ಮುನಿರಾಜು ಗೌಡ ವಿರುದ್ಧ ಮುನಿರತ್ನ ಅಸಮಾಧಾನ
ಬೆಂಗಳೂರು, ಮಾರ್ಚ್ 21 : "ರಾಜರಾಜೇಶ್ವರಿ ನಗರಕ್ಕೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಲು ಮುಂದಿನ ದಿನಗಳಲ್ಲಿ ಯಾವುದೇ ತೊಡಕಿಲ್ಲ ಎಂದು ವಕೀಲರು ಹೇಳಿದ್ದಾರೆ" ಎಂದು ಬಿಜೆಪಿ ನಾಯಕ ಮುನಿರತ್ನ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರಾಜಕೀಯ ದ್ವೇಷಕ್ಕೆ ಒಂದು ವಿಧಾನಸಭಾ ಕ್ಷೇತ್ರವನ್ನು ಬಲಿ ತೆಗೆದುಕೊಳ್ಳಬಾರದು. ರಾಜಕೀಯ, ವೈಯಕ್ತಿಕ ದ್ವೇಷಕ್ಕೆ ಒಂದು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಬಾರದು" ಎಂದರು.
"ಒಂದು ಚುನಾವಣೆಯಲ್ಲಿ ಸೋತವರು ಮತ್ತೊಂದು ಚುನಾವಣೆ ತನಕ ಕಾಯುವುದು ಸಹಜ. ಆದರೆ, ಆರ್. ಆರ್. ನಗರದಲ್ಲಿ ನನ್ನ ವಿರುದ್ಧ ವೈಯಕ್ತಿಕ ಟೀಕೆ, ತೇಜೋವಧೆ ಮಾಡಿದ್ದು ಸರಿಯಲ್ಲ" ಎಂದು ಮುನಿರಾಜು ಗೌಡ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

"ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿದ್ದು ಬೇರೆಯ ವಿಚಾರ. ಆದರೆ, ವೈಯಕ್ತಿಕ ದ್ವೇಷಕ್ಕೆ ಕೋರ್ಟ್ ಮೆಟ್ಟಿಲೇರೋದು ಸರಿಯಲ್ಲ" ಎಂದು ಮುನಿರತ್ನ ಹೇಳಿದರು.
ಆರ್. ಆರ್. ನಗರದ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 2018ರ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಅವರ ವಿರುದ್ಧ ಸೋತಿದ್ದ ಬಿಜೆಪಿಯ ಮುನಿರಾಜು ಗೌಡ ಮುನಿರತ್ನ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ ಮುನಿರಾಜು ಗೌಡ ಅರ್ಜಿಯನ್ನು ವಜಾಗೊಳಿಸಿದೆ. ಆದ್ದರಿಂದ, ಆರ್. ಆರ್. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ಇದ್ದ ಅಡ್ಡಿ ನಿವಾರಣೆಯಾಗಿದೆ.












Click it and Unblock the Notifications