ಕಾಂಗ್ರೆಸ್ ಕಳುಹಿಸಿದ ದೋಸೆ ಇನ್ನೂ ನನಗೆ ತಲುಪಿಲ್ಲ: ತೇಜಸ್ವಿ ಸೂರ್ಯ
ಬೆಂಗಳೂರು, ಸೆಪ್ಟೆಂಬರ್ 12: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಈಗ ಕಾಂಗ್ರೆಸ್ ಕಳುಹಿಸಿದ ಪಾರ್ಸೆಲ್ ಸಿಗಲಿಲ್ಲ ಎಂದು ಹೇಳುವ ಮೂಲಕ ಮಸಾಲೆ ದೋಸೆಯ ಬಗೆಗಿನ ರಾಜಕೀಯ ಚರ್ಚೆ ಮುಂದುವರೆಸಿದ್ದಾರೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ಸರಿಯಾಗಿ ದೋಸೆಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
ತೇಜಸ್ವಿ ಸೂರ್ಯ ಭಾನುವಾರ ಮಾಡಿರುವ ಟ್ವೀಟ್‌ನಲ್ಲಿ ಕಾಂಗ್ರೆಸ್ ನಿನ್ನೆ ಪತ್ರಿಕಾಗೋಷ್ಠಿಯನ್ನು ನಡೆಸಿತು. ಅವರು ನನ್ನ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿದ್ದೇವೆ ಎಂದು ಹೇಳಿದರು. ಇಂದು 24 ಗಂಟೆಗಳಿಗಿಂತ ಹೆಚ್ಚು ಸಮಯವಾಗಿದೆ. ಆದರೆ ನನಗೆ ಇನ್ನೂ ಮಸಾಲೆ ದೋಸೆ ತಲುಪಿಲ್ಲ. ಇಲ್ಲೂ ಕಾಂಗ್ರಸ್‌ನವರು ಮೋಸ ಮಾಡಿದ್ದಾರೆ. ಸರಿಯಾಗಿ ದೋಸೆ ಪೂರೈಸಲು ಸಾಧ್ಯವಾಗದ ಅವರು ಉತ್ತಮ ಆಡಳಿತವನ್ನು ನೀಡುವ ಕನಸು ಕಾಣುತ್ತಾರೆ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ.
ಶನಿವಾರದಂದು ಕಾಂಗ್ರೆಸ್ ಕಾರ್ಯಕರ್ತರು ತೇಜಸ್ವಿ ಸೂರ್ಯ ಅವರಿಗೆ ನಗರದ ಜನಪ್ರಿಯ ರೆಸ್ಟೋರೆಂಟ್‌ಗಳಿಂದ 10 ವಿವಿಧ ದೋಸೆಗಳನ್ನು ಪ್ರತಿಭಟನಾರ್ಥವಾಗಿ ಕಳುಹಿಸುತ್ತಿದ್ದೇವೆ ಎಂದು ಹೇಳಿದ್ದರು. ಅವರು ರೆಸ್ಟೋರೆಂಟ್‌ಗಳ ಜನಪ್ರಿಯತೆಯ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ. ಆದರೆ, ಜನರ ಬಗ್ಗೆ ಅಲ್ಲ ಎಂದು ವಿರೋಧ ಪಕ್ಷ ಆರೋಪಿಸಿದೆ.

ಬೆಂಗಳೂರಿನ ಜನರು ಪ್ರವಾಹದಿಂದ ನರಳುತ್ತಿದ್ದಾಗ ಮಸಾಲೆ ದೋಸೆ ತಿನ್ನಲು ಹೋಗಿದ್ದಕ್ಕಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೊಳಗಾಗಿದ್ದರು. ಬೆಂಗಳೂರಿನ ಕೆಲವು ಭಾಗಗಳು ಭೀಕರ ಪ್ರವಾಹವನ್ನು ಎದುರಿಸುತ್ತಿರುವಾಗ ದೋಸೆ ಸವಿಯುತ್ತಾ ಅಡ್ಡಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತ್ತು. ಅವರ ನಿರ್ಲಕ್ಷ್ಯತನವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಜನಪ್ರಿಯ ರೆಸ್ಟೋರೆಂಟ್‌ಗಳಿಂದ ಹತ್ತು ವಿವಿಧ ದೋಸೆಗಳನ್ನು ತೇಜಸ್ವಿ ಸೂರ್ಯ ಅವರಿಗೆ ಕಳುಹಿಸಿ ಅವರು ಕೇವಲ ರೆಸ್ಟೋರೆಂಟ್‌ಗಳ ಜನಪ್ರಿಯತೆಯ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ ಹೊರತು ಜನರ ಬಗ್ಗೆ ಅಲ್ಲ ಎಂದು ಆರೋಪಿಸಿದ್ದರು.

ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರು 10 ದೋಸೆಗಳನ್ನು ಆರ್ಡರ್ ಮಾಡಿ ಮನೆ ಬಾಗಿಲಿಗೆ ತಲುಪಿಸುವ ಡಂಜೋ ಮೂಲಕ ಸಂಸದರ ಕಚೇರಿಗೆ ಕಳುಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಟ್ವೀಟ್ಟರ್‌ನಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿನ ತೇಜಸ್ವಿ ಸೂರ್ಯ ವಿರುದ್ಧ ಅವರ ಬೇಜವಾಬ್ದಾರಿ ನಡೆವಳಿಕೆಗಾಗಿ ಈ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರಿನ ಪ್ರಮುಖ ಹೋಟೆಲ್‌ಗಳಿಂದ ಅವರಿಗೆ 10 ವಿಭಿನ್ನ ದೋಸೆಗಳ ಪಾರ್ಸೆಲ್ ಕಳುಹಿಸಲಾಗಿದೆ. ಅವರು ಈ ಉಚಿತ ದೋಸೆಗಳನ್ನು ತಿನ್ನಲಿ. ಅವರು ಹೋಟೆಲ್‌ನ ಮಾರ್ಕೆಟಿಂಗ್ ಮಾಡುವುದು ಬಿಟ್ಟು ಅವರ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಲಿ ಎಂದು ಹೇಳಿದ್ದರು.












Click it and Unblock the Notifications