Rohini Sindhuri vs D Roopa: ಡಿ ರೂಪಾ ಪತಿ ಮುನೀಶ್ ಮೌದ್ಗಿಲ್ ವರ್ಗಾವಣೆ
ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಯಲ್ಲಿ ಡಿ ರೂಪಾ ಅವರ ಪತಿ ಮುನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು, ಫೆಬ್ರವರಿ. 21: ದೇಶಾದ್ಯಂತ ಸುದ್ದಿಯಾಗಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಬೀದಿ ರಂಪಾಟದಲ್ಲಿ ಡಿ ರೂಪಾ ಪತಿ ಮುನೀಶ್ ಮೌದ್ಗಿಲ್ ಅವರು ವರ್ಗಾವಣೆ ಪತ್ರ ಹಿಡಿದು ನಿಲ್ಲುವಂತಾಗಿದೆ.
ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಗೆ ತಡೆ ಹಾಕಲು ಮುಂದಾಗಿದ್ದ ಸರ್ಕಾರ ಡಿ. ರೂಪಾ ಅವರ ಪತಿ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಡಿ. ರೂಪಾ ಅವರ ಪತಿ, ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಆರ್) ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಮೌನೀಶ್ ಮೌದ್ಗಿಲ್, ಭೂಮಾಪನ ಹಾಗು ಕಂದಾಯ ವ್ಯವಸ್ಥೆಯ (ಕೆಎನ್ 1998) ಆಯುಕ್ತರಾಗಿದ್ದರು. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.
ಇನ್ನು, ರಾಜ್ಯ ಸರ್ಕಾರ ಡಿ. ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಬೀದಿ ರಂಪಾಟಕ್ಕೆ ತಡೆ ಹಾಕಲು ಮುಂದಾಗಿ, ಇಬ್ಬರೂ ಅಧಿಕಾರಿಗಳಿಗೆ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ಜಾರಿಯಾದ ಕೆಲವೇ ಗಂಟೆಗಳಲ್ಲಿ ಇಬ್ಬರಿಗೂ ವರ್ಗಾವಣೆ ಮಾಡಲಾಗಿದೆ.
ಯಾವುದೇ ಸ್ಥಳ ನಿಯೋಜನೆ ಮಾಡದೇ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ತೆರವಾದ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತ ಹುದ್ದೆಗೆ ಹೆಚ್. ಬಸವರಾಜೇಂದ್ರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕೆಲವು ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎನ್ನಲಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಐಪಿಎಸ್ ಅಧಿಕಾರಿ ರೂಪಾ ಪೋಸ್ಟ್ ಮಾಡಿದ್ದರು. ಜೊತೆಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಒಬ್ಬರ ಖಾಸಗಿ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಹಲವು ಮಂದಿ ಅವರ ವಿರುದ್ಧ ಟೀಕೆ ಮಾಡಿದ್ದರು.
ಬಳಿಕ ಇಬ್ಬರು ಬಹಿರಂಗವಾಗಿ ಹೇಳಿಕೆ ನೀಡಲು ಆರಂಭಿಸಿ, ರಾಜ್ಯ ಸರ್ಕಾರಕ್ಕೆ ಮುಜುಗರ ತರಿಸುವ ಕೆಲಸ ಮಾಡಿದ್ದರು. ಇದರ ಬೆನ್ನಲ್ಲೆ ಸರ್ಕಾರ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಈಗ ವರ್ಗಾವಣೆ ಮಾಡಿ ಆದೇಶಿಸಿದೆ.












Click it and Unblock the Notifications