BMTC ಪ್ರಯಾಣಿಕರಿಗೆ ಸಿಹಿ ಸುದ್ದಿ: 'ನಿಮ್ಮಬಸ್ ಆ್ಯಪ್'ಗೆ ಬಿಡುಗಡೆಯ ಭಾಗ್ಯ, ಯಾವಾಗ ತಿಳಿಯಿರಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಪ್ರಯಾಣಿಕ ಸ್ನೇಹಿ ಬಹು ನಿರೀಕ್ಷಿತ 'ನಿಮ್ಮ ಬಸ್ ಆ್ಯಪ್' (NIMMBUS) ಬಿಡುಗಡೆಯ ಯಾವಾಗ ಎಂಬುದಕ್ಕೆ ಉತ್ತರ ದೊರೆತಿದೆ.
ಬೆಂಗಳೂರು, ಮಾರ್ಚ್ 09: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಪ್ರಯಾಣಿಕ ಸ್ನೇಹಿ ಬಹು ನಿರೀಕ್ಷಿತ 'ನಿಮ್ಮ ಬಸ್ ಆ್ಯಪ್' (NIMMBUS) ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿಗರ ಅಚ್ಚುಮೆಚ್ಚಿನ ಸಾರಿಗೆ ಪೈಕಿ ಬಿಎಂಟಿಸಿಯೂ ಹೌದು. ಬಿಎಂಟಿಸಿ ನಿಗಮವು ಬಸ್ ಎಲ್ಲಿದೇ ಎಂದು ತಿಳಿಸುವ, ಟ್ರ್ಯಾಕ್ ಮಾಡಲು ಸಹಾಯವಾಗುವ ಈ ಮೊಬೈಲ್ 'ನಿಮ್ಮಬಸ್' ಅಪ್ಲಿಕೇಷನ್ ಅನ್ನು ಮುಂದಿನ ವಾರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ಐಒಸ್ ಮತ್ತು ಆಂಡ್ರಾಯ್ಡ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುವಂತೆ ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಈ ಅಪ್ಲಿಕೇಷನ್ ಬಿಡುಗಡೆಗಾಗಿ ಹಲವು ದಿನಾಂಕ ನೀಡಲಾಗಿತ್ತು. ಆದರೆ ಅಂದುಕೊಂಡಂತೆ ಆಗಿರಲಿಲ್ಲ.

ಇದೀಗ ಶೀಘ್ರದಲ್ಲೇ ಪ್ರಯಾಣಿಕರಿಗೆ ಆ್ಯಪ್ ಲಭ್ಯವಾಗಲಿದೆ. ಈ ಬಗ್ಗೆ ನ್ಯೂಸ್9 ನೊಂದಿಗೆ ಮಾತನಾಡಿದ ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನದ ನಿರ್ದೇಶಕ ಸೂರ್ಯ ಸೇನ್, ಸದ್ಯ ಬೀಟಾ ಪರೀಕ್ಷೆ ನಡೆಯುತ್ತಿದೆ. ಪ್ರಸ್ತುತ ಶೇಕಡಾ 90 ರಷ್ಟು ನಿಖರತೆಯನ್ನು ಪಡೆಯುತ್ತಿದ್ದೇವೆ. ನಾವು ಬಹುಶಃ ಇನ್ನೊಂದು ವಾರದ ಸಮಯದಲ್ಲಿ NIMMBUS ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತೇವೆ ಎಂದರು.
ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ದಿನಗಳಷ್ಟೇ ಬಾಕಿ ಇದೆ. ಅದರಂತೆ ಭಾರತೀಯ ಚುನಾವಣಾ ಆಯೋಗದ (ECI) ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನಲೆ ಮಾರ್ಚ್ 8 ರ ಬುಧವಾರದಂದು ನಡೆಯಬೇಕಿದ್ದ NIMMBUS ಆ್ಯಪ್ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳು ಮೂರು ದಿನಗಳ ಕರ್ನಾಟಕದಲ್ಲೇ ಚುನಾವಣೆ ಕಾರ್ಯ ಸಂಬಂಧ ಉಳಿದುಕೊಳ್ಳಲಿದ್ದಾರೆ.ಅವರು ತೆರಳಿ ಬಳಿಕವೇ NIMMBUS ಆ್ಯಪ್ ಬಿಡುಗಡೆ ಮಾಡುತ್ತೇವೆ. ಆದರೆ ದಿನಾಂಕ ಬಗ್ಗೆ ಅಂತಿಮ ಆಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿವಿಧ ಕಾರಣದಿಂದ ಬಿಡುಗಡೆ ಮುಂದೂಡಿಕೆ
ಈಗಾಗಲೇ ನಿಗಮವು ಕಳೆದ ಎರಡು-ಮೂರು ತಿಂಗಳಿಂದ ಬಿಎಂಟಿಸಿ ಎಲ್ಲಾ ಬಸ್‌ಗಳಲ್ಲಿ ಪ್ರಮುಖ ಡಿವೈಸ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದ್ದು, ಪೂರ್ಣಗೊಂಡಿದೆ. ಎಲೆಕ್ಟ್ರಿಕ್ ಬಸ್, ಹೊಸ ಬಸ್‌ಗಳಿಗೂ ಸೇರಿದಂತೆ ಐದು ಸಾವಿರ ಬಸ್‌ಗಳಿಗೆ ಸಾಧನ ಅಳವಡಿಸಲಾಗಿದೆ. ನಿಗಮ ಒಟ್ಟು ಆರು ಬಸ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಈ ಹಿಂದೆ ಡಿಸೆಂಬರ್ 13ರಂದೇ ಆ್ಯಪ್ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಅದೇ ತಿಂಗಳ 23ಕ್ಕೆ ಮುಂದೂಡಿಕೆ ಆಯಿತು.
ನಂತರ ಇದೇ ತಿಂಗಳ ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬಿಡುಗಡೆಗೆ ಯೋಜಿಸಲಾಗಿತ್ತು. ಆದರೆ ಅನಿವಾರ್ಯವಾಗಿ ಅದು ಸಹ ಆಗಿಲಿಲ್ಲ.
ಇದೀಗ ಸಮಯ ಕೂಡಿ ಬಂದಿದ್ದು, ಇನ್ನೊಂದು ವಾರದಲ್ಲಿ ನಿಮ್ಮಬಸ್ ಅಪ್ಲಿಕೇಷನ್ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳಲಿದೆ. ಬಿಎಂಟಿಸಿ ಬಸ್ಗಳ ಕ್ಷಣಕ್ಷಣದ ಸಂಚಾರ ವಿವರ (Real-time tracking) ಇದರಿಂದ ಲಭ್ಯವಾಗಲಿದೆ. ಅದರ ಜೊತೆಗೆ ತುರ್ತು ಪರಿಸ್ಥಿತಿಯ ವೇಳೆ ಗಮನ ಸೆಳೆಯಲು ಎಸ್ಒಎಸ್ (SOS) ಎಚ್ಚರಿಕೆಯ ಸೌಲಭ್ಯವೂ ಲಭ್ಯವಿದೆ. ಪ್ರಯಾಣಿಕರು ಮೊಬೈಲ್ ನಂಬರ್/ಇಮೇಲ್ ಮೂಲಕ ಅಪ್ಲಿಕೇಷನ್ ಅನ್ನು ಬಳಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.












Click it and Unblock the Notifications