ಸಿಬಿಐ ರೇಡ್ ಕುರಿತು ಸಂಸದ ಡಿ.ಕೆ. ಸುರೇಶ್ ಹೇಳಿದ್ದೇನು?
ಬೆಂಗಳೂರು, ಅ. 05: ತಮ್ಮ ಹಾಗೂ ಸಹೋದರನ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿಯ ಕುರಿತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ಮೊದಲ ಬಾರಿ ಪ್ರತಿಕಕ್ರಿಯೆ ನೀಡಿದ್ದಾರೆ. ಇವತ್ತು ಬೆಳಗ್ಗೆಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ 15 ಕಡೆಗಳಲ್ಲಿ ಸಿಬಿಐ ಏಕಾಏಕಿ ದಾಳಿ ಮಾಡಿದೆ. ಅದರಲ್ಲಿ ಸಹೋದರ ಡಿ.ಕೆ. ಸುರೇಶ್ ಅವರ ನಿವಾಸವೂ ಕೂಡ ಒಂದು.
ರೇಡ್ ಬಳಿಕ ಇದೀಗ ಸಂಸದ ಡಿ.ಕೆ. ಸುರೇಶ್ ಅವರ ನಿವಾಸದಿಂದ ಸಿಬಿಐ ಅಧಿಕಾರಿಗಳು ತೆರಳಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಸುರೇಶ್ ಅವರು ಸಿಬಿಐ ದಾಳಿ ಕುರಿತು ಮಹತ್ವದ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ.
ಇಂದು ಮುಂಜಾನೆಯ ವೇಳೆಗೆ ನಮ್ಮ ಮನೆಯ ಮೇಲೆ ಸಿಬಿಐ ದಾಳಿ ನಡೆದಿದೆ. ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲೂ ನಮ್ಮ ಕಡೆಯಿಂದ ಸಂಪೂರ್ಣವಾದ ಸ್ಪಂದನೆ ಸಿಕ್ಕಿದೆ. ಮುಂದೆಯೂ ಸಹ ಸಿಗಲಿದೆ ಎಂದು ಸಂಸದ ಡಿ.ಕೆ. ಸುರೇಶ್ ಅವರು ಟ್ವೀಟ್‌ನಲ್ಲಿ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಬಂದ ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಾಗಲಿ ಮತ್ತು ಕುಗ್ಗುವುದಾಗಲಿ ದೂರದ ಮಾತು. ರಾಜಕೀಯವನ್ನು ರಾಜಕೀಯವಾಗಿ ಎದುರಿಸಲು ನಾವು ಸದಾ ಸಿದ್ದರಿದ್ದೇವೆ. ಈ ವಿಚಾರದಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸುರೇಶ್ ಅವರು ಮನವಿ ಮಾಡಿದ್ದಾರೆ.
ಈ ಎಲ್ಲಾ ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ. ಹಾಗಾಗಿ ಅಭಿಮಾನಿಗಳು ವಿಚಲಿತರಾಗುವುದು ಬೇಡ. ನಿಮ್ಮ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ ಎಂದು ಟ್ವಿಟರ್‌ನಲ್ಲಿ ಸಂಸದ ಡಿ.ಕೆ. ಸುರೇಶ್ ಅವರು ಹೇಳಿದ್ದಾರೆ.












Click it and Unblock the Notifications