಲಾಗಿದ್ದು, ಆ ಮೂಲಕ ಕನ್ನಡ ಪುಸ್ತಕಗಳನ್ನು 'ಕೇಳಿಸುವ' ಪ್ರಯತ್ನಕ್ಕೆ ಆರಂಭ ದೊರೆಯಿತು.
ಸಾಹಿತ್ಯ ಪ್ರೀತಿಯ ತಂತ್ರಜ್ಞ ಪವಮಾನ್ ಪ್ರಸಾದ್ ಮತ್ತು ಗೆಳೆಯರು 'ಮೈ ಲ್ಯಾಂಗ್' ಎಂಬ ಸಾಹಿತ್ಯ ಸಂಬಂಧಿ ಆಪ್ ತಯಾರಿಸಿದ್ದು, ಕನ್ನಡ ಪುಸ್ತಕಗಳು ಆಡಿಯೋ ಮಾದರಿಯಲ್ಲಿ ಇಲ್ಲಿ ಲಭ್ಯವಿವೆ. ಪುಸ್ತಕ ಓದಲು ಸಮಯದ ಕೊರತೆ ಇರುವವರು, ಕನ್ನಡ ಓದಲು ಬಾರದೆ ಕೇವಲ ಅರ್ಥವಾಗುವ ಹೊಸ ತಲೆಮಾರಿನ ಕನ್ನಡಿಗರಿಗೆ ಈ ಆಪ್ ಸಹಾಯಕಾರಿಯಾಗಲಿದೆ.
ಆಪ್ ನ ಲೋಕಾರ್ಪಣೆಗೆ ಸಾಹಿತ್ಯ, ಸಿನಿಮಾ ಗಣ್ಯರು ಇಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ನಲ್ಲಿ ನೆರೆದಿದ್ದರು. ಸಾಕ್ಷ್ಯವಾಗಲು ಸಾಹಿತ್ಯಾಸಕ್ತರು, ಸಾಹಿತಿಗಳು ಕಾರ್ಯಕ್ರಮದಲ್ಲಿದ್ದರು.

ಸಾಹಿತಿ ಜೋಗಿ ಅವರ 'ಅಶ್ವತ್ಥಾಮನ್' ಕಾದಂಬರಿಯೂ ಇದೇ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಯಿತು. ಅಶ್ವತ್ಥಾಮನ್ ಪುಸ್ತಕವು ಆಡಿಯೋ ಮಾದರಿಯಲ್ಲಿ ಮೈ ಲ್ಯಾಂಗ್‌ನಲ್ಲಿ ಲಭ್ಯವಿದೆ. ಜೊತೆಗೆ ಇನ್ನೂ ಕೆಲವು ಲೇಖಕರ ಪುಸ್ತಕಗಳು ಈಗಾಗಲೇ ಲಭ್ಯವಿವೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಟ ಅಚ್ಯುತ್ ಕುಮಾರ್, ಅರುಂಧತಿ ನಾಗ್ ಮಾತನಾಡಿ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರಲ್ಲದೆ, ಹೊಸ ಪ್ರಯತ್ನಗಳಿಗೆ ಆಸರೆಯಾಗಿ ನಿಲ್ಲುವ ಭರವಸೆಯನ್ನೂ ನೀಡಿದರು. ಅಚ್ಯುತ್ ಕುಮಾರ್ ಅವರು ಜೋಗಿ ಅವರ ಅಶ್ವತ್ಥಾಮನ್ ಪುಸ್ತಕದ ಕುರಿತಾಗಿ ಮಾತನಾಡಿದರು.
ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಮಾತನಾಡಿ, 'ಈ ಹೊಸ ಪ್ರಯತ್ನ ಲೇಖಕರನ್ನು ಅಥವಾ ಪುಸ್ತಕದಂಗಡಿಗಳನ್ನು ಕೊಲ್ಲುವ ಯತ್ನವಲ್ಲ, ಕನ್ನಡ ಸಾಹಿತ್ಯ ಓದುಗರನ್ನು ಹೆಚ್ಚು ಮಾಡುವ ಯತ್ನ ಎಂದು ಉದಾಹರಣೆಗಳ ಸಮೇತ ವಿವರಿಸಿದರು'.
ಸಾಹಿತಿ ಜೋಗಿ ಮಾತನಾಡಿ, 'ಹೊಸ ಪ್ರಯತ್ನಗಳಿಗೆ ಸಾಕ್ಷಿಯಾಗದಿದ್ದರೆ, ಹೊಸ ಪ್ರಯತ್ನಗಳಲ್ಲಿ ಪಾಲುದಾರನಾಗದಿದ್ದರೆ ಆತ ಚಲನಶೀಲನತೆ ಕಳೆದುಕೊಳ್ಳಲಿದ್ದಾನೆ ಎಂದೇ ಅರ್ಥ' ಎಂದು ವೈಎನ್‌ಕೆ ಮಾತುಗಳನ್ನು ಉಲ್ಲೇಖಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ನಟ ವಶಿಷ್ಠ ಸಿಂಹ, ಕ್ಯಾಪ್ಟನ್ ಗೋಪಿನಾಥ್, ಸಾಹಿತಿ ಬಿ.ಆರ್.ಲಕ್ಷ್ಮಣ್‌ರಾವ್, ಪ್ರಕಾಶಕ ಜಮೇಲ್ ಸಾವನ್ನ ಇನ್ನೂ ಹಲವು ಸಾಹಿತಿಗಳು ಹಿರಿಯರು ಭಾಗವಹಿಸಿದ್ದರು.












Click it and Unblock the Notifications