25 ವರ್ಷದಲ್ಲಿ 100 ಕ್ಕೂ ಹೆಚ್ಚು ಕಳ್ಳತನ ಮಾಡಿ ದಾಖಲೆ ಬರೆದ 'ಮೋರಿ'ಕಾಂತ!
ಬೆಂಗಳೂರು, ಡಿ. 14: ದಾಖಲೆ ಬರೆಯೋದಕ್ಕೆ ಯಾವ ಕ್ಷೇತ್ರವಾದರೇನು ಅಲ್ಲವೇ? ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ಕಳೆದ 25 ವರ್ಷದಿಂದ ನೂರಕ್ಕೂ ಹೆಚ್ಚು ಕಳ್ಳತನ ಮಾಡಿ ದಾಖಲೆ ನಿರ್ಮಿಸಿದ್ದಾನೆ! ಮತ್ತೆ ಮನೆಯೊಂದರಲ್ಲಿ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಳ್ಳತನದಲ್ಲಿ ಸೆಂಚುರಿ ಬಾರಿಸಿರುವ ಕಳ್ಳನ ಕಹಾನಿ ಇಲ್ಲಿದೆ ನೋಡಿ.
ಆತನ ಹೆಸರು ಮೋರಿ ಕಾಂತ. ನೋಡೋಕೆ ಭಿಕ್ಷುಕನ ತರ ಕಾಣ್ತಾನೆ. ಆದರೆ ಈತ ಕಣ್ಣು ಹಾಕಿದ್ರೆ ಎರಡು ದಿನದಲ್ಲಿ ಕಳ್ಳತನ ಮಾಡದೇ ನಿದ್ದೆ ಮಾಡಲ್ಲ. ಅಂದಹಾಗೆ ಈತ ಈವರೆಗೂ ಸುಮಾರು 20 ಸಲ ಜೈಲಿಗೆ ಹೋಗಿ ಬಂದಿದ್ದಾನೆ. ಬರೋಬ್ಬರಿ 25 ವರ್ಷದಿಂದ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾನೆ. ಇದೀಗ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಬ್ಯಾಡರಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನ ಇತಿಹಾಸ ನೋಡಿ ಪೋಲೀಸರೇ ಸುಸ್ತಾಗಿದ್ದಾರೆ.
ಮೋರಿಕಾಂತನ ಅಸಲಿ ಹೆಸರು ಕಾಂತರಾಜ್. ಯಾವಾಗಲೂ ಮೋರಿಗಳ ಸಮೀಪವೇ ಠಿಕಾಣಿ ಹೂಡುತ್ತಾನೆ. ಹೀಗಾಗಿ ಮೋರಿ ಕಾಂತ ಅಂತಲೇ ಫೇಮಸ್ ಅಗಿದ್ದಾನೆ. 1998 ರಲ್ಲಿ ಒಂಟಿಯಾಗಿರುವ ಐಶಾರಾಮಿ ಮನೆಗಳನ್ನು ನೋಡಿ ಕನ್ನ ಹಾಕುವುದನ್ನು ಕಲಿತ. ಅಂದಿನಿಂದ ಈವರೆಗೂ ಸುಮಾರು 100 ಕ್ಕೂ ಹೆಚ್ಚು ಮನೆಗಳ ಕಳ್ಳತನ ಮಾಡಿದ್ದಾನೆ. ಇಪ್ಪತ್ತು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 30 ಕ್ಕೂ ಹೆಚ್ಚು ಮನೆ ಗಳ ಬೀಗ ಹೊಡೆದು ಕಳ್ಳತನ ಮಾಡಿದ್ದಾನೆ.

ಒನ್ ಮ್ಯಾನ್ ಆರ್ಮಿ:
ಸಾಮಾನ್ಯವಾಗಿ ಗುಂಪು ಕೂಡಿ ಕಳ್ಳತನ ಮಾಡಿದರೆ ಪೊಲೀಸರಿಗೆ ಬೇಗ ಸಿಕ್ಕಿ ಬೀಳುತ್ತಾರೆ. ಒಂದು ಗುಂಪಿನ ಸದಸ್ಯರಲ್ಲಿ ಒಡಕು ಮೂಡಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಇಲ್ಲವೇ ಒಬ್ಬರಲ್ಲಾ ಒಬ್ಬರು ಏನಾದರೂ ಸಾಕ್ಷಿ ಬಿಟ್ಟು ಹೋಗುತ್ತಾರೆ. ಅದರೆ ಒಂಟಿ ಕಳ್ಳರನ್ನು ಹಿಡಿಯುವುದು ಪೊಲೀಸರಿಗೂ ಕಷ್ಟ. ಇನ್ನೂ ಈ ಮೋರಿ ಕಾಂತ ಕೂಡ ಒನ್ ಮ್ಯಾನ್ ಆರ್ಮಿ. ಯಾರನ್ನೂ ನಂಬಲ್ಲ. ಒಬ್ಬನೇ ತನ್ನ ಕೈಚಳಕ ತೋರುತ್ತಾನೆ. ಮೊಬೈಲ್ ಕೂಡ ಬಳಸುವುದಿಲ್ಲ. ಹೀಗಾಗಿ ಈತನನ್ನು ಹಿಡಿಯುವುದು ಪೊಲೀಸರಿಗೂ ದೊಡ್ಡ ತಲೆನೋವು. ಒನ್ ಮ್ಯಾನ್ ಕಳ್ಳನ ಇನ್ನೊಂದು ರೋಚಕ ಸಂಗತಿ ಇಲ್ಲಿದೆ ನೋಡಿ.
ಬಾಗಿಲು,ಕಿಟಕಿ ಮುರಿಯಲ್ಲ:
ಕಳ್ಳತನದಲ್ಲಿ ಸರ್ವ ಅನುಭವ ಪಡೆದಿರುವ ಈ ಮೋರಿ ಕಾಂತ ಯಾರ ಮನೆ ಬಾಗಿಲೂ ಮುರಿಯುವುದಿಲ್ಲ. ಕಿಟಕಿ ಗಾಜು ಹೊಡೆಯುವುದಿಲ್ಲ. ಸ್ಕ್ರೂ ಡ್ರೈವರ್ ಹಾಗೂ ಒಂದು ಕಟ್ಟಿಂಗ್ ಪ್ಲೇಯರ್ ಇದ್ದರೆ ಸಾಕು ಸುಲಭವಾಗಿ ಡೋರ್ ಓಪನ್ ಮಾಡ್ತಾನೆ. ಈವರೆಗೂ ಸುಮಾರು 100 ಕ್ಕೂ ಹೆಚ್ಚು ಕಳ್ಳತನ ಮಾಡಿದ್ದಾನೆ. ಅದರಲ್ಲೂ ಐಶರಾಮಿ ಮನೆಗಳಿಗೆ ಕನ್ನ ಹಾಕಿದ್ದಾನೆ. ಎಲ್ಲೂ ಡೋರ್ ಮುರಿದಿಲ್ಲ. ಕಿಟಕಿ ಬಾಗಿಲು ಹೊಡೆದಿಲ್ಲ ಎಂಬುದು ಈತನ ಕುಖ್ಯಾತಿ. ಅನೇಕ ಪ್ರಕರಣಗಳಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ಸುಮಾರು ಇಪ್ಪತ್ತು ಸಲ ಜೈಲಿಗೆ ಹೋಗಿದ್ದಾನೆ. ಇಷ್ಟಾಗಿಯೂ ಕಳ್ಳತನ ಮಾಡೋದು ಬಿಟ್ಟಿಲ್ಲ.
ಅರೆಸ್ಟ ಮಾಡುವ ಇನ್‌ಸ್ಪೆಕ್ಟರ್ ಲಿಮಿಟ್ಸ್ ನಲ್ಲಿ ಕಳ್ಳತನ:
ಇನ್ನೂ ಈತ ಬೆಂಗಳೂರು ನೆಚ್ಚಿ ಕೂರಲ್ಲ. ಬೆಂಗಳೂರು ಗ್ರಾಮಾಂತರ, ಕುಣಿಗಲ್, ರಾಮನಗರ, ಶ್ರೀರಂಗಪಟ್ಟಣ, ಮಂಡ್ಯ, ಹಾಸನ ಮೈಸೂರು ಸೇರಿದಂತೆ ಮೈಸೂರು ಭಾಗದ ಒಂದು ಜಿಲ್ಲೆಯನ್ನೂ ಬಿಟ್ಟಿಲ್ಲ. ಈ ಮೋರಿ ಕಾಂತನ ಕಳ್ಳತನ ಚರಿತ್ರೆ ನೋಡಿ ಪೊಲೀಸರೇ ದಂಗಾಗಿದ್ದಾರೆ. ಯಾವುದೇ ಕಳ್ಳತನ ಆದರೂ ಮೋರಿ ಕಾಂತನ ಬಗ್ಗೆ ಪೊಲೀಸರು ಅನುಮಾನ ಪಡುತ್ತಾರೆ. ಈತನ ಇನ್ನೊಂದು ಗುಣ ಅಂದರೆ, ಯಾರಾದರೂ ಪೊಲೀಸರು ಬಂಧಿಸಿದರೆ, ಸಾಮಾನ್ಯವಾಗಿ ಕಳ್ಳರು ಮತ್ತೆ ಆ ಠಾಣೆ ವ್ಯಾಪ್ತಿಗೆ ಕಾಲೂ ಇಡಲ್ಲ. ಆದರೆ, ಮೋರಿ ಕಾಂತ ಯಾವ ಇನ್‌ಸ್ಪೆಕ್ಟರ್ ಬಂಧಿಸುತ್ತಾರೋ ಅದೇ ಅಧಿಕಾರಿ ಲಿಮಿಟ್ಸ್ ನಲ್ಲಿ ಕಳ್ಳತನ ಮಾಡುತ್ತಾನೆ.
ಬ್ಯಾಡರಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದ:
ಮನೆಯೊಂದರಲ್ಲಿ ನೂರು ಗ್ರಾಂ ಚಿನ್ನಾಭರಣ ಕದ್ದ ಪ್ರಕರಣದಲ್ಲಿ ಬ್ಯಾಡರಹಳ್ಳಿ ಪೊಲೀಸರು ಮೋರಿಕಾಂತನನ್ನು ಬಂಧಿಸಿದ್ದಾರೆ. ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದ ಮೋರಿಕಾಂತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಮತ್ತೊಂದು ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಜೈಲಿನಿಂದ ಹೊರ ಬಂದು ಮತ್ತೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಈತನನ್ನು ಬಂಧಿಸಿ ಬ್ಯಾಡರಹಳ್ಳಿ ಪೊಲೀಸರು ಮತ್ತೆ ಜೈಲಿಗೆ ಕಳುಹಿಸಿದ್ದಾರೆ. ಮತ್ತೆ ಯಾವಾಗ ಎಂಟ್ರಿ ಕೊಡ್ತಾನೋ ಕಾದು ನೋಡಬೇಕು.












Click it and Unblock the Notifications