ಮಗಳನ್ನು ಕೊಲ್ಲುವಾಗ ತಾಯಿ ಪ್ರೀತಿ ಎಲ್ಲಿ ಹೋಗಿತ್ತು?
ಬೆಂಗಳೂರು, ಸೆಪ್ಟೆಂಬರ್, 04 : ನಮ್ಮ ನಾಡಿನ ಎಲ್ಲಾ ಹೆಣ್ಣುಮಕ್ಕಳು ಮಕ್ಕಳಾಗಲಿ ಎಂದು ನೆನಪಾಗುವ ಎಲ್ಲಾ ದೇವರಿಗೆ ಹರಕೆ ಹೊರುತ್ತಾರೆ. ಮಕ್ಕಳಾಗದ ಹೆಣ್ಣು ಮಕ್ಕಳ ಮೂಕರೋಧನೆ ಕಂಡವರಿಗಷ್ಟೇ ಅರಿವಾಗೋದು. ಇವರಿಗೆ ಹಲವು ವರ್ಷಗಳ ನಂತರ ಮಗುವಾಗಿ ಬಿಟ್ಟರಂತೂ ಖುಷಿಗೆ ಪಾರವೇ ಇರೊಲ್ಲ.
ನಮ್ಮ ಜಗತ್ತಿನ ತಾಯಂದಿರು ಕೆಲವೊಮ್ಮೆ ತಾವು ಉಪವಾಸವಿದ್ದು ಮಕ್ಕಳ ಆರೈಕೆಯಲ್ಲಿ ತೊಡಗುತ್ತಾರೆ. ಆದರೆ ಇದಕ್ಕೆ ಅಪವಾದವಾಗಿ ಇಲ್ಲೊಬ್ಬ ತಾಯಿ ತನ್ನ ಮಗಳನ್ನೇ ಕೊಂದಿದ್ದಾಳೆ. ಪ್ರಿಯಕರನ ಜೊತೆಗಿನ ಅನೈತಿಕ ಸಂಬಂಧ ಮಗಳಿಗೆ ತಿಳಿಯಿತು ಎಂದು ಹೆದರಿ ಹೆತ್ತ ತಾಯಿ ತನ್ನ ಮಗುವನ್ನು ಮನೆ ಮುಂದಿನ ಸಂಪ್ ಗೆ ತಳ್ಳಿ ಹತ್ಯೆಗೈದಿದ್ದಾಳೆ.
ಬ್ಯಾಡರ ಹಳ್ಳಿ ಸಮೀಪದ ಮಾಗಡಿ ರಸ್ತೆಯ ಕೆಂಪೇಗೌಡ ನಗರದ ಎಂಟು ವರ್ಷದ ಸ್ಮಿತಾ ಕೊಲೆಯಾದ ಬಾಲಕಿ. ಕೊಲೆಮಾಡಿದ ಹೆತ್ತ ತಾಯಿಯೇ ಲತಾ. ಈಗಾಗಲೇ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.[ಭಾರತದ ಹೆಣ್ಣು ಮಕ್ಕಳ ವ್ಯಥೆ ಬಿಚ್ಚಿಡುವ ವರದಿಯಲ್ಲೇನಿದೆ?]

ಘಟನೆ ವಿವರ :
ಸ್ಮಿತಾ ಖಾಸಗಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಳು. ಲತಾಳ ಪತಿ ಮೂರು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದನ್ನೇ ನೆಪಮಾಡಿಕೊಂಡ ರಮೇಶ್ ಯಾವಾಗಲೂ ಮನೆಗೆ ಬರುತ್ತಿದ್ದನು. ಈತ ಮೂಲತಃ ಕುಣಿಗಲ್ ನವನಾಗಿದ್ದು ತಂದೆಯ ಆತ್ಮೀಯ ಸ್ನೇಹಿತ.
ಸದಾ ಮನೆಗೆ ಬರುವ ಈತ ತನ್ನ ತಾಯಿಯೊಂದಿಗೆ ತೀರಾ ಸಲಿಗೆಯಿಂದ ಇರುವುದನ್ನು ಸ್ಮಿತಾ ಗಮನಿಸಿದ್ದಾಳೆ. ಬಳಿಕ ಸ್ಮಿತಾ ತಾಯಿ ಲತಾಳ ಬಳಿ ಮನೆಗೆ ಬರುವ ರಮೇಶನ ಕುರಿತಾಗಿ ಕೇಳಿದ್ದಾಳೆ.
ಈ ತಾಯಿ ಮಾಡಿದ್ದೇನು?
ಮಗಳು ಕೇಳಿದ ಪ್ರಶ್ನೆಗೆ ಹೆದರಿದ ಈಕೆ ರಮೇಶ್ ಜೊತೆಗಿನ ಅನೈತಿಕ ಸಂಬಂಧ ತಿಳಿದು ಬಿಟ್ಟಿದೆ ಎಂಬ ಭಯದಲ್ಲಿ ಸೆಪ್ಟೆಂಬರ್ 1 ರ ಮಂಗಳವಾರ ಮನೆಯ ಮುಂದಿನ ಸಂಪ್ ಗೆ ತಳ್ಳಿ ಕೊಲೆ ಮಾಡಿದ್ದಾಳೆ.
ಬಳಿಕ ತಾವರೆಕೆರೆ ಪೊಲೀಸ್ ಬಳ ಹೋಗಿ ಸ್ಮಿತಾ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾಳೆ. ಬಳಿಕ ಈಕೆ ಸೆಪ್ಟೆಂಬರ್ 2ರ ಬುಧವಾರ ತನ್ನ ಮಗಳು ಸಂಪ್ ಗೆ ಬಿದ್ದು ಸತ್ತು ಹೋಗಿದ್ದಾಳೆ ಎಂದು ಕೂಗಿಕೊಂಡಿದ್ದಾಳೆ.
ಸಾವಿನ ಮಾಹಿತಿ ತಿಳಿದ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ನೆರೆಹೊರೆಯವರ ಬಳಿ ಲತಾಳ ಕುರಿತಾಗಿ ವಿಚಾರಿಸಿದಾಗ ರಮೇಶ್ ಮತ್ತು ಲತಾಳ ಅನೈತಿಕ ಸಂಬಂಧ ಬಯಲಾಗಿದೆ. ಅಲ್ಲದೇ ರಮೇಶನಿಗೆ ಹೆಂಡತಿ ಮತ್ತು ಮೂವರು ಮಕ್ಕಳಿರುವುದು ತನಿಖೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.












Click it and Unblock the Notifications