ಕೊಳ್ಳೇಗಾಲ ಹೆದ್ದಾರಿಗೆ 2667 ಮರ ಮಾರಣಹೋಮ
ಬೆಂಗಳೂರು, ಮೇ 19: ನೆರೆಯ ಕೇರಳಕ್ಕೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿಗಾಗಿ (NH 212) ಅಂದಾಜು 2667 ಮರಗಳ ಮಾರಣಹೋಮ ನಡೆಯಲಿದೆ. ಈಗಾಗಲೇ, 1,800 ಮರಗಳನ್ನು ಕಡಿದುಹಾಕಲಾಗಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಬೆಳೆದುನಿಂತ 2,667 ಮರತಗಳನ್ನು ಕಡಿಯಬೇಕೆಂದು ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಉಸ್ತುವಾರಿಯಲ್ಲಿ ಮತಗಳನ್ನು ಕಡಿಯಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ಅವರು ತಿಳಿಸಿದ್ದಾರೆ.
2013ರ ಡಿಸೆಂಬರ್ 31ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಯೋಜನೆಗೆ ಅನುಮತಿ ನೀಡಿದೆ. 489.29 ಕೋಟಿ ರೂ ವೆಚ್ಚದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಕೇರಳದಿಂದ ಕೊಳ್ಳೇಗಾಲದವರೆಗಿನ ಈ ರಸ್ತೆಯನ್ನು ದ್ವಿಪಥ ಮತ್ತು ಚತುಷ್ಫಥವನ್ನಾಗಿ ನಿರ್ಮಿಸಲಾಗುವುದು.

ಮರಗಳನ್ನು ಕಡಿಯದೆಯೇ ರಸ್ತೆಯನ್ನು ಅಗಲೀಕರಣ ಮಾಡುವುದು ದುಸ್ಸಾಧ್ಯ. ನಾನೂ ಸಹ ಮರ ಕಡಿಯುವುದನ್ನು ವಿರೋಧಿಸುತ್ತೇನೆ. ಆದರೆ ನಾನು ಅಸಹಾಯಕ. ಹೆದ್ದಾರಿ ಮಿರ್ಮಿಸಲು 2,667 ಮರಗಳನ್ನು ಕಡಿಯಲೇಬೇಕಿದೆ. ಇದು ಹೆಚ್ಚು ಸಂಚಾರವಿರುವ ರಸ್ತೆಯಾಗಿದೆ. ಅಪಘಾತ ವಲಯವೂ ಆಗಿದೆ.
ಕಡಿದುಹಾಕಲಾದ ಮರಗಳನ್ನು ತೆರವು ಗೊಳಿಸಿದ ಬಳಿಕವಷ್ಟೇ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು. ಮರಗಳನ್ನು ಕಡಿಯಲು ಮತ್ತು ಕಡಿದ ಮರಗಳಿಗೆ ಪರ್ಯಾಯವಾಗಿ ಹೊಸ ಸಸಿಗಳನ್ನು ನೆಡಲು ಕರ್ನಾಟಕ ಅರಣ್ಯ ಇಲಾಖೆಗೆ ಅಗತ್ಯ ಹಣಕಾಸನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ, ನಂಜನಗೂಡು, ಮೈಸೂರು ಗ್ರಾಮಾಂತರ, ಮೈಸೂರು ನಗರ ಮತ್ತು ಟಿ ನರಸೀಪುರ ಭಾಗಗಳಲ್ಲಿ ಯೋಜನೆಗಾಗಿ ಸುಮಾರು 2,78,216 ಚದರಡಿ ಭೂಸ್ವಾಧೀನವಾಗಿದೆ.
NH 212 ಹೆದ್ದಾರಿಯು 131 ಕಿಮೀ ಉದ್ದವಾಗಿದ್ದು, ಬಂಡೀಪುರ ಅರಣ್ಯದಲ್ಲಿ ಉಟ್ಟಂಬಳ್ಳಿ ಬಳಿ ಮೊಳೆಹೊಳೆಯಿಂದ ಆರಂಭವಾಗಿ ಕೊಯಿಕ್ಕೋಡ್ ಬಳಿ ಅಂತ್ಯವಾಗುತ್ತದೆ. ಇದೇ ಯೋಜನೆಯ ಅಂಗವಾಗಿ ನಂಜನಗೂಡು ಬಳಿ ಕಬಿನಿ ನದಿಗೆ ಅಡ್ಡಲಾಗಿ ದೊಡ್ಡ ಸೇತುವೆ ನಿರ್ಮಾಣವೂ ಆಗಲಿದೆ.












Click it and Unblock the Notifications